ಇಸ್ರೇಲ್‌ ಮೂಲದ ಪೆಗಸಸ್‌ ಸ್ಪೈವೇರ್‌ ನಡೆಸಿದೆ ಎನ್ನಲಾದ ಬೇಹುಗಾರಿಗೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ರಾಜಕಾರಣಿಗಳ, ಪತ್ರಕರ್ತರ, ನಿವೃತ್ತ ನ್ಯಾಯಾಧೀಶರ ಮೇಲೂ ಬೇಹುಗಾರಿಕೆ ನಡೆಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ಸಂಸತ್ತಿನ ಉಭಯ ಸದನದಲ್ಲೂ ಕೋಲಾಹಲವೇ ಸೃಷ್ಟಿಯಾಗಿದೆ.

ಬೇಹುಗಾರಿಕೆಗೆ ರಾಜಕಾರಣಿಗಳ, ಪ್ರಮುಖ ಗಣ್ಯರ ಮೊಬೈಲ್‌ ಹ್ಯಾಕ್‌ ಮಾಡಲಾಗುತ್ತಿದೆ ಅನ್ನೋದನ್ನು ತುಂಬಾ ವರ್ಷದಿಂದ ಕೇಳುತ್ತಿದ್ದೇವೆ. ಸುದ್ದಿ ಬಂದಷ್ಟೇ ವೇಗವಾಗಿ ಮಾಯವಾಗಿ ಬಿಡ್ತಾ ಇತ್ತು. ಆದ್ರೆ, ಇದೀಗ ಇಸ್ರೇಲ್‌ ಮೂಲದ ಪೆಗಸಸ್‌ ಸ್ಪೈವೇರ್‌ ನಡೆಸಿದೆ ಎನ್ನಲಾದ ಬೇಹುಗಾರಿಕೆ ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಭಾರತದ ಸಂಸತ್‌ನಲ್ಲಿಯೂ ಗದ್ದಲ ಎಬ್ಬಿಸಿದೆ. ಯಾಕೆಂದ್ರೆ ಅದು ಅಂತಿಂಥ ಬೇಹುಗಾರಿಕೆ ಅಲ್ಲ, ಪಕ್ಕಾ ಹೈಪ್ರೊಫೈಲ್‌ ಬೇಹುಗಾರಿಕೆ. ಇದೇ ವಿಚಾರವಾಗಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಕಟಕಟೆಗೆ ತಂದು ನಿಲ್ಲಿಸಿವೆ. ಆದ್ರೆ, ಕೇಂದ್ರ ಸರ್ಕಾರ ಆರೋಪವನ್ನು ತಳ್ಳಿ ಹಾಕಿದೆ.

ಲೋಕಸಭೆ, ರಾಜ್ಯಸಭೆಯಲ್ಲಿ ಗದ್ದಲ
ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯ

ಪೆಗಸಸ್‌ ಬಳಸಿ ಬೇಹುಗಾರಿಕೆಗೆ ಸಂಬಂಧಿಸಿದಂತೆ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲವೇ ಏರ್ಪಟ್ಟಿತ್ತು. ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಯುಪಿಎ ಮಿತ್ರಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿದ್ದವು. ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು. ಬೇಹುಗಾರಿಕೆಯ ಸತ್ಯಾಂಶ ಹೊರಬರಬೇಕು. ಈ ಫೋನ್‌ ಟ್ಯಾಪಿಂಗ್‌ ಪ್ರಕರಣವನ್ನು ಜಂಟಿ ಸದನ ಸಮಿತಿಗೆ ತನಿಖೆ ನೀಡುವವರೆಗೂ ನಾವು ಬಿಡುವುದಿಲ್ಲ ಅಂತ ಗುಡುಗಿದ್ದಾರೆ.

