ಸಂಪುಟ ಸಚಿವರ ಬಂಧನದಿಂದ ಕೆಂಡವಾದ ದೀದಿಗೆ ಹೈಕೋರ್ಟ್ ಚಾಟಿ.. ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ

ಸಂಪುಟ ಸಚಿವರ ಬಂಧನದಿಂದ ಕೆಂಡವಾದ ದೀದಿಗೆ ಹೈಕೋರ್ಟ್ ಚಾಟಿ.. ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ

ಪಶ್ಚಿಮ ಬಂಗಾಳದಲ್ಲಿ ಮೋದಿ V/s ದೀದಿ ಯುದ್ಧದ ಎರಡನೇ ಅಧ್ಯಾಯ ತೆರೆದುಕೊಂಡಿದೆ. ಮೊನ್ನೆ ತಾನೆ ಸಿಬಿಐ ಕಚೇರಿಗೆ ಬಂದು 6 ಗಂಟೆಗಳ ಕಾಲ ಕುಳಿತ ಸಿಎಂ ಮಮತಾ ಬ್ಯಾನರ್ಜಿ, ಆಕಾಶ ಭೂಮಿಯನ್ನೇ ಒಂದು ಮಾಡುವಂತೆ ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ಈ ನಡುವೆ ಹೈಕೋರ್ಟ್​ ಕೂಡ ಮಮತಾ ವಿರುದ್ಧ ಗರಂ ಆಗಿದ್ದು.. ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಿದೆ.

ಅಷ್ಟಕ್ಕೂ ಈಗೇನಾಗ್ತಿದೆ ಅಲ್ಲಿ?
ಇದು ಹೊಸ ಪ್ರಹಸನವಲ್ಲ.. ಹಳೆಯ ವಿವಾದ ಹೊಸ ಬಟ್ಟೆ ತೊಟ್ಟು ಮತ್ತೆ ಅವಿರ್ಭವಿಸಿರೋವಂಥದ್ದು. ಭ್ರಷ್ಟಾಚಾರದ ಚಾಟಿ ಮಮತಾ ಬ್ಯಾನರ್ಜೀ ಮಂತ್ರಿಗಳಿಗೆ ಬಾರಿಸಿರುವಂಥದ್ದು. ಸೆಂಟ್ರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಷನ್​ನಿಂದ ಬಂಧಿತರಾಗಿರೋ ಟಿಎಂಸಿ ಸಚಿವರಿಗೆ ಸಂಬಂಧಿಸಿದ್ದು. ನಾರದಾ ಹೆಸರಿನ ಸ್ಟಿಂಗ್ ಅಂದು ಕುಕ್ಕಿದ ರಭಸಕ್ಕೆ, ಇಂದಿಗೂ ಮಮತಾರ ನೆಮ್ಮದಿ ಕಸಿದಿದೆ.

ಏನಿದು ನಾರದ ಸ್ಟಿಂಗ್? ಮಮತಾ ಮತ್ತೆ ನಿಗಿ ನಿಗಿ ಕೆಂಡವಾಗಿದ್ಯಾಕೆ..?
2016ರ ವಿಧಾನಸಭೆ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್ಸಿನ ಸಚಿವರಾಗಿದ್ದ ಹಲವು ಘಟಾನುಘಟಿಗಳು ಲಂಚ ತೆಗೆದುಕೊಳ್ಳುತ್ತಿದ್ದ ಸ್ಟಿಂಗ್ ಆಪರೇಷನ್​ ವರದಿಯೊಂದನ್ನ ನಾರದಾ ಅನ್ನೋ ಸಂಸ್ಥೆ ಬಿಡುಗಡೆ ಮಾಡಿತ್ತು. 2017ರಲ್ಲಿ ಈ ಪ್ರಕರಣದ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶಿತ್ತು. ನಾರದಾ ನ್ಯೂಸ್ ಸಂಸ್ಥಾಪಕ ಮ್ಯಾಥ್ಯೂ ಸ್ಯಾಮ್ಯುಯೆಲ್, ತೆಹಲ್ಕಾ ಮ್ಯಾಘಝೀನ್​ನಲ್ಲಿದ್ದಾಗ 2014ರಿಂದ ಎರಡು ವರ್ಷಗಳ ಕಾಲ ಈ ಸ್ಟಿಂಗ್ ಆಪರೇಷನ್  ನಡೆಸಿದ್ರು.

