ಬೆಂಗಳೂರು: ಕೊರೊನಾ ಎರಡನೇ ಅಲೆಯ ತೀವ್ರತೆ ರಾಜ್ಯದಲ್ಲಿ ಹೆಚ್ಚಾಗಿದ್ದು, ಸರ್ಕಾರ ಕಠಿಣ ಕ್ಲೋಸ್​​ಡೌನ್​​ ನಿಯಮಗಳ ಮೊರೆ ಹೋಗಿದೆ. ಇದೇ ಸಂದರ್ಭದಲ್ಲಿ ವಿಪಕ್ಷಗಳು ಕೊರೊನಾ ನಿಯಂತ್ರಣ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿದ್ದು, ಆಡಳಿತ ಪಕ್ಷದ ನಿರ್ಲಕ್ಷ್ಯವೇ ಇದಕ್ಕೆ ಹೊಣೆ ಅಂತಾ ಆರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಅವರು ಸಚಿವ ಸಂಪುಟ ಸದಸ್ಯರಿಗೆ ಖಡಕ್​ ಸೂಚನೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕೊರೊನಾ ನಿಯಂತ್ರಣ ಕುರಿತು ತೀರ್ಮಾನ ಕೈಗೊಳ್ಳುವ ಬಗ್ಗೆ ನಿನ್ನೆ ಕರೆದಿದ್ದ ಕ್ಯಾಬಿನೆಟ್ ‌ಮೀಟಿಂಗ್​​​ನಲ್ಲಿ ಸಿಎಂ ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಚಿವರು ಮಾಧ್ಯಮದ ಮುಂದೆ ಸುಖಾಸುಮ್ಮನೆ ಹೇಳಿಕೆ ನೀಡಬಾರದು. ಆರೋಗ್ಯ ಸಚಿವರು ಕೂಡ ದಿನಕ್ಕೆ ಒಂದು ದಿನ ಮಾಹಿತಿ ನೀಡಬೇಕು. ಇಲಾಖೆಯ ವ್ಯಾಪ್ತಿ ಬಿಟ್ಟು ಬೇರೆ ವ್ಯಾಪ್ತಿಯ ವಿಚಾರ ಮಾತನಾಡಬಾರದು. ಅದರಲ್ಲೂ ಕೊರೊನಾ ನಿರ್ವಹಣೆ ವಿಚಾರವಾಗಿ ಬೇಕಾಬಿಟ್ಟಿ ಹೇಳಿಕೆ ನೀಡಬಾರದು. ಅಲ್ಲೊಂದು, ಇಲ್ಲೊಂದು ಹೇಳಿಕೆ ಕೊಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರಬಾರದು ಎಂದು ಸೂಚಿಸಿದ್ದಾರಂತೆ.

ಆರೋಗ್ಯ ಸಚಿವ ಸುಧಾಕರ್ ಅವರು ಕೂಡ ಮಾಹಿತಿ ನೀಡುವ ಬರದಲ್ಲಿ ವಿಪಕ್ಷಕ್ಕೆ ಆಹಾರವಾಗಬಾರದು. ದಿನಕ್ಕೊಂದು ಬಾರಿ ಕೊರೊನಾ ನಿರ್ವಹಣೆ ಬಗ್ಗೆ ವರದಿ ನೀಡದರೆ ಸಾಕು. ಹೀಗಾಗಿ ಪ್ರತಿದಿನ ನಿತ್ಯ ಸಾಯಂಕಾಲ ಕೊರೊನಾ ವಿಚಾರದಲ್ಲಿ ಅಪ್​​ಡೇಟ್​​ ನೀಡಿ. ಕೊರೊನಾ ವಿಚಾರದಲ್ಲಿ ಗೊಂದಲದ ಹೇಳಿಕೆ ನೀಡುವುದರಿಂದ ನಮಗಷ್ಟೇ ಅಲ್ಲ, ಕೇಂದ್ರ ಸರ್ಕಾರಕ್ಕೂ ಕೆಟ್ಟ ಹೆಸರು ತರಬಾರದು. ಅಲ್ಲದೇ ಜನರಲ್ಲಿ ಆತಂಕ, ಗೊಂದಲ ಮೂಡಿಸುವ ಹೇಳಿಕೆಗಳು ನೀಡದೆ ಅವರನ್ನು ಹುರಿದುಂಬಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

 

The post ಸಚಿವ ಸುಧಾಕರ್​​​ ಸೇರಿದಂತೆ ಸಂಪುಟ ಸಚಿವರಿಗೆ ಯಡಿಯೂರಪ್ಪ ಖಡಕ್​ ಸೂಚನೆ appeared first on News First Kannada.

Source: newsfirstlive.com

Source link