ಚಿಕ್ಕಮಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅವರು ಇನ್ನು ನೆನಪು ಮಾತ್ರ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ತಮ್ಮ ಬದುಕಿನ ಸಂಚಾರವನ್ನ ವಿಜಯ್ ಮುಗಿಸಿದ್ದು, ಮಣ್ಣಲ್ಲಿ ಮಣ್ಣಾಗಿದ್ದಾರೆ.

ಸ್ವಗ್ರಾಮ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ವಿಜಯ್ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವ ಹಾಗೂ ಹಿಂದೂ ಲಿಂಗಾಯತ ಸಂಪ್ರದಾಯ ಪ್ರಕಾರ ನೆರವೇರಿತು. ತುಮಕೂರಿನ ಶ್ರೀ ಕುಪ್ಪುರು ಗದ್ದುಗೆ ಮಠದ ಡಾ.ಯತೀಶ್ವರ್ ಶಿವಚಾರ್ಯ ಸ್ವಾಮಿ ನೇತೃತ್ವದಲ್ಲಿ ಹಿಂದೂ ಲಿಂಗಾಯತ ಸಂಪ್ರದಾಯ ಪ್ರಕಾರ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯ ವಿಧಿ-ವಿಧಾನಗಳು ನಡೆದವು. ವಿಜಯ್ ಅವರ ಸಹೋದರ ಸಿದ್ದೇಶ್ ಕುಮಾರ್ ಅಂತಿಮ ವಿಧಿ-ವಿಧಾನವನ್ನ ನೆರವೇರಿಸಿದರು.

ಜೂನ್ 12 ರಾತ್ರಿ ಸಂಚಾರಿ ವಿಜಯ್​​ ಅವರು ಬೈಕ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.  ನಂತರದ ಬೆಂಗಳೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಿ, ಅವರನ್ನ ಉಳಿಸಿಕೊಳ್ಳುವ ಪ್ರಯತ್ನ ನಡೆದಿತ್ತು. ಆದರೆ ವಿಜಯ್ ಬ್ರೈನ್​ ಡೆಡ್ ಆಗಿದ್ದರಿಂದ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಈ ಮೂಲಕ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮರೆದರು. ಅದರಂತೆ ಇಂದು ಬೆಳಗ್ಗೆ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ಬೆಳಗ್ಗೆ 10.30ರ ವರೆಗೂ ವಿಜಯ್​ರ ಪಾರ್ಥಿವ ಶರೀರದ ಅಂತಿಮ ದರ್ಶನ ನಡೆಯಿತು. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿ ಗ್ರಾಮಕ್ಕೆ ಪಾರ್ಥಿವ ಶರೀರವನ್ನ ತೆಗೆದುಕೊಂಡು ಬಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಗೆ ಸರ್ಕಾರದ ಪರ ಸಚಿವ ಜೆ.ಸಿ.ಮಾಧುಸ್ವಾಮಿ ಆಗಮಿಸಿದ್ದರು. ವಿಜಯ್ ಅವರ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಇದ್ದರು. ಇನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ, ತಹಶೀಲ್ದಾರ್​ ಹಾಗೂ ಅನೇಕ ಗಣ್ಯರು, ಅಭಿಮಾನಿಗಳು ಉಪಸ್ಥಿತರಿದ್ದರು.

The post ಸಕಲ ಸರ್ಕಾರಿ ಗೌರವದೊಂದಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಅಂತ್ಯಕ್ರಿಯೆ appeared first on News First Kannada.

Source: newsfirstlive.com

Source link