ಸಂಸತ್‌ನಲ್ಲಿ ಹೆಚ್ಚಾದ ಬೇಹುಗಾರಿಕೆ ಗದ್ದಲ
ಉಭಯ ಸದನಗಳ ಮುಂದೂಡಿಕೆ

ಇದು ಸಾಮಾನ್ಯ ಆರೋಪ ಪ್ರಕರಣವಲ್ಲ.. ಯಾಕಂದ್ರೆ ಹಿಂದೊಮ್ಮೆ ಕರ್ನಾಟಕದಲ್ಲಿಯೇ ಫೋನ್ ಕದ್ದಾಲಿಕೆ ಪ್ರಕರಣ ಬಯಲಿಗೆ ಬಂದಾಗ ಅಂದಿನ ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ನೀಡಿದ್ರು. ಆದ್ರೆ ರಾಜಕಾರಣದ ನೈತಿಕತೆ ನದಿಯಲ್ಲಿ ಈಗ ಸಾಕಷ್ಟು ನೀರು ಹರಿದು ಹೋಗಿದೆ.. ಇಂದು ರಾಜಕಾರಣಿಗಳಿಂದ ಅಂಥ ಕ್ರಮ ಊಹಿಸೋದು ಸಹಜವೇ.. ಆದ್ರೆ ಅದು ತೂತುಗಳು ಬಿದ್ದ ಮಡಕೆಯಲ್ಲಿ ನೀರು ಹೊತ್ತು ತಂದಂತೆ ಅನ್ನೋದು ಎಲ್ಲರಿಗೂ ತಿಳಿದಿರೋದೆ.. ಅದಿರಲಿ.. ಸದ್ಯದ ವಿಷಯ ಏನು ಅಂತಾ ನೋಡೋದಾದ್ರೆ..

ಇಂದು ಬೆಳಗ್ಗೆ ಆರಂಭವಾದಾಗಲೇ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ಪೆಗಸಸ್​ ಗೂಢಚಾರಿಕೆಗೆ ಸಂಬಂಧಿಸಿದಂತೆ ಗದ್ದಲ ಉಂಟಾಗಿತ್ತು. ವಿರೋಧ ಪಕ್ಷಗಳ ಸದಸ್ಯರು ನಿಯಮ 267 ರ ಅಡಿಯಲ್ಲಿ 15 ನೋಟಿಸ್‌ಗಳನ್ನು ನೀಡಿದ್ದು, ತಮ್ಮ ವಿಷಯದ ಬಗ್ಗೆ ಚರ್ಚೆಗೆ ಕಾಲಾವಕಾಶ ನೀಡಬೇಕು ಎಂದು ಪಟ್ಟುಹಿಡಿದರು. ಆದ್ರೆ, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭೆ ಅಧ್ಯಕ್ಷರಾದ ವೆಂಕಯ್ಯನಾಯ್ಡು ಅವರು ಚರ್ಚೆಗೆ ಅವಕಾಶ ನೀಡಲಿಲ್ಲ. ಮೊದಲು ನಿಗದಿಯಾಗಿರುವ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಆಮೇಲೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಆದ್ರೆ, ಇದು ಪ್ರತಿಪಕ್ಷದ ಸದಸ್ಯರಲ್ಲಿ ತೃಪ್ತಿ ತಂದಿಲ್ಲ. ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಲೋಸಭಾ ಸ್ಪೀಕರ್‌ ಓಂ ಬಿರ್ಲಾ, ರಾಜ್ಯಸಭಾ ಅಧ್ಯಕ್ಷರಾದ ವೆಂಕಯ್ಯನಾಯ್ಡು ಪ್ರತಿಪಕ್ಷಗಳ ಸದಸ್ಯರ ಮನವೊಲಿಸಲು ಪ್ರಯತ್ನಿಸಿದ್ದರು. ಆದ್ರೆ, ಫಲ ನೀಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಉಭಯ ಸದನಗಳನ್ನು ಕೆಲವು ಸಮಯ ಮುಂದೂಡಿಕೆ ಮಾಡಲಾಗಿತ್ತು.

