ಸಂಜೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರ.. ಮನೆಗಳಿಗೆ ನುಗ್ಗಿದ ನೀರು ಜನರ ನಿದ್ದೆ ಕಸಿದ ವರುಣ


ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಿಲಿಕನ್​ ಸಿಟಿ ಮಂದಿಯನ್ನ ನಿರಂತರ ಕಾಡುತ್ತಿದ್ದ ಮಳೆ, ನಿನ್ನೆ ಬೆಳಗ್ಗೆ ತಣ್ಣಗಾಗುವ ಸೂಚನೆ ನೀಡಿತ್ತು. ಆದ್ರೆ ಸಂಜೆಯ ಹೊತ್ತಿಗೆ ಮತ್ತೆ ಆರ್ಭಟ ಶುರು ಮಾಡಿ, ಅವಾಂತರ ಸೃಷ್ಟಿಸಿದೆ. ಮನೆ, ಅಂಗಡಿಗಳಿಗೆ ನೀರು ನುಗ್ಗಿ, ಜನರ ನಿದ್ರೆಯನ್ನೇ ಕಸಿದಿದೆ.

ನಿರಂತರವಾಗಿ ಸುರಿಯುತ್ತಿರೋ ಮಳೆ. ಮಳೆಯಿಂದಾಗಿ ಕೆರೆಯಂತಾದ ರಸ್ತೆಗಳು. ದಿನ ಒಂದಿಲ್ಲೊಂದು ಅವಾಂತರ. ರಾಂಗ್​ಟೈಮ್​​ ಮಳೆ ಸಿಲಿಕಾನ್​​ ಸಿಟಿ ಬೆಂಗಳೂರನ್ನ ಬಿಟ್ಟು ಬಿಡದೆ ಕಾಡುತ್ತಿದೆ.

ಒಂದು ವಾರದಿಂದ ಮಳೆರಾಯನ ಕಾಟಕ್ಕೆ ಜನ ಬೇಸತ್ತು ಹೋಗಿದ್ರು. ನಿನ್ನೆ ಬೆಳಗ್ಗೆ ತಾನೆ ಬಿಸಿಲು ನೋಡಿ ನಿಟ್ಟುಸಿರು ಬಿಟ್ಟಿದ್ರು, ಆದ್ರೆ ಸಂಜೆಯ ಹೊತ್ತಿಗೆ ರೀ ಎಂಟ್ರಿ ಕೊಟ್ಟು ಮಳೆರಾಯ ರಾತ್ರಿಯಿಡಿ ಜನ ಜಾಗರಣೆ ಮಾಡುವಂತೆ ಮಾಡಿದ್ದಾನೆ.

ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಪೀಣ್ಯ, 8ನೇ ಮೈಲಿ, ವಿದ್ಯಾರಣ್ಯಪುರಣ, ಯಲಹಂಕದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಪೀಣ್ಯಾ, ಎಂಟನೇ ಮೈಲಿಯಲ್ಲಿ ಮುಖ್ಯ ರಸ್ತೆಗಳೇ ಜಲಾವೃತವಾಗಿದ್ವು. ಮೊಣಕಾಲು ಮಟ್ಟದವರೆಗೆ ನೀರು ರಸ್ತೆ ಮೇಲೆ ಬಂದಿತ್ತು. ಹೀಗಾಗಿ ಕೆಲ ತಾಸುಗಳ ಕಾಲ ವಾಹನ ಸವಾರರು ಕಿರಿ ಕಿರಿ ಅನುಭವಿಸಿದ್ರು. ಮತ್ತೊಂದ್ಕಡೆ ಯಶವಂತಪುರ ರೈಲ್ವೆ ಸ್ಟೇಷನ್ ಬಳಿ ಕಂಪೌಂಡ್ ಕುಸಿದು ಬಿದ್ದು ಎರಡು ಬೈಕ್ ಮತ್ತು ಆಟೋ ಜಖಂ ಆಗಿದ್ವು.

ಮನೆ,ಅಂಗಡಿಗೆ ನುಗ್ಗಿದ ನೀರು, ನಿವಾಸಿಗಳ ಪರದಾಟ
ಬೆಂಗಳೂರಿನ ವಿದ್ಯಾರಣ್ಯಪುರದ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ರು. ಅಲ್ಲದೆ ವೆಂಕಟಸ್ವಾಮಪ್ಪ ಲೇಔಟ್​ನ ಕೆಲ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿ ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು. ಕಳೆದ ಕೆಲ ದಿನಗಳಿಂದ ಇದೇ ಪರಿಸ್ಥಿತಿಯಿದ್ದು, ಅಧಿಕಾರಿಗಳ ಮಾತ್ರ ಇತ್ತ ಗಮನ ಹರಿಸಲ್ಲ ಅಂತ ಜನ ಆಕ್ರೋಶ ಹೊರಹಾಕಿದ್ರು.

ಇನ್ನು ಯಲಹಂಕದಲ್ಲಿಯೂ ವರುಣನ ಆರ್ಭಟದಿಂದ ಫ್ಲೈ ಓವರ್ ಕೆಳಗಡೆ ಸಂಪೂರ್ಣ ನೀರು ನಿಂತಿತ್ತು. ನೀರು ನಿಂತಿರೋದ್ರಿಂದ ಫ್ಲೈ ಓವರ್ ಕೆಳಗಡೆ ಐಬಿಎಂಟಿಸಿ ಬಸ್ ಸೇರಿ ಕೆಲ ವಾಹನಗಳು ಸಿಕ್ಕಿಬಿದ್ದಿದ್ವು.

ಒಟ್ಟಾರೆ ನಿನ್ನೆ ಸುರಿದ ಮಳೆ ಸಿಲಿಕಾನ್​ ಸಿಟಿ ಮಂದಿಯನ್ನ ಇನ್ನಿಲ್ಲದಂತೆ ಕಾಡಿದೆ. ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡುವಂತಾಗಿದೆ. ಆದ್ರೆ ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ನೀಡುತ್ತಿರುವ ಕಾರಣ ಜನರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಇನ್ನೂ ಎರಡು ಮೂರು ದಿನ ಮಳೆ ಮುಂದುವರೆಯೋ ಸಾಧ್ಯತೆ ಇದೆ. ಹೀಗಾಗಿ ಜನರು ಆದಷ್ಟು ಎಚ್ಚರಿಕೆಯಿಂದಿದ್ರೆ ಒಳಿತು.

News First Live Kannada


Leave a Reply

Your email address will not be published. Required fields are marked *