ಯಾರಲ್ಲಾ ಆರೋಪದಲ್ಲಿ ಭಾಗಿ..?
ಸ್ಟಿಂಗ್ ಆಪರೇಷನ್ ಭಾಗವಾಗಿ ಸ್ಯಾಮ್ಯುಯೆಲ್ ಇಂಪ್ಲೆಕ್ಸ್ ಕನ್ಸಲ್ಟನ್ಸಿ ಸೊಲ್ಯೂಷನ್ಸ್ ಅನ್ನೋ ಹೆಸರಿನ ನಕಲಿ ಕಂಪನಿಯನ್ನು ಸ್ಥಾಪಿಸಿದ್ರು. ಹಣದ ಬದಲಾಗಿ ಸಹಾಯ ಮಾಡುವಂತೆ ಟಿಎಂಸಿಯ ಹಲವು ನಾಯಕರು, ಸಚಿವರು, ಶಾಸಕರನ್ನು ಅವರು ಅಪ್ರೋಚ್ ಮಾಡಿದ್ರು. ಬರೋಬ್ಬರಿ 52 ಗಂಟೆಗಳ ಫೂಟೇಜ್ ಅನ್ನು ಸ್ಯಾಮ್ಯುಯೆಲ್ ಚಿತ್ರೀಕರಿಸಿದ್ರು. ಇದ್ರಲ್ಲಿ ಅಂದಿನ ಟಿಎಂಸಿ ಸಂಸದ ಮತ್ತು ಇಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರೋ ಮುಕುಲ್ ರಾಯ್, ಸೌಗತಾ ರಾಯ್, ಕಾಕೊಲಿ ಘೋಷ್ ದಸ್ತಿದಾರ್, ಪ್ರಸೂನ್ ಬ್ಯಾನರ್ಜೀ, ಇಂದು ಬಿಜೆಪಿಯಲ್ಲಿರುವ ಮತ್ತು ನಂದೀಗ್ರಾಮದಲ್ಲಿ ಮಮತಾ ಬ್ಯಾನರ್ಜಿಯವರನ್ನೇ ಸೋಲಿಸಿದ ಸುವೆಂದು ಅಧಿಕಾರಿ, ಅಪರೂಪ ಪೊದ್ದಾರ್ ಮತ್ತು 2017ರಲ್ಲಿ ಸಾವನ್ನಪ್ಪಿದ ಸುಲ್ತಾನ್ ಅಹ್ಮದ್, ಸಚಿವರಾಗಿದ್ದ ಮದನ್ ಮಿತ್ರಾ, ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್ ಮತ್ತು ಇಕ್​ಬಾಲ್ ಅಹಮದ್ ಮುಂತಾದವರು ಲಂಚ ಸ್ವೀಕರಿಸುವಂಥದ್ದು ಅಥವಾ ಲಂಚದ ಬಗ್ಗೆ ಸಂವಾದ ನಡೆಸಿದ್ದರ ಸಂಪೂರ್ಣ ದೃಶ್ಯ ಚಿತ್ರಿತವಾಗಿತ್ತು.

