ಸಚಿವೆ ಜೊಲ್ಲೆ ಭ್ರಷ್ಟಾಚಾರ ಆರೋಪ ಕೇಸ್​ಗೆ ಟ್ವಿಸ್ಟ್ ; ತನಿಖೆ ಚುರುಕುಗೊಳಿಸಿದ ACB

ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಾಸಕ ಪರಣ್ಣ ಮುನವಳ್ಳಿ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಕಾನೂನು ಕುಣಿಕೆ ಸದ್ದಿಲ್ಲದೇ ಸಿದ್ಧವಾಗುತ್ತಿದೆ. ರಾಜ್ಯದಾದ್ಯಂತ ಎಸಿಬಿ ಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ನ್ಯೂಸ್ ಫಸ್ಟ್ ಕೂಡಾ ತನಿಖೆಗೆ ಸಹಕರಿಸುತ್ತಿದ್ದು ಪೂರಕ ದಾಖಲೆಗಳನ್ನು ಎಸಿಬಿ ನೀಡಿದೆ.

ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೆಳಗಾವಿಯ ಎಸಿಬಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ರಾಜ್ಯದ ನಾಲ್ಕು ಕಡೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಶಾಸಕ ಪರಣ್ಣ ಮುನವಳ್ಳಿ ಅವರ ವಿರುದ್ಧ ಎಸಿಬಿಯಲ್ಲಿ ದೂರುಗಳು ದಾಖಲಾಗಿದ್ದವು. ಬೆಳಗಾವಿಯ ಸಮಾಜ ಸೇವಕ ಭೀಮಪ್ಪ ಗಡಾದ, ತುಮಕೂರಿನ ಮಾನವ ಹಕ್ಕುಗಳ ಕಾರ್ಯಕರ್ತ ಕೆ. ಎಸ್. ಸಾದಿಕ್ ಪಾಷಾ ಬೆಳಗಾವಿ ಜಿಲ್ಲೆಯ ಖಾನಟ್ಟಿ ಗ್ರಾಮದ ಗುರುಬಸಗೌಡ ಪಾಟೀಲ ಹಾಗೂ ಕೊಪ್ಪಳದ ರೈತ ಸಂಘದ ಮುಖಂಡ ಶರಣೇಗೌಡ ಪಾಟೀಲ ಆಯಾ ಜಿಲ್ಲೆಗಳಲ್ಲಿ ಎಸಿಬಿ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಯಾ ಜಿಲ್ಲೆಗಳಲ್ಲಿ ದೂರು ನೀಡಲಾಗಿತ್ತು. ನಾಲ್ಕೂ ದೂರುಗಳನ್ನು ಬೆಳಗಾವಿ ಎಸಿಬಿ ಕಚೇರಿಗೆ ವರ್ಗಾಯಿಸಲಾಗಿದೆ. ದೂರಿನ ಹಿನ್ನೆಲೆ ಎಸಿಬಿ ಅಧಿಕಾರಿಗಳು ನ್ಯೂಸ್ ಫಸ್ಟ್ ಸೇರಿದಂತೆ ದೂರುದಾರರಿಗೂ ನೋಟೀಸ್ ಜಾರಿ ಮಾಡಿ ಪೂರಕ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದ್ದರು.

ಇದನ್ನೂ ಓದಿ:ಅಕಸ್ಮಾತ್ RSS ಇರದಿದ್ರೆ ಭಾರತ ಪಾಕಿಸ್ತಾನ ಆಗುತ್ತಿತ್ತು -ಮಾಜಿ ಸಿಎಂ ಜಗದೀಶ್ ಶೆಟ್ಟರ್

ಎಸಿಬಿ ತನಿಖೆ ಆರಂಭಿಸುತ್ತಿದ್ದಂತೆಯೇ ನ್ಯೂಸ್ ಫಸ್ಟ್​ಗೂ ಕೂಡಾ ನೊಟೀಸ್ ಜಾರಿ ಮಾಡಿ ಹಲವು ದಾಖಲೆಗಳನ್ನು ಕೇಳಿತ್ತು. ಅದರಲ್ಲಿ ಪ್ರಮುಖವಾಗಿ ಸ್ಟಿಂಗ್ ಆಪರೇಷನ್ ನ ಮೂಲ ಆಡಿಯೋ ವಿಡಿಯೋ ಹಾಜರುಪಡಿಸಬೇಕು, ಲಂಚದ ಭಾಗವಾಗಿ ಚಿಕ್ಕೋಡಿಯ ಸಂಜಯಗೆ ಅವರ ಬಳಿ ಹೋಗಿ ಕೊಟ್ಟಿರುವ 25 ಲಕ್ಷ ರೂಪಾಯಿ ಹಣದ ಮೂಲ ಹಾಗೂ ಸ್ಟಿಂಗ್ ಆಪರೇಷನ್ ನಡೆಸಿದ ಸ್ಥಳ ದಿನಾಂಕ ಮತ್ತು ವೇಳೆಯ ಕುರಿತು ಸಂಪೂರ್ಣ ಮಾಹಿತಿ ಕೇಳಲಾಗಿತ್ತು. ನ್ಯೂಸ್ ಫಸ್ಟ್ ಒಂದು ಜವಾಬ್ದಾರಿಯುತ ಮಾಧ್ಯಮವಾಗಿ, ತನಿಖೆಗೆ ಸಹಕಾರ ನೀಡುವ ದೃಷ್ಠಿಯಿಂದ ಎಸಿಬಿ ಅಧಿಕಾರಿಗಳು ಹೇಳಿದ ಎಲ್ಲ ದಾಖಲೆ ಹಾಗೂ ಮಾಹಿತಿಗಳನ್ನು ಒದಗಿಸಿದೆ.

