ಸಂಜೆ 4ಕ್ಕೆ ಪೇಸಿಎಂ ಪೋಸ್ಟ್​ ಅಂಟಿಸಲು ಕಾಂಗ್ರೆಸ್ ನಾಯಕರ ನಿರ್ಧಾರ: ನಾನೇ ಹಚ್ತೀನಿ ಎಂದ ಡಿಕೆಶಿ | Congress Decides to Put PayCM Poster in Bengaluru DK Shivakumar Siddaramaih will also participate


ಪೇಸಿಎಂ ಪೋಸ್ಟರ್ ಅಂಟಿಸಲು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.

ಸಂಜೆ 4ಕ್ಕೆ ಪೇಸಿಎಂ ಪೋಸ್ಟ್​ ಅಂಟಿಸಲು ಕಾಂಗ್ರೆಸ್ ನಾಯಕರ ನಿರ್ಧಾರ: ನಾನೇ ಹಚ್ತೀನಿ ಎಂದ ಡಿಕೆಶಿ

ಬೆಂಗಳೂರಿನ ವಿವಿಧೆಡೆ ರಾರಾಜಿಸಿದ್ದ ಪೇಸಿಎಂ ಪೋಸ್ಟರ್​

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ನಡೆಸುತ್ತಿರುವ ‘ಪೇಸಿಎಂ’ ಅಭಿಯಾನವು ನಿಲ್ಲುವ ಬದಲು ಮತ್ತಷ್ಟು ಉಗ್ರ ಸ್ವರೂಪ ತಾಳುವ ಸಾಧ್ಯತೆ ಕಂಡುಬಂದಿದೆ. ಪೋಸ್ಟರ್ ಅಂಟಿಸುತ್ತಿದ್ದ ಕಾರ್ಯಕರ್ತರನ್ನು ಹುಡುಕಿ ಪೊಲೀಸರು ಬಂಧಿಸುತ್ತಿರುವ ಹಿನ್ನೆಲೆಯಲ್ಲಿ ತಾವೇ ಬಹಿರಂಗವಾಗಿ ಪೋಸ್ಟರ್​ ಹಚ್ಚಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಸಂಜೆ 4ಕ್ಕೆ ಎಲ್ಲ ಶಾಸಕರೂ ಕೆಪಿಸಿಸಿ ಕಚೇರಿಯಲ್ಲಿ ಹಾಜರಿರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಪೇಸಿಎಂ ಪೋಸ್ಟರ್ ಅಂಟಿಸಲು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ‘ಸಂಜೆ 4 ಗಂಟೆಗೆ ನಾವೇ ಬೆಂಗಳೂರಿನ ವಿವಿಧೆಡೆ ಪಕ್ಷದ 100 ಶಾಸಕರೊಂದಿಗೆ ಹೋಗಿ ಪೋಸ್ಟರ್ ಅಂಟಿಸುತ್ತೇವೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅನುಮತಿಯಿಲ್ಲದೆ ಫೋಟೊ ಬಳಕೆ: ಕಲಾವಿದನ ಆಕ್ರೋಶ

ಅನುಮತಿ ಇಲ್ಲದೆ ವ್ಯಕ್ತಿಯೋರ್ವನ ಫೋಟೋ ಬಳಸಿದ್ದು ಕಾಂಗ್ರೆಸ್​ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. 40 ಪರ್ಸೆಂಟ್ ಅಭಿಯಾನಕ್ಕಾಗಿ ಕಾಂಗ್ರೆಸ್​ ಪಕ್ಷವು ತನ್ನ ಚಿತ್ರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಲಾವಿದ ಅಖಿಲ್ ಅಯ್ಯರ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಈ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ರಸ್ತೆ ತಡೆದು ಪ್ರತಿಭಟನೆ

ಕಾಂಗ್ರೆಸ್ ಪಕ್ಷದ 40ಕ್ಕೂ ಹೆಚ್ಚು ಕಾರ್ಯಕರ್ತರು ಸ್ಥಳೀಯ ನಾಯಕ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ ಕಾವೇರಿ ಥಿಯೇಟರ್ ಬಳಿ ರಸ್ತೆ ತಡೆದು ಶಾಸಕ ಅಶ್ವತ್ಥ ನಾರಾಯಣ ವಿರುದ್ಧ ಪ್ರತಿಭಟನೆ ನಡೆಸಿದರು. ಪಾಲಿಕೆಯ ವಾರ್ಡ್‌ಗಳಲ್ಲಿ ನಕಲಿ ಬಿಲ್ಲುಗಳನ್ನು ಪಾಸ್ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳೇ ತಮ್ಮ ಅಸಹಾಯತೆ ಬಗ್ಗೆ ಮಾತಾಡಿದ್ದಾರೆ. ಇದನ್ನು ಸಂಪೂರ್ಣವಾಗಿ ವಿಚಾರಣೆಗೆ‌ ಒಳಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರನ್ನು ಪೊಲೀಸ್ ವಶಕ್ಕೆ ಪಡೆದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.