ಸಂಪುಟ ಸಚಿವರ ಬಂಧನದಿಂದ ಕೆಂಡವಾದ ದೀದಿಗೆ ಹೈಕೋರ್ಟ್ ಚಾಟಿ.. ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ

ಕೇವಲ ರಾಜಕಾರಣಿಗಳು ಮಾತ್ರವಲ್ಲ ಈಗ ಸಸ್ಪೆಂಡ್ ಆಗಿರುವ ಐಪಿಎಸ್​ ಅಧಿಕಾರಿ ಹೆಚ್​ಎಂಎಸ್ ಮಿರ್ಜಾ ಕೂಡ ಸ್ಯಾಮ್ಯೂಯೆಲ್​ರಿಂದ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ ಸೆರೆಯಾಗಿತ್ತು ಎನ್ನಲಾಗಿದೆ. ಇದೇ ಕಾರಣದಿಂದಾಗಿ ಮೊನ್ನೆ ಸಿಬಿಐ ನಾಲ್ವರು ಟಿಎಂಸಿ ನಾಯಕರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದೆ. ಇದೇ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅಷ್ಟು ಕೋಪೋದ್ರೋಕಿತರಾಗಿದ್ದು ಕಂಡು ಬಂದಿದೆ.

ಅಷ್ಟಕ್ಕೂ ಮೊನ್ನೆ ಟಿಎಂಸಿ ನಾಯಕರಿಗೆ ಆಗಿದ್ದೇನು?
ಬಿಜೆಪಿ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಯಾಕೆ?

ಮೊನ್ನೆ ಬೆಳಗ್ಗೆ ಪಶ್ಚಿಮ ಬಂಗಾಳದ ಅಡಳಿತಾರೂಢ ಟಿಎಂಸಿ ಅಣತಿಯಂತೆ ಅಲ್ಲಿನ ಪೊಲೀಸರು  ಮೂವರು ಬಿಜೆಪಿ ಎಂಎಲ್ಎ​ಗಳನ್ನು ವಶಕ್ಕೆ ಪಡಿತಾರೆ. ಕೊರೊನಾ ಲಾಕ್​ಡೌನ್ ನಿಯಮ ಉಲ್ಲಂಘನೆ ಆರೋಪದಲ್ಲಿ ಬಿಜೆಪಿಯ ಶಂಕರ್ ಘೋಶ್, ಆನಂದಮಯ್ ಬರ್ಮನ್ ಹಾಗೂ ಶಿಖಾ ಚಟ್ಟೋಪಾಧ್ಯಯ್ ಅವರನ್ನು ವಶಕ್ಕೆ ಪಡೆಯಲಾಗಿರುತ್ತೆ.

ಇದಾದ ಕೆಲವೇ ಹೊತ್ತಿನಲ್ಲಿ ಸಿಬಿಐ ಮಮತಾ ಸಂಪುಟದ ಸಚಿವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುತ್ತೆ. ಈ ಎರಡೂ ಪ್ರಕರಣಕ್ಕೆ ಯಾವುದೇ ಸಂಬಂಧವೂ ಇಲ್ಲ. ಅಥವಾ ಇದು ಹೊಸ ಕೇಸೂ ಅಲ್ಲ. ಆದ್ರೆ ಟಿಂಎಸಿಗೆ ಇಷ್ಟು ಸಾಕಾಗಿತ್ತು. ಅದ್ರಲ್ಲೂ ಮಮತಾ ಬ್ಯಾನರ್ಜಿ ಸಂಪುಟದ ಸಚಿವರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರ ಮತ್ತು ಕೊಲ್ಕತ್ತಾ ಮಾಜಿ ಮೇಯರ್ ಸೋವನ್ ಚಟ್ಟೋಪಾಧ್ಯಯ ಅವರನ್ನು ನಾರದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿಗಳೇ ಕೊತ ಕೊತ ಕುದಿಯಲು ಆರಂಭಿಸ್ತಾರೆ. ಅಷ್ಟೇ ಏಕೆ.. ಮಮತಾ ಬ್ಯಾನರ್ಜಿ ಸ್ವತಃ ತಾವೇ ಬಂದು ಬರೋಬ್ಬರಿ 6 ಗಂಟೆಗಳ ಕಾಲ ಸಿಬಿಐ ಕಚೇರಿಯಲ್ಲಿ ಕುಳಿತುಕೊಳ್ಳುತ್ತಾರೆ. ಅವರ ಬೆಂಬಲಿಗರೂ ದೊಡ್ಡ ಪ್ರಮಾಣದಲ್ಲಿ ಆಗಮಿಸಿ ರಕ್ತದಕೋಡಿ ಹರಿಸಲು ಬಂದವರಂತೆ ಕಲ್ಲುಗಳನ್ನೂ ತಂದು ಬಿಡ್ತಾರೆ.