ಇದನ್ನೂ ಓದಿ:‘ಈ ಮನುಷ್ಯ ಹೇಗೆ ಸಾಲ ಮನ್ನಾ ಮಾಡ್ತಾನೆ ಎಂದು ಅನ್ನಿಸಿತ್ತು’- ಹೆಚ್​ಡಿಕೆ ಬಗ್ಗೆ ಮಾಜಿ ಪ್ರಧಾನಿ ಮಾತು

ಸ್ಟಿಂಗ್ ಆಪರೇಷನ್ ನ ಮೂಲ ಆಡಿಯೋ ವಿಡಿಯೋ ಪ್ರತಿ ಬೆಳಗಾವಿಯ ಎಸಿಬಿ ಅಧಿಕಾರಿಗಳಿಗೆ ನೀಡಲಾಗಿದ್ದು, ಅಲ್ಲದೇ 25 ಲಕ್ಷ ರೂಪಾಯಿ ನ್ಯೂಸ್​ಫಸ್ಟ್ ಸಂಸ್ಥೆಗೆ ಸೇರಿದ್ದು ಎಂದು ಸ್ಪಷ್ಟ ಪಡಿಸಲಾಗಿದ್ದು, ಈ ಕುರಿತ ದಾಖಲೆಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡಲಾಗಿದೆ ಎಂದು ಕೂಡಾ ಉತ್ತರಿಸಲಾಗಿದೆ.. ಅದರ ಜೊತೆಗೆ ಸ್ಟಿಂಗ್ ಆಪರೇಷನ್ ನಡೆಸಿದ ಸ್ಥಳ ದಿನಾಂಕ ಹಾಗೂ ಸಮಯದ ಕುರಿತು ನಿಖರ ಮಾಹಿತಿಯನ್ನು ಎಸಿಬಿ ಅಧಿಕಾರಿಗಳಿಗೆ ನೀಡಲಾಗಿದೆ. ಎಸಿಬಿ ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೂ ನ್ಯೂಸ್ ಫಸ್ಟ್ ಸಮರ್ಪಕ ಉತ್ತರ ನೀಡಿದ್ದು ತನಿಖೆಗೆ ಸಹಕರಿಸಲು ಸಿದ್ಧವಿದೆ ಎಂದು ಕೂಡಾ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:’ಬಿಜೆಪಿ ನಾಯಕರು ಬರ್ಲಿ.. RSS ಕುರಿತು ಚರ್ಚಿಸಲು ನಾನ್​ ರೆಡಿ’-ಹೆಚ್​.ಡಿ.ಕುಮಾರಸ್ವಾಮಿ

ಸ್ಟಿಂಗ್ ಆಪರೇಷನ್ ಮೂಲ ಆಡಿಯೋ ವಿಡಿಯೋ ತನಿಖಾ ಸಂಸ್ಥೆಗಳಿಗೆ ನೀಡುವದು ಅಷ್ಟು ಸುಲಭದ ಮಾತಲ್ಲ. ಒಂದೇ ಒಂದು ಸಣ್ಣ ತಪ್ಪಿದ್ದರೂ ಪ್ರಕರಣ ತಿರುವು ಮುರುವಾಗುವ ಸಾಧ್ಯತೆಗಳಿರುತ್ತವೆ. ಆದರೆ ನ್ಯೂಸ್ ಫಸ್ಟ್ ನಡೆಸಿದ ಕಾರ್ಯಾಚರಣೆ ಯಾರ ಹಿತಕ್ಕೂ ಯಾರ ಷಡ್ಯಂತ್ರಕ್ಕೂ ಯಾವ ರಾಜಕೀಯ ಪಿತೂರಿಗೂ ಒಳಗಾಗಿದ್ದಲ್ಲ.. ಅದು ಕೇವಲ ರಾಜ್ಯದ ಬಡ ಮಕ್ಕಳ ಬಡ ಬಾಣಂತಿಯ ಗರ್ಭಿಣಿಯ ಹಿತ ಕಾಯೋದಕ್ಕಾಗಿ ಮಾತ್ರ ನಡೆಸಲಾಗಿತ್ತು. ಇದೇ ಕಾರಣಕ್ಕೆ ನ್ಯೂಸ್ ಫಸ್ಟ್ ಮೂಲ ಆಡಿಯೋ ವಿಡಿಯೋ ಜೊತೆ ಪೂರಕ ದಾಖಲೆಗಳನ್ನು ಎಸಿಬಿ ನೀಡಿದೆ. ಈಗ ಚೆಂಡು ಎಸಿಬಿ ಅಂಗಳದಲ್ಲಿದೆ.

ವಿಶೇಷ ವರದಿ: ಪ್ರಕಾಶ್​ ನೂಲ್ವಿ, ನ್ಯೂಸ್​ಫಸ್ಟ್​ ಹುಬ್ಬಳ್ಳಿ

News First Live Kannada

Leave a comment

Your email address will not be published. Required fields are marked *