ಸ್ನೇಹ್ ರಾಣಾ.. ಸದ್ಯ ಟೀಮ್ ಇಂಡಿಯಾ ಮಹಿಳಾ ತಂಡದ ಹೊಸ ಸೆನ್ಸೇಷನ್.. ಇಂಗ್ಲೆಂಡ್​ ವಿರುದ್ಧದ ಚೊಚ್ಚಲ ಟೆಸ್ಟ್​ ಪಂದ್ಯದಲ್ಲಿ ಮಿಂಚಿದ ಈ ತಾರೆ, ಸೋಲಿನ ಸುಳಿಯಲ್ಲೂ ದಿಟ್ಟ ಹೋರಾಟ ನಡೆಸಿದ ಹೋರಾಟಗಾರ್ತಿ. ಆದ್ರೆ ನಿಜ ಜೀವನಕ್ಕೂ ಈ ರೋಚಕ ಇನ್ನಿಂಗ್ಸ್​ ಅನ್ವಯವಾಗುತ್ತೆ.. ಇಂದು ಭೇಷ್ ಎನಿಸಿಕೊಳ್ತಿರುವ ಸ್ನೇಹ್ ಸಕ್ಸಸ್ ಹಿಂದೆ, ಕರುಣಾಜನಕ ಕಥೆಯೇ ಇದೆ.

ಮಹಿಳಾ ಕ್ರಿಕೆಟ್ ಲೋಕದಲ್ಲಿ ಹೆಚ್ಚು ಸದ್ದು ಮಾಡ್ತಿರೋದು ಇಬ್ಬರು.. ಒಬ್ಬರು ಶೆಫಾಲಿ ವರ್ಮಾ, ಮತ್ತೊಬ್ಬರು ಸ್ನೇಹ್ ರಾಣಾ! ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಡೆಬ್ಯು ಮಾಡಿದ ಇವರಿಬ್ಬರು, ಬ್ರಿಸ್ಟಲ್ ಟೆಸ್ಟ್​ ಪಂದ್ಯದ ಪ್ರಮುಖ ಆಕರ್ಷಣೆ. ಆದ್ರೆ ಈ ಪಂದ್ಯದಲ್ಲಿ ದಿಟ್ಟ ಹೋರಾಟಗಾರ್ತಿ ಎನಿಸಿದ್ದು ಮಾತ್ರ, ಸ್ನೇಹ್ ರಾಣಾ.

ಮಿಥಾಲಿ ಪಡೆ ವಿರುದ್ಧದ ಏಕೈಕ ಟೆಸ್ಟ್​​​​​ ಪಂದ್ಯದಲ್ಲಿ ಅಧಿಪತ್ಯ ಸಾಧಿಸಿದ್ದ ಇಂಗ್ಲೆಂಡ್, ಇನ್ನೇನು ಗೆದ್ದೇ ಬಿಟ್ಟೆವೆಂಬ ಕನಸಿನಲ್ಲಿ ತೇಲಾಡುತ್ತಿತ್ತು.. ಎರಡನೇ ಇನ್ನಿಂಗ್ಸ್​ನಲ್ಲಿ 199 ರನ್​​​ಗಳಿಗೆ ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ, ಇನ್ನಿಂಗ್ಸ್​ ಸೋಲಿನ ಭೀತಿಗೆ ಸಿಲುಕಿತ್ತು. ಆದ್ರೆ ಈ ವೇಳೆ ದಿಟ್ಟ ಹೋರಾಟ ನಡೆಸಿದ್ದ ಸ್ನೇಹ್ ರಾಣಾ, ತಾನಿಯಾ ಭಾಟಿಯಾ ಜೊತೆಗೂಡಿ 9ನೇ ವಿಕೆಟ್​ಗೆ ಮುರಿಯದ 104 ರನ್​​ಗಳ ಜೊತೆಯಾಟವಾಡಿದ್ರು.