ಮಮತಾಗೆ ಹೈಕೋರ್ಟ್​ನಿಂದ ತೀಕ್ಷ್ಣ ಚಾಟಿ
2 ಸಾವಿರ ಬೆಂಬಲಿಗರೊಂದಿಗೆ ಕಾನೂನು ಸಚಿವ ಮಾಡಿದ್ದೇನು?

ಒಂದೆಡೆ ಇಷ್ಟೆಲ್ಲ ಪ್ರಹಸನ ನಡೆಯುತ್ತಿರುವಾಗಲೇ ಸ್ಪೆಷಲ್ ಸಿಬಿಐ ಕೋರ್ಟ್​ ನಾಲ್ವರೂ ಆರೋಪಿಗಳಿಗೆ ನಿನ್ನೆಯೇ ಜಾಮೀನು ಮಂಜೂರು ಮಾಡುತ್ತೆ. ಪೊಲೀಸರು ಕಸ್ಟಡಿ ಕೇಳದೇ ಇರೋದ್ರಿಂದ ಮತ್ತು ನ್ಯಾಯಾಂಗ ಬಂಧನಕ್ಕೆ ಆಗಹಿಸಿದ್ದರಿಂದಾಗಿ ಜಾಮೀನು ನೀಡ್ತಿರೋದಾಗಿ ಕೋರ್ಟ್ ಹೇಳುತ್ತೆ. ಆದ್ರೆ ಸಿಬಿಐ ರಾತ್ರಿಯೇ ಕೊಲ್ಕತ್ತಾ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್​ ರಾತ್ರಿಯೇ ತೀರ್ಪನ್ನು ನೀಡಿ ಜಾಮೀನು ಅರ್ಜಿಯನ್ನು ವಜಾ ಮಾಡುತ್ತೆ. ಜೊತೆಗೆ ಮಮತಾ ಬ್ಯಾನರ್ಜಿಗೆ ತೀಕ್ಷ್ಣ ಚಾಟಿಯನ್ನೂ ಬೀಸುತ್ತೆ.

ಅಷ್ಟಕ್ಕೂ ಹೈ ಕೋರ್ಟ್ ಹೇಳಿದ್ದೇನು?
ನ್ಯಾಯಾಂಗ ವ್ಯವಸ್ಥೆ ಮೇಲೆ ಸಾರ್ವಜನಿಕರ ನಂಬಿಕೆ ಮತ್ತ ವಿಶ್ವಾಸ ಮುಖ್ಯ. ಅವರು ಕಾನೂನು ಅಲ್ಲ ಬದಲಿಗೆ ಗುಂಪು ಮೇಲುಗೈ ಸಾಧಿಸಿದೆ ಎಂದು ನಂಬುವಂತೆ ಆಗಬಾರದು. ಅದ್ರಲ್ಲೂ ಗುಂಪಿನ ನೇತೃತ್ವವನ್ನ ಸ್ವತಃ ಮುಖ್ಯಮಂತ್ರಿಯೇ ವಹಿಸಿಕೊಂಡು ಸಿಬಿಐ ಕಚೇರಿಗೆ ಬಂದಾಗ ಮತ್ತು ಕೋರ್ಟ್​ನಲ್ಲಿ ಕಾನೂನು ಸಚಿವ ಗುಂಪುಗೂಡಿ ಬಂದಾಗ ಇದು ಮತ್ತಷ್ಟು ಮುಖ್ಯವಾಗುತ್ತೆ. ಒಂದು ವೇಳೆ ಪಿರ್ಯಾದುದಾರರಿಗೆ ಕಾನೂನಿನ ಮೇಲೆ ನಂಬಿಕೆ ಇದ್ದರೆ ಹೀಗಾಗಲ್ಲ.