ಬೇಹುಗಾರಿಕೆ ಬಗ್ಗೆ ಸರ್ಕಾರ ಹೇಳೋದು ಏನು?
ಪ್ರತಿಪಕ್ಷಗಳ ಆರೋಪ ಏನಾಗಿದೆ?

ಪೆಗಸಸ್‌ ಬೇಹುಗಾರಿಕೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷಗಳು ಬೇಹುಗಾರಿಕೆ ನಡೆಸಿರುವುದು ಹೌದು. ಹೀಗಾಗಿ ಜಂಟಿ ಸಂಸದೀಯ ಸಮಿತಿ ಇಂದಲೇ ತನಿಖೆ ಆಗಬೇಕು. ಹಾಗಾದ್ರೆ ಮಾತ್ರ ಸತ್ಯ ಹೊರಬರಲು ಸಾಧ್ಯ ಅಂತ ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಆದ್ರೆ, ಕೇಂದ್ರ ಸರ್ಕಾರದ ಸಚಿವರು ಇದನ್ನು ತಳ್ಳಿಹಾಕಿದ್ದಾರೆ. ಸದನದ ಕಲಾಪವನ್ನು ಹಾಳು ಮಾಡುವ ಉದ್ದೇಶದಿಂದಲೇ ಅಧಿವೇಶನ ಮುನ್ನಾ ದಿವೇ ಊಹಾಪೂಹದ ವರದಿ ನೀಡಲಾಗಿದೆ. ಅದರಲ್ಲಿ ಸತ್ಯಾಂಶ ಇಲ್ಲ ಅಂತ ಆರೋಪವನ್ನು ತಳ್ಳಿಹಾಕಿದೆ.

ಕೇಂದ್ರ ಸರ್ಕಾರದಿಂದ ವರದಿ ನಿರಾಕರಣೆ
ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದ್ದೇನು?

ಬೇಹುಗಾರಿಕೆ ಬಗ್ಗೆ ವಿದ್ಯುನ್ಮಾನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ನಿರಾಕರಿಸಿದೆ. ಈ ಬಗ್ಗೆ ಸಂಸತ್‌ನಲ್ಲಿ ಸ್ಪಷ್ಟನೆ ನೀಡಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರು, ಕಣ್ಗಾವಲಿನ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಕೆಣಕುವ ಊಹೆಗಳಾಗಿವೆ. ಇದೊಂದು ಪಿತೂರಿಯಾಗಿದೆ. ಈ ಹಿಂದೆ ವಾಟ್ಸಾಪ್‌ನಲ್ಲಿ ಪೆಗಾಸಸ್‌ ಬಳಸಲಾಗುತ್ತಿದೆ ಅನ್ನೋ ಆರೋಪ ಕೂಡ ಕೇಳಿಬಂದಿತ್ತು. ಆದ್ರೆ, ಅದು ಕೂಡ ಸತ್ಯ ಆಗಿರಲಿಲ್ಲ. ಕೋರ್ಟ್‌ ಕೂಡ ಅರ್ಜಿದಾರರ ಆರೋಪ ನಿರಾಕರಿಸಿತ್ತು ಎಂದು ಸ್ಪಷ್ಟತೆ ನೀಡಿದೆ.

ಪಿತೂರಿಯಿಂದ ಭಾರತದ ಅಭಿವೃದ್ಧಿ ತಪ್ಪಿಸಲಾಗದು
ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಅಮಿತ್‌ ಶಾ

ಬೇಹುಗಾರಿಕೆಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್‌ ಶಾ ಪ್ರತಿಕ್ರಿಯಿಸಿದ್ದಾರೆ. ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ಅಡ್ಡಿಯುಂಟು ಮಾಡುವ ಉದ್ದೇಶದಿಂದಲೇ ಪೆಗಾಸಸ್‌ ಸ್ಪೈವೇರ್‌ ವಿಷಯವನ್ನು ದೊಡ್ಡದು ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅವಮಾನಿಸುವ ಒಂದೇ ಕಾರಣಕ್ಕೆ ಬೇಹುಗಾರಿಕೆಯ ವರದಿ ಮಾಡಲಾಗಿದೆ. ಆದ್ರೆ, ಮೋದಿ ಸರ್ಕಾರದ ಏಕೈಕ ಗುರಿ ಅಂದ್ರೆ ದೇಶದ ಅಭಿವೃದ್ಧಿ. ಪಿತೂರಿಯಿಂದ ದೇಶದ ಅಭಿವೃದ್ಧಿ ತಡೆಯಲು ಸಾಧ್ಯವಿಲ್ಲ ಅಂತ ಸಮಜಾಯಿಶಿ ಕೊಡಲು ಯತ್ನಿಸಿದ್ದಾರೆ.
ಕೋಲಾಹಲಕ್ಕೆ ಕಾರಣವಾಗಿದ್ದು ರಾಜಕಾರಣಿಗಳ ಹೆಸರು

ರಾಹುಲ್‌, ಸ್ಟಾಲಿನ್‌, ಅಭಿಷೇಕ್‌ ಬ್ಯಾನರ್ಜಿ ಹೆಸರು ಇತ್ತು
ಅಷ್ಟಕ್ಕೂ ಆಗಿದ್ದಾದ್ರೂ ಏನು? ಹೀಗೆ ಮಾಡಿದ್ಯಾರು?

ಭಾರತದಲ್ಲಿ 300 ಫೋನ್‌ಗಳನ್ನು ಹ್ಯಾಕ್‌ ಮಾಡಿ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲಿಯೂ ಪ್ರಮುಖ ರಾಜಕಾರಣಿಗಳಾದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಸಂಸದ ಅಭಿಷೇಕ್‌ ಬ್ಯಾನರ್ಜಿ.. ಅಷ್ಟು ಮಾತ್ರವಲ್ಲ ಇಬ್ಬರು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್‌ ಮತ್ತು ಪ್ರಹ್ಲಾದ್‌ ಪಟೇಲ್‌ ಹೆಸರು ಕೇಳಿಬಂದಿದೆ. ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಮೇಲೆ, 40 ಪತ್ರಕರ್ತರ ಮೇಲೆ, ನಿವೃತ್ತ ನ್ಯಾಯಮೂರ್ತಿಗಳ ಮೇಲೆ, ನಿವೃತ್ತ ಚುನಾವಣಾ ಆಯೋಗದ ಅಧ್ಯಕ್ಷರ ಮೇಲೆ ಕೂಡ ಬೇಹುಗಾರಿ ನಡೆಸಲಾಗಿದೆ ಅನ್ನೋ ಆರೋಪ ಇದೆ.

ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್​​ನಿಂದ ಕ್ಲಾಸ್.. ಸರಣಿ ಪ್ರಶ್ನೆ

ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿದೆ. ಮೋದಿ ಸರ್ಕಾರ ದೇಶಕ್ಕೆ ದ್ರೋಹ ಮಾಡಿತಾ? ಅಂತ ಪ್ರಶ್ನಿಸಿದೆ. ಅಂದ್ರೆ, ಮೋದಿ ಸರ್ಕಾರದಿಂದ ದೇಶಕ್ಕೆ ದ್ರೋಹ ಆಗಿದೆ ಅಂತ ಆರೋಪಿಸಲಾಗಿದೆ. ಅದೇ ರೀತಿ ವಿದೇಶಿ ಶಕ್ತಿಗಳಿಗೆ ಗೂಢಚಾರಿಕೆ ನಡೆಸಲು ಅವಕಾಶ ನೀಡಿದೆಯಾ? ಅಂತ ಪ್ರಶ್ನಿಸಿದೆ. ಇಲ್ಲಿಯೂ ಕೂಡ ವಿದೇಶಿ ಶಕ್ತಿಗಳಿಗೆ ಅವಕಾಶ ನೀಡಿಲಾಗಿದೆ ಅಂತ ಆರೋಪಿಸಲಾಗಿದೆ. ಇದು ಬಯಲಾಗಲು ಸಂಪೂರ್ಣ ತನಿಖೆ ಆಗಲೇಬೇಕಲ್ವಾ? ಅಂತ ಪ್ರಶ್ನಿಸಲಾಗಿದೆ. ಅಂದ್ರೆ, ಈ ಪ್ರಕರಣದ ಸತ್ಯಾಸತ್ಯಗೆ ಹೊರಬರಬೇಕಾದ್ರೆ ಪ್ರಕರಣವನ್ನು ತನಿಖೆ ನಡೆಸಬೇಕು ಅಂತ ಒತ್ತಾಯಿಸಿದೆ. ನಿಮ್ಮ ಮೇಲೆ ಗೂಢಚಾರಿಕೆ ಮಾಡ್ತಾ ಇರೋರು ಯಾರು ಅಂತ ಪ್ರಶ್ನಿಸಿದೆ. ಅಂದ್ರೆ, ದೇಶದ ನಾಗರಿಕರ ಮೇಲೆ ಸರ್ಕಾರವೇ ಗೂಢಚಾರಿಕೆ ಮಾಡ್ತಾ ಇದೆ ಅನ್ನೋ ಅರ್ಥದಲ್ಲಿ ಪ್ರಶ್ನಿಸಲಾಗಿದೆ. ಗೂಢಚಾರಿಕೆಯನ್ನು ಮೋದಿ ಮಾಡ್ತೀರೋದಾ? ಶಾ ಮಾಡ್ತೀರೋದಾ? ಸರ್ಕಾರವೇ ಮಾಡ್ತೀರೋದಾ? ಅಂತಲೂ ಪ್ರಶ್ನಿಸಲಾಗಿದೆ. ಯಾರು ಮಾಡ್ತೀರೋದು ಅಂತ ದೇಶದ ನಾಗರಿಕರಿಗೆ ಉತ್ತರಿಸಿ ಅಂತ ಆಗ್ರಹಿಸಿದೆ.

ಪ್ರತಿಪಕ್ಷಗಳು ಬೇಹುಗಾರಿಕೆ ನಡೆದಿದೆ ಎನ್ನುತ್ತಿವೆ. ಆದ್ರೆ, ಆಡಳಿತ ಸರ್ಕಾರ ಆರೋಪವನ್ನು ತಳ್ಳಿಹಾಕುತ್ತಿದೆ. ಒಮ್ಮೆ ಬೇಹುಗಾರಿಕೆ ನಡೆದಿದ್ರೆ ಅದು ಖಂಡಿತ ತಪ್ಪು. ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ. ಆದ್ರೆ, ಬೇಹುಗಾರಿಕೆ ತನಿಖೆಯ ಒತ್ತಾಯದಲ್ಲಿ ಸದನದ ಕಲಾಪ ಹಾಳಾಗದಂತೆ ನೋಡಿಕೊಳ್ಳಬೇಕು. ಆ ಜವಾಬ್ದಾರಿಯನ್ನು ಪ್ರತಿ ಸಂಸತ್‌ ಸದಸ್ಯರೂ ಮನಗಾಣಬೇಕಿದೆ.

The post ಸಂಸತ್‌ನಲ್ಲಿ ಪೆಗಸಸ್​ ಕೋಲಾಹಲ.. ವಿಪಕ್ಷಗಳ ಪ್ರಶ್ನೆಗಳೇನು..? ಕೇಂದ್ರದ ಉತ್ತರವೇನು..? appeared first on News First Kannada.

Source: newsfirstlive.com

Source link