ಸಂತೋಷ ಸಾವಿನ ಪ್ರಕರಣ ಬಹಳ ಸೂಕ್ಷ್ಮವಾಗಿರುವುದರಿಂದ ತನಿಖೆ ಪೂರ್ತಿಗೊಳ್ಳದೆ ಏನನ್ನೂ ಹೇಳಲಾಗಲ್ಲ: ದೇವಜ್ಯೋತಿ ರೇ, ಐಜಿಪಿ | Santosh death case is very sensitive, can’t divulge information until probe is concluded: Devajyothi Ray IGP ARB


ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ (Santosh Patil) ಅವರ ಸಾವು ಇಡೀ ರಾಜ್ಯದ ಕುತೂಹಲ ಕೆರಳಿಸಿದೆ. ತನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರೇ (KS Eshwarappa) ನೇರ ಕಾರಣ ಎಂದು ಬರೆದಿರುವ ಡೆತ್ ನೋಟ್ (death note) ಅವರ ದೇಹ ಸಿಕ್ಕ ರೂಮಲ್ಲಿ ಪತ್ತೆಯಾಗಿರುವುದರಿಂದ ವಿರೋಧ ಪಕ್ಷಗಳು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿವೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತಿವೆ. ಏತನ್ಮಧ್ಯೆ, ಮಂಗಳವಾರದಂದು ಸಂತೋಷ್ ಅವರ ದೇಹ ಸಿಕ್ಕ ಉಡುಪಿಯ ಶಾಂಭವಿ ಲಾಡ್ಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಪಶ್ಚಿಮವಲಯದ ಐಜಿಪಿ ದೇವಜ್ಯೋತಿ ರೇ ಅವರು ಹೆಚ್ಚಿನ ಮಾಹಿತಿಯನ್ನೇನೂ ನೀಡಲಿಲ್ಲ.

ಇದು ಬಹಳ ಸೂಕ್ಷ್ಮ ಪ್ರಕರಣವಾಗಿರುವುದರಿಂದ ನಾವು ಮೃತ ಸಂತೋಷ್ ಅವರ ರಕ್ತ ಸಂಬಂಧಿಗಳ ಆಗಮನಕ್ಕಾಗಿ ಕಾಯುತ್ತಿದ್ದೇವೆ. ಪ್ರಕರಣದಲ್ಲಿ ಅವರ ಹೇಳಿಕೆಗಳು ಬಹಳ ಮುಖ್ಯವಾಗಿವೆ. ಹೇಳಿಕೆಗಳನ್ನು ಪಡೆದ ಬಳಿಕವೇ ನಮ್ಮ ತನಿಖೆ ಅರಂಭವಾಗುತ್ತದೆ. ಈ ಬಗ್ಗೆ ಎಸ್ ಪಿ ಯವರು ನಿಮಗೆ ಹೇಳಿರಬಹುದು, ಅಂತ ಭಾವಿಸುತ್ತೇನೆ, ಎಂದು ದೇವಜ್ಯೋತಿ ರೇ ಹೇಳಿದರು.

ವಿಧಿವಿಜ್ಞಾನ ತಜ್ಞರ ನೆರವಿನೊಂದಿಗೆ ತನಿಖೆ ನಡೆಯುತ್ತದೆ. ತನಿಖೆ ಪೂರ್ಣಗೊಂಡ ಬಳಿಕವೇ ನಾವು ಪ್ರಕರಣದ ಎಲ್ಲ ವಿವರಗಳನ್ನು ನೀಡಲು ಸಾಧ್ಯವಾಗುತ್ತದೆ. ಅಲ್ಲಿಯವರೆಗೆ ಮಾಧ್ಯಮದವರು ಕಾಯಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದ ನಾಯಕರು ಈಶ್ವರಪ್ಪನವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ ಮತ್ತು ಕಾರ್ಯಕರ್ತರು ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

TV9 Kannada


Leave a Reply

Your email address will not be published.