ಕನ್ನಡ ಚಿತ್ರರಂಗದ “ಕೋಟಿ ನಿರ್ಮಾಪಕ’ ಖ್ಯಾತಿಯ, ಹಿರಿಯ ನಿರ್ಮಾಪಕ, ನಟಿ ಮಾಲಾಶ್ರೀ ಪತಿ ಕೆ. ರಾಮು (54) ಸೋಮವಾರ ಕೊರೋನಾ ಸೋಂಕಿನಿಂದ ನಿಧನರಾದರು. ಒಂದು ವಾರದ ಹಿಂದೆ ರಾಮು ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಅದಾದ ಬಳಿಕ ಹೋಂ ಕ್ವಾರೆಂಟೈನ್‌ನಲ್ಲಿದ್ದ ರಾಮು ಅವರ ಉಸಿರಾಟದಲ್ಲಿ ಏರು ಪೇರು ಉಂಟಾದ ಹಿನ್ನೆಲೆಯಲ್ಲಿ ಶನಿವಾರವಷ್ಟೇ, ನಗರದ ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾನುವಾರ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದಾರೂ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 8 ಗಂಟೆಯ ಹೊತ್ತಿಗೆ ರಾಮು ಕೊನೆಯುಸಿರೆಳೆದರು. ರಾಮು ಅವರು ಪತ್ನಿ ಮಾಲಾಶ್ರೀ, ಮಗಳು ಅನನ್ಯಾ, ಮಗ ಆರ್ಯನ್‌ ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.

ತಮ್ಮ ಕಾಲೇಜು ದಿನಗಳಿಂದಲೇ ಸಿನಿಮಾದತ್ತ ಆಸಕ್ತಿ ಬೆಳೆಸಿಕೊಂಡ ಕೆ. ರಾಮು ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆ, ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರ ಆರಂಭಿಸುವ ಮೂಲಕ ಉದ್ಯಮ ