ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)
ದೆಹಲಿ: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ರಾಜ್ಯಾದ್ಯಂತ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಈ ಮಧ್ಯೆ, ಪ್ರಕರಣವನ್ನು ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ಗೆ ಪ್ರಧಾನಿ ನರೇಂದ್ರಮೋದಿ ಬುಲಾವ್ ನೀಡಿರುವ ವಿಚಾರ ತಿಳಿದುಬಂದಿದೆ. ದೆಹಲಿ ನಿವಾಸಕ್ಕೆ ಕರೆಸಿಕೊಂಡು ಪ್ರಧಾನಿ ವಿವರಣೆ ಪಡೆದುಕೊಂಡಿದ್ದಾರೆ. ಈಶ್ವರಪ್ಪ ಕೇಸ್‌ನ ಬಗ್ಗೆ ಬಿ.ಎಲ್. ಸಂತೋಷ್‌ರಿಂದ ಮಾಹಿತಿ ನೀಡಲಾಗಿದೆ.
ಇತ್ತ, ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಲಿ. ಸಿಬಿಐ ತನಿಖೆಗೆ ಕೋರಿ ಸಮುದಾಯದಿಂದ ಹೋರಾಟ ಮಾಡ್ತೇವೆ ಎಂದು ಮೃತ ಸಂತೋಷ್ ನಿವಾಸಕ್ಕೆ ಭೇಟಿ ಬಳಿಕ ಲಿಂಗಾಯತ ಪಂಚಮಸಾಲಿ ಸಂಘಟನೆ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ರಾಜಶೇಖರ್ ಮೆಣಸಿನಕಾಯಿ ಹೇಳಿಕೆ ನೀಡಿದ್ದಾರೆ. ನಮ್ಮ ಸಮುದಾಯದ ಯುವಕ ಸಂತೋಷ್‌ಗೆ ಅನ್ಯಾಯವಾಗಿದೆ. ಗುತ್ತಿಗೆದಾರರು ಆರೋಪಿಸಿದಾಗ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 40 ಪರ್ಸೆಂಟ್ ಕಮಿಷನ್‌ಗಾಗಿ ಸಂತೋಷ್ ಬಲಿಯಾಗಿದ್ದಾನೆ. ಸಂತೋಷ್ ಪಾಟೀಲ್ ಮಾನಸಿಕವಾಗಿ ಬಹಳಷ್ಟು ಸದೃಢವಾಗಿದ್ದ. ಧೈರ್ಯವಂತ ಸಂತೋಷ್ ಸ್ವಾಭಿಮಾನಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸಂತೋಷ್ ಪಾಟೀಲ್ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಮಗುವಿನ ಶಿಕ್ಷಣದ ಜವಾಬ್ದಾರಿಯನ್ನ ಸರ್ಕಾರ ತೆಗೆದುಕೊಳ್ಳಲಿ. ಅಲ್ಲದೇ ಕುಟುಂಬಕ್ಕೆ 5 ಕೋಟಿ ರೂಪಾಯಿ ಪರಿಹಾರ ನೀಡಲಿ. ಈಶ್ವರಪ್ಪರಿಂದ ರಾಜೀನಾಮೆ ಪಡೆದು ಕಾನೂನುಕ್ರಮ ಕೈಗೊಳ್ಳಲಿ. ಸಮುದಾಯದ ಉಭಯ ಸ್ವಾಮೀಜಿಗಳೊಂದಿಗೆ ಚರ್ಚಿಸುತ್ತೇವೆ. ಸ್ವಾಮೀಜಿಗಳ ಜೊತೆ ಚರ್ಚಿಸಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಬೆಳಗಾವಿಯಲ್ಲಿ ಯುವ ಘಟಕದ ಅಧ್ಯಕ್ಷ ರಾಜಶೇಖರ್ ಹೇಳಿದ್ದಾರೆ. ಸಂತೋಷ್ ನಿವಾಸಕ್ಕೆ ಭೇಟಿ ನಂತರ ರಾಜಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.