ಎಕ್ಸ್​ಟ್ರಾ-ಆರ್ಡಿನರಿ ಸಂದರ್ಭದ ನಿರ್ವಹಣೆಗಾಗಿ ಈ ಕೋರ್ಟ್​ಗೆ ಬರಲಾಗಿದೆ. ಇಲ್ಲಿ ರಾಜ್ಯದ ಮುಖ್ಯಮಂತ್ರಿಯೇ ಸಿಬಿಐ ಕಚೇರಿ ಮುಂದೆ ತಮ್ಮ ಬೆಂಬಲಿಗರೊಂದಿಗೆ ಧರಣಿಗೆ ಕೂರ್ತಾರೆ. ಆಗ ಸಿಬಿಐ ಪ್ರಕರಣದ ತನಿಖೆ ಮಾಡಬೇಕಿರುತ್ತೆ. ಮತ್ತು ಕೋರ್ಟ್​ಗೆ ಸಲ್ಲಿಸಲು ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಿದ್ಧಪಡಿಸುತ್ತಿರುತ್ತೆ. ಇನ್ನೊಂದೆಡೆ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿದ್ದ ಕೊರ್ಟ್​ನಲ್ಲಿ ಆಡಳಿತಾರೂಢ ಪಕ್ಷದ ನಾಯಕರು, ಕೆಲ ಸಚಿವರು ಉಪಸ್ಥಿತರಿರ್ತಾರೆ. ಅಷ್ಟು ಮಾತ್ರವಲ್ಲ ರಾಜ್ಯದ ಕಾನೂನು ಸಚಿವರೇ ತಮ್ಮ 2 ರಿಂದ 3 ಸಾವಿರ ಬೆಂಬಲಿಗರೊಂದಿಗೆ ಕೋರ್ಟಿಗೆ ಬರ್ತಾರೆ.

ಈ ಕೇಸ್​ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಇರುವಂಥದ್ದು. ಹೈಕೋರ್ಟ್ ಸೂಚನೆಯಂತೆ ಪ್ರಿವೆನ್ಷನ್ ಆಫ್ ಕರಪ್ಶನ್ ಆ್ಯಕ್ಟ್ ಅನ್ವಯ ಹಲವರ ಮೇಲೆ ಕೇಸ್ ದಾಖಲಿಸಲಾಗಿದೆ. ಅದ್ರಲ್ಲಿ ಸದ್ಯ ಆಡಳಿತದಲ್ಲಿರುವ ಪಕ್ಷದ ಸಚಿವರೂ ಇದ್ದಾರೆ. ಯಾವುದಾದ್ರೂ ಆದೇಶವನ್ನ ಕೋರ್ಟ್​ ನೀಡಿದಾಗ ಅದ್ರಲ್ಲಿ ಆಡಳಿತ ವ್ಯವಸ್ಥೆಯಲ್ಲಿರುವ ಜನರಿಗ ವಿಶ್ವಾಸ ಇಲ್ಲ ಎಂದಾದರೆ ಮತ್ತು ಅರೆಸ್ಟ್ ಆದ ರಾಜಕೀಯ ನಾಯಕರನ್ನು ಕೋರ್ಟ್​ಗೆ ಪ್ರೊಡ್ಯೂಸ್ ಮಾಡುವಾತ ಇಂಥ ಘಟನೆಗಳು ನಡೆಯಲು ಅವಕಾಶ ನೀಡಿದರೆ. ಕಾನೂನು ವ್ಯವಸ್ಥೆ ಮೇಲೆ ಜನರ ನಂಬಿಕೆಯೂ ಇಲ್ಲವಾಗಲು ಶುರುವಾಗುತ್ತೆ.