ಸೋಲಿನ ದವಡೆಗೆ ಸಿಲುಕಿದ್ದ ಟೀಮ್ ಇಂಡಿಯಾವನ್ನ ಪಾರು ಮಾಡಿದ್ದೇ, ಈ ಜೋಡಿ. ಬ್ಯಾಟಿಂಗ್​​ನಲ್ಲಿ ಅಜೇಯ 80 ರನ್ ಸಿಡಿಸಿದ್ದ ಸ್ನೇಹ್, ಬೌಲಿಂಗ್​ನಲ್ಲೂ ಪ್ರಮುಖ ನಾಲ್ಕು ವಿಕೆಟ್ ಪಡೆದ್ರು. ಅಲ್ಲದೆ ಡೆಬ್ಯೂ ಮ್ಯಾಚ್​ನಲ್ಲೇ ನಾಲ್ಕು ವಿಕೆಟ್, ಅರ್ಧಶತಕ ಸಿಡಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆ ತನ್ನದಾಗಿಸಿಕೊಂಡರು.! ಆದ್ರೆ ಈ ಪ್ರದರ್ಶನದ ಹಿಂದೆ ಕಣ್ಣೀರ ಕಥೆಯಿದೆ.

ಎರಡು ತಿಂಗಳ ಹಿಂದೆ ತಂದೆ ಕಳೆದುಕೊಂಡಿದ್ದ ಸ್ನೇಹ್ ರಾಣಾ
ಇಂದು ಸ್ನೇಹ್ ರಾಣಾ ಸಾಧನೆ ಹಿಂದಿನ ವ್ಯಕ್ತಿ, ತಂದೆ ಭಗವಾನ್ ಸಿಂಗ್. ಪ್ರತಿಹಂತದಲ್ಲೂ ಮಗಳಿಗೆ ನೆರಳಾಗಿ, ಬೆಂಬಲವಾಗಿ ನಿಂತಿದ್ದ ಪ್ರೀತಿಯ ತಂದೆ ಭಗವಾನ್ ಸಿಂಗ್​ಗೆ, ಮಗಳೆಂದರೆ ಪ್ರಾಣ. ಇನ್ನು ಈ ತಂದೆಯ ಕನಸು, ರಾಷ್ಟ್ರೀಯ ತಂಡದಲ್ಲಿ ನನ್ನ ಮಗಳು ಮತ್ತೆ ಕಾಣಿಸಿಕೊಳ್ಳಬೇಕು ಅನ್ನೋದೇ ಆಸೆ ಆಗಿತ್ತು. ಆದ್ರೆ ದುರಾದೃಷ್ಟವಷಾತ್ ಎರಡು ತಿಂಗಳ ಹಿಂದೆ ಸ್ನೇಹ್​ ತಂದೆ, ಹೃದಯಾಘಾತಕ್ಕೊಳಗಾಗಿ ದೈವಾಧೀನರಾಗಿದ್ದರು.

ಅಪ್ಪನಿಲ್ಲದ ಕೊರಗು, ಸ್ನೇಹ್​ಗೆ ಮನಸಲ್ಲೇ ಕೊರೆಯುತ್ತಿತ್ತು. ಆದ್ರೆ ಅಪ್ಪ ಕಾಣುತ್ತಿದ್ದ ಕನಸು ನಿಜವಾಗಿತ್ತು. ಅದರಂತೆ ಟೀಮ್ ಇಂಡಿಯಾಕ್ಕೆ ಕಮ್​​ಬ್ಯಾಕ್ ಮಾಡಿದರು. ಅಷ್ಟೇ ಅಲ್ಲ..! ಹೀನಾಯ ಸೋಲು ಕಾಣುತ್ತಿದ್ದ ಭಾರತ ತಂಡವನ್ನ, ದಿಟ್ಟ ಹೋರಾಟದಿಂದ ರಕ್ಷಣೆ ಮಾಡಿದರು.. ಆದ್ರೆ ಈ ಇನ್ನಿಂಗ್ಸ್​ ನೋಡಲು ತಂದೆ ಇಲ್ಲ ಎಂಬ ನೋವು ಹಾಗೇ ಇತ್ತು.

ನಾನು ಎರಡು ತಿಂಗಳ ಹಿಂದೆ ನನ್ನ ತಂದೆಯನ್ನು ಕಳೆದುಕೊಂಡೆ. ಇದು ನನಗೆ ಕಷ್ಟಕರ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು. ಏಕೆಂದರೆ ನಮ್ಮ ತಂದೆ, ನಾನು ಭಾರತಕ್ಕಾಗಿ ಆಡುವುದನ್ನ ನೋಡಲು ಬಯಸಿದ್ದರು. ಆದರೆ ದುರದೃಷ್ಟವಶಾತ್ ಸಾಧ್ಯವಾಗಲಿಲ್ಲ. ಈಗ ನಾನು ಏನು ಮಾಡಬಹುದು, ಎಲ್ಲವನ್ನೂ ಅವರಿಗಾಗಿ ಅರ್ಪಿಸುತ್ತೇನೆ.
ಸ್ನೇಹ್ ರಾಣಾ, ಆಟಗಾರ್ತಿ

