ಬೆಂಗಳೂರು: ನವರಸ ನಾಯಕ ಜಗ್ಗೇಶ್ ಚಿತ್ರರಂಗದಲ್ಲಿ ಕಷ್ಟಪಟ್ಟು ಮೇಲೆ ಬಂದವರು. ಸೋಲು-ಗೆಲುವು ಸಮನಾಗಿ ಕಂಡವರು. ಕಷ್ಟ-ಕಾರ್ಪಣ್ಯಗಳನ್ನು ದಾಟಿ ಸಾಧನೆಯ ಶಿಖರ ಏರಿದವರು.

ಕನ್ನಡ ಚಿತ್ರರಂಗದ ನೆಚ್ಚಿನ ನವರಸ ನಾಯಕ ಬಣ್ಣದ ಲೋಕದಲ್ಲಿ ತಾವು ಅನುಭವಿಸಿದ ಬವಣೆಗಳ ಕುರಿತು ಆಗಾಗ ಹೇಳಿಕೊಳ್ಳುತ್ತಿರುತ್ತಾರೆ. ಜನಪ್ರಿಯ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಂತೂ ಜಗ್ಗಣ್ಣ ರಿಯಲ್ ಕಹಾನಿ ಕೇಳಿ ಸಾಕಷ್ಟು ಜನ ಕಣ್ಣೀರು ಸುರಿಸಿದ್ದುಂಟು.

ಇದೀಗ ನಗೆ ನಟ ಜಗ್ಗೇಶ್ ಅವರು ತಮಗೆ ನಿರ್ಮಾಪಕರೋರ್ವರು ಮೋಸ ಮಾಡಿದ್ದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಜಗ್ಗೇಶ್ ಅವರು ನಟಿಸಿದ್ದ 1994 ರಲ್ಲಿ ತೆರೆ ಕಂಡಿದ್ದ ‘ರಾಯರ ಮಗ’ ಸಿನಿಮಾ ಭರ್ಜರಿಯಾಗಿ ಯಶಸ್ಸು ಕಂಡಿತ್ತು. ಅಂದು ರಾಜ್ಯಾದ್ಯಂತ ಹೌಸ್ ಪ್ರದರ್ಶನ ಕಂಡಿದ್ದ ಈ ಸಿನಿಮಾ, ನಿರ್ಮಾಪಕರಿಗೆ ಒಳ್ಳೆಯ ದುಡ್ಡು ತಂದು ಕೊಟ್ಟಿತ್ತು. ಆದರೆ, ಆ ನಿರ್ಮಾಪಕ ಮಾತ್ರ ಈ ಸಿನಿಮಾದ ನಾಯಕ ನಟ ಜಗ್ಗೇಶ್ ಅವರಿಗೆ ಸಂಬಳ ( ಸಂಭಾವನೆ) ಕೊಡದೆ ಮೋಸ ಮಾಡಿದರಂತೆ.

ನಿರ್ಮಾಪಕರಿಂದಾದ ಮೋಸವನ್ನು ಟ್ವಿಟರ್‍ ನಲ್ಲಿ ಹೇಳಿಕೊಂಡಿರುವ ಜಗ್ಗೇಶ್, ಅಂದು ಸ್ವಂತ ಮನೆಯಿರಲಿಲ್ಲ, ತಿಂಗಳಿಗೆ 4000 ರೂ. ಕೊಟ್ಟು ಬಾಡಿಗೆ ಮನೆಯಲ್ಲಿದ್ದೆ. ಸಾಲ ಮಾಡಿ ಸಂಸಾರ ನಿಭಾಯಿಸುತ್ತಿದ್ದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹಿಟ್ ಕೊಟ್ಟರು ಕಾಸಿಲ್ಲದೆ ಬರಿ ಹೆಸರಿಗೆ ಬದುಕಿದವರು ನಾವು ಎಂದು ಹೇಳಿಕೊಂಡಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More