ಜೈಲ್ ಮ್ಯಾನುವಲ್​ನಂತೆ ಅವರನ್ನು ನೋಡಿಕೊಳ್ಳಿ
ವಾದ-ಪ್ರತಿವಾದ ನಡೆದ ಸಂದರ್ಭದಲ್ಲಿ ಹೀಗೆ ಗುಂಪುಗಳೀದ್ದಾಗ ಕೆಳ ಹಂತದ ನ್ಯಾಯಾಲಯ ಆದೇಶವನ್ನ ನೀಡಿದಾಗ.. ಅದಕ್ಕೆ ತಡೆ ನೀಡುವುದು ಸಮಂಜಸವಾಗಿರುತ್ತೆ ಅಂತಾ ನಾವು ಭಾವಿಸುತ್ತೇವೆ. ಮುಂದಿನ ಆದೇಶ ಬರುವ ತನಕ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗುತ್ತೆ. ಅವರಿಗೆ ಎಲ್ಲ ವೈದ್ಯಕೀಯ ಸೌಲಭ್ಯ ಇರುವಂತೆ ಅಧಿಕಾರಿಗಳು ನೋಡಿಕೊಳ್ಳಿ. ಮತ್ತು ಜೈಲ್ ಮ್ಯಾನುವಲ್​ನಂತೆ ಅವರನ್ನು ನೋಡಿಕೊಳ್ಳಿ ಎಂದು ಕೋರ್ಟ್​ ಹೇಳಿದೆ.

ಕೋರ್ಟ್​ನ ತೀಕ್ಷ್ಣ ಚಾಟಿ ಬಳಿಕ ನಾಲ್ವರೂ ಆರೋಪಿಗಳನ್ನು ನಿನ್ನೆ ಜೈಲಿಗೆ ಕಳಿಸಲಾಗಿತ್ತು. ಆದ್ರೆ ಅದರಲ್ಲಿ ಇಬ್ಬರು ಅನಾರೋಗ್ಯ ಅಂತಾ ಹೇಳಿ ಈಗಾಗಲೇ ಕೋಲ್ಕತ್ತಾ ಆಸ್ಪತ್ರೆಯನ್ನು ಸೇರಿಕೊಂಡಿದ್ದಾರೆ. ಒಟ್ಟಿನಲ್ಲಿ ರಾಜಕಾರಣದಲ್ಲಿ ಯಾರು ಸರಿ? ಅಥವಾ ಯಾರು ತಪ್ಪು? ಅನ್ನೋದು ಆಯಾ ಪಕ್ಷ ಮತ್ತು ಪಕ್ಷಗಳ ಬೆಂಬಲಿಗರು ಇಂದು ನಿರ್ಧರಿಸುವಂತಾಗಿದೆಯಾ? ಅನ್ನೋ ಪ್ರಶ್ನೆ ಮೂಡಲು ಈ ಘಟನೆಯಂತೂ ಕಾರಣವಾಗಿದೆ. ಇನ್ನೊಂದೆಡೆ ದೇಶದ ನ್ಯಾಯಾಂಗ ವ್ಯವಸ್ಥೆ ಎಷ್ಟು ಸ್ಟ್ರಾಂಗ್ ಆಗಿದೆ ಅನ್ನೋದನ್ನೂ ಇದು ತೋರಿಸಿದ್ದು, ಜನ ಸಾಮಾನ್ಯರಿಗೆ ನ್ಯಾಯಾಂಗದ ಮೇಲೆ ಗೌರವ ಹೆಚ್ಚಲು ಕಾರಣವಾಗಿದೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಸಂಪುಟ ಸಚಿವರ ಬಂಧನದಿಂದ ಕೆಂಡವಾದ ದೀದಿಗೆ ಹೈಕೋರ್ಟ್ ಚಾಟಿ.. ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ appeared first on News First Kannada.

Source: newsfirstlive.com

Source link