ಅಪ್ಪನ ಮುದ್ದಿನ ಮಗಳಾಗಿದ್ದ ಸ್ನೇಹ್ ರಾಣಾ
ಡೆಹ್ರಾಡೂನ್‌ನಿಂದ 20 ಕಿ.ಮೀ ದೂರದಲ್ಲಿನ ಸಿನೋಲಾ ಗ್ರಾಮದಲ್ಲಿ ಹುಟ್ಟಿ ಬೆಳೆದ ಸ್ನೇಹ್ ರಾಣಾ, ಅಪ್ಪನ ಮುದ್ದಿನ ಕಿರಿಯ ಮಗಳಾಗಿದ್ದಳು..! ಬಾಲ್ಯದಲ್ಲೇ ಕ್ರೀಡೆಯತ್ತ ಆಕರ್ಷಣೆಗೊಂಡಿದ್ದ ಸ್ನೇಹ್, ಬ್ಯಾಡ್ಮಿಂಟನ್‌ನಿಂದ ಹಿಡಿದು ಕ್ರಿಕೆಟ್‌ವರೆಗಿನ ಎಲ್ಲಾ ಕ್ರೀಡೆಗಳಲ್ಲೂ, ತಮ್ಮನ್ನ ತೊಡಗಿಸಿಕೊಳ್ಳುತ್ತಿದ್ದರು. ಮನೆಯ ಗಂಡುಬೀರಿ ಅಂತ ಕರೆಸಿಕೊಳ್ಳುತ್ತಿದ್ದ ಸ್ನೇಹ, ಮನೆಯ ಪಕ್ಕದ ಮೈದಾನದಲ್ಲಿ ಹುಡುಗರ ಜೊತೆ, ಕ್ರಿಕೆಟ್ ಮ್ಯಾಚ್​​​ ಆಡುತ್ತಿದ್ದರು.

ಕ್ರಿಕೆಟ್‌ ಮೇಲಿನ ಆಸಕ್ತಿ ನೋಡಿದ ತಂದೆ ಭಾಗವಾನ್ ಸಿಂಗ್, 9 ವರ್ಷದ ಕಿರಿಯ ಮಗಳನ್ನ ಲಿಟಲ್ ಮಾಸ್ಟರ್ಸ್ ಕ್ರಿಕೆಟ್​ ಅಕಾಡೆಮಿಗೆ ಸೇರಿಸಿದ್ದರು. ಅಷ್ಟೇ ಅಲ್ಲ..! ಹೆಜ್ಜೆ ಹೆಜ್ಜೆಗೂ ಬೆಂಬಲಿಸಿ ಪ್ರೋತ್ಸಾಹ ನೀಡುತ್ತಿದ್ದರು. ಇದರ ಫಲವಾಗಿ 2014ರಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡವನ್ನ ಪ್ರತಿಧಿಸಿದರು..

ಸ್ನೇಹ್ ರಾಣಾಗೆ ಮುಳುವಾಗಿತ್ತು ಮೊಣಕಾಲಿನ ಇಂಜುರಿ
ಐದು ವರ್ಷಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್​​ಬ್ಯಾಕ್

2014ರಲ್ಲಿ ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದ ಸ್ನೇಹ್​​ ರಾಣಾ, ವೈಟ್​ಬಾಲ್ ಕ್ರಿಕೆಟ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದರು. 2 ವರ್ಷಗಳ ಕಾಲ ತಂಡದಲ್ಲಿದ್ದ ಸ್ನೇಹ್ ರಾಣಾಗೆ, ಮೊಣಕಾಲಿನ ಇಂಜುರಿ ದೊಡ್ಡ ಹೊಡೆತವನ್ನೇ ಕೊಟ್ಟಿತ್ತು. ಪರಿಣಾಮ ತಂಡದಿಂದಲೂ ಹೊರಗುಳಿಯಬೇಕಾಯ್ತು. ನಂತರ ಫುಲ್​ ಸೈಡ್​ಲೈನ್ ಆಗಿದ್ದ ಸ್ನೇಹ್ ರಾಣಾ, ತಂಡಕ್ಕೆ ಮರುಳೋದು ಕಷ್ಟಸಾಧ್ಯವೇ ಆಗಿತ್ತು..

ಈ ವೇಳೆ ಫಿಟ್ನೆಸ್​ ಕಾಯ್ದುಕೊಳ್ಳುವತ್ತ ದೃಷ್ಟಿ ನೆಟ್ಟಿದ್ದ ಸ್ನೇಹ್ ರಾಣಾ, ಪ್ರಸಕ್ತ ವರ್ಷ ದೇಶಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆಲ್​ರೌಂಡರ್​ ಆಗಿ 120ಕ್ಕೂ ಹೆಚ್ಚಿನ ಸ್ಟ್ರೈಕ್​ರೇಟ್​ನಲ್ಲಿ 160 ರನ್ ಕಲೆಹಾಕಿದ ಸ್ನೇಹ್ ರಾಣಾ, 18 ವಿಕೆಟ್​ ಉರುಳಿಸಿದ್ದರು.. ಅಷ್ಟೇ ಅಲ್ಲ, ಫೈನಲ್​ ಪಂದ್ಯದಲ್ಲಿ ಮೂರು ವಿಕೆಟ್ ಉರುಳಿಸಿ, ಅಜೇಯ 34 ರನ್ ಸಿಡಿಸಿದ ಸ್ನೇಹ್, ರೈಲ್ವೇಸ್ ವುಮೆನ್ಸ್, ಮಹಿಳಾ ಏಕದಿನ ಪ್ರಶಸ್ತಿ ಗೆಲುವಿಗೆ ಕಾರಣರಾದರು.

ಇದರೊಂದಿಗೆ ಆಯ್ಕೆಗಾರರ ಗಮನ ಸೆಳೆದ ಸ್ನೇಹ್, ಇಂಗ್ಲೆಂಡ್ ಪ್ರವಾಸಕ್ಕೆ ಟಿಕೆಟ್ ಗಿಟ್ಟಿಸಿದರು. ಈಗ ಸಿಕ್ಕ ಅವಕಾಶದಲ್ಲಿ ಮಿಂಚಿದ ಸ್ನೇಹ್ ರಾಣಾ ಆಯ್ಕೆಗಾರರು ತಮ್ಮ ಮೇಲಿಟ್ಟ ಭರವಸೆ ಉಳಿಸಿದ್ದಾರೆ.. ಅಷ್ಟೇ ಅಲ್ಲ, ದಿಟ್ಟ ಹೋರಾಟದ ಇನ್ನಿಂಗ್ಸ್​ನೊಂದಿಗೆ ಸ್ಟ್ರಾಂಗ್ ಕಮ್​ಬ್ಯಾಕ್ ಮಾಡಿದ್ದಾರೆ. ಆ ಮೂಲಕ ತಾನೋರ್ವ ಗಟ್ಟಿಗಿತ್ತಿ ಎಂಬ ಸಂದೇಶ ರವಾನಿಸಿದ್ದಾರೆ. ಅದೇನೇ ಆಗಲಿ, ಬಹುಕಾಲದ ಬಳಿಕ ತಂಡಕ್ಕೆ ಕಮ್​ಬ್ಯಾಕ್ ಮಾಡಿರೋ ಸ್ನೇಹ್ ರಾಣಾ, ತಮ್ಮ ಅದ್ಭುತ ಪ್ರದರ್ಶನ ಹೀಗೆ ಮುಂದುವರಿಸಲಿ, ತಂಡಕ್ಕೆ ಮತ್ತಷ್ಟು ಗೆಲುವು ತಂದುಕೊಡಲಿ ಅನ್ನೋದೇ ಅಭಿಮಾನಿಗಳ ಆಶಯ.

ಕೇವಲ ಆಟದಲ್ಲಿ ಮಾತ್ರವಲ್ಲದೇ ಆ್ಯಕ್ಟಿಂಗ್​ನಲ್ಲೂ ಸ್ನೇಹ್ ರಾಣಾ ಸೋಶಿಯಲ್ ಮೀಡಿಯಾದಲ್ಲಿ ಸೈ ಎನಿಸಿಕೊಂಡಿದ್ದಾರೆ.

 

View this post on Instagram

 

A post shared by Sneh Rana♥ (@sneh_rana94)

ವಿಶೇಷ ವರದಿ: ಸಂತೋಷ್

The post ಸಕ್ಸಸ್​ ಹಿಂದಿನ ನೋವಿನ ಕಥೆ.. ಅಪ್ಪನ ಕನಸು ನನಸಾಗಿಸಿದ ಹೆಮ್ಮೆಯ ಆಟಗಾರ್ತಿ appeared first on News First Kannada.

Source: newsfirstlive.com

Source link