ಕೆಲಸದ ಒತ್ತಡದಲ್ಲೋ ಅಥವಾ ಯಾವುದೋ ಚಿಂತೆಯನ್ನು ಮನದೊಳಗೆ ತುಂಬಿಕೊಂಡು ಮಾಡುವ ಯಾವುದೇ ವ್ಯಾಯಾಮ, ಯೋಗ ಭಂಗಿಯಿಂದಾಗಲಿ ದೇಹ ಮತ್ತು ಮನಸ್ಸಿಗೆ ಸಂಪೂರ್ಣ ಲಾಭ ಕೊಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಎದ್ದ ತತ್‌ ಕ್ಷಣ ದೇಹ ಮತ್ತು ಮನಸ್ಸನ್ನು ಮೊದಲು ರಿಲ್ಯಾಕ್ಸ್‌ ಮೂಡ್‌ಗೆ ತಂದು ಬಳಿಕ ಒಂದೊಂದೇ ವ್ಯಾಯಾಮಗಳನ್ನು ಅಥವಾ ಯೋಗ ಭಂಗಿಗಳನ್ನು ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸನ್ನು ಒಟ್ಟಿಗೆ ಕೇಂದ್ರೀಕರಿಸಲು ಸಾಧ್ಯವಿದೆ.

ವ್ಯಾಯಾಮ ಮತ್ತು ಯೋಗ ಬೇರೆ ಬೇರೆಯಾದರೂ ಇವರೆಡೂ ತನ್ನದೇ ಆದ ಲಾಭವನ್ನು ದೇಹ ಮತ್ತು ಮನಸ್ಸಿಗೆ ಕೊಡುತ್ತದೆ. ವ್ಯಾಯಾಮ ಎಲ್ಲರೂ ಮಾಡಲು ಸಾಧ್ಯವಿಲ್ಲ. ಆದರೆ ಯೋಗಾಭ್ಯಾಸವನ್ನು ಯಾರು ಬೇಕಾದರೂ ಮಾಡಬಹುದು.

ಯೋಗದ ಪ್ರಮುಖ ಲಾಭವೆಂದರೆ ಅದು ನಮ್ಮ ವರ್ತನೆಯನ್ನು ಬದಲಾಯಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ವರ್ತನೆಯೂ ಅವನ ದೇಹ ಮತ್ತು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ನಿತ್ಯ ಯೋಗ ಮಾಡುವುದರಿಂದ ನಮ್ಮಲ್ಲಿ ಸಕಾರಾತ್ಮಕ ಗುಣಗಳು ವೃದ್ಧಿಸಿ ಸ್ನೇಹಶೀಲ ಪ್ರವೃತ್ತಿ ನಮ್ಮದಾಗುವುದು.

ಹುಟ್ಟುವಾಗ ನಾವೆಲ್ಲರೂ ಯೋಗಿಗಳಾಗಿರುತ್ತೇವೆ. ಹೀಗಾಗಿ ಯೋಗ ಶಿಕ್ಷಕರ ಅವಶ್ಯಕತೆಯೇ ನಮಗಿರುವುದಿಲ್ಲ. ಕೆಲವು ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ. ಮೂರು ತಿಂಗಳಿನಿಂದ ಸುಮಾರು ಮೂರು ವರ್ಷಗಳವರೆಗೆ ಮಗು ಎಲ್ಲ ಯೋಗಾಸನಗಳನ್ನೂ ಮಾಡುತ್ತದೆ. ಅದರ ಉಸಿರಾಟ, ಮಲಗುವ ಭಂಗಿಯಲ್ಲೂ ಯೋಗವಿರುತ್ತದೆ. ಇದರಿಂದ ಅದು ಒತ್ತಡ ರಹಿತವಾಗಿ, ಹೆಚ್ಚು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ.

ಯೋಗವು ನಮ್ಮೊಳಗೆ ಸಕಾರಾತ್ಮಕತೆಯನ್ನು ವೃದ್ಧಿಸು ತ್ತದೆ. ಯೋಗ ಎನ್ನುವುದು ಕೇವಲ ವ್ಯಾಯಾಮವಲ್ಲ. ಅದೊಂದು ಕೌಶಲ. ಯೋಗವು ನಮ್ಮೊಳಗಿನ ಎಲ್ಲ ಅಂಶಗಳನ್ನು ಒಂದುಗೂಡಿಸಲು ಪ್ರಯತ್ನಿಸುತ್ತದೆ. ಇದರಿಂದ ಸಂತೋಷ ವೃದ್ಧಿಯಾಗುತ್ತದೆ. ನಮ್ಮೊಳಗೆ ಎಷ್ಟೇ ಉದ್ವೇಗ, ಅಶಾಂತಿ ಇದ್ದರೂ ನಿತ್ಯ ಯೋಗದಿಂದ ನೆಮ್ಮದಿ, ಸಂತೋಷ ತುಂಬಿ ಕೊಳ್ಳಲು ಸಾಧ್ಯವಿದೆ. ಇದರಿಂದ ಖಿನ್ನತೆಯನ್ನು ದೂರ ಮಾಡಬಹುದು.

ಆರೋಗ್ಯ – Udayavani – ಉದಯವಾಣಿ
Read More