ಬೆಂಗಳೂರು:  ಕಳೆದ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 24 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿ ಜಿಲ್ಲೆಯಲ್ಲಿ‌ ನಡೆದ ದುರ್ಘಟನೆ ‌ಬಗ್ಗೆ ಮಾಹಿತಿ ಪಡೆದಿದ್ದಾರೆ.

ಬಳಿಕ ತಮ್ಮ ನಿವಾಸಕ್ಕೆ ಬರುವಂತೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್​ಗೆ ಸಿಎಂ ಬುಲಾವ್ ನೀಡಿದರು. ತಮ್ಮ ನಿವಾಸದಲ್ಲಿ ಸುಧಾಕರ್‌ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಜೊತೆಗೆ  ಯಡಿಯೂರಪ್ಪ ಸಭೆ ನಡೆಸಿದ್ರು. ಈ ವೇಳೆ ಅವರು, ಆಕ್ಸಿಜನ್ ಕೊರತೆ ಏಕೆ? ಏನು ಮಾಡುತ್ತಿದ್ದೀರಿ ನೀವು? ಎಂದು ಸುಧಾಕರ್​ಗೆ ಪ್ರಶ್ನಿಸಿದ್ರು. ಆಕ್ಸಿಜನ್ ಸಿಲಿಂಡರ್ ಬಗ್ಗೆ ಅಂಕಿ ಅಂಶ ಕೊಡಿ ಎಂದಾಗ ಸುಧಾಕರ್ ತಬ್ಬಿಬ್ಬಾದರು ಎನ್ನಲಾಗಿದೆ.

ತಕ್ಷಣವೇ ಚಾಮರಾಜನಗರ ಸೇರಿದಂತೆ ರಾಜ್ಯದ ಎಲ್ಲಾ ಆಕ್ಸಿಜನ್ ಸಮಸ್ಯೆಗಳು ಸಂಜೆಯೊಳಗೆ ಬಗೆಹರಿಯಬೇಕು. ಇಲ್ಲವಾದ್ರೆ, ನಡೆಯುವುದೇ ಬೇರೆ.. ಎಂದು‌ ಸುಧಾಕರ್‌ಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ ಅಂತ ತಿಳಿದುಬಂದಿದೆ.

ಇನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್​ ಕುಮಾರ್​ ಜಿಲ್ಲೆಯತ್ತ ಹೊರಟಿದ್ದಾರೆ. ಮಧ್ಯಾಹ್ನದ ವೇಳೆಗೆ ಚಾಮರಾಜನಗರಕ್ಕೆ ತಲುಪಿ, ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಲು ಮುಂದಾಗಿದ್ದಾರೆ.

 

The post ಸಂಜೆಯೊಳಗೆ ಆಕ್ಸಿಜನ್ ಸಮಸ್ಯೆ ಬಗೆಹಿರಿಯಬೇಕು.. ಇಲ್ಲವಾದ್ರೆ ನಡೆಯೋದೇ ಬೇರೆ: ಸುಧಾಕರ್​ಗೆ ಸಿಎಂ ಖಡಕ್ ಸೂಚನೆ appeared first on News First Kannada.

Source: newsfirstlive.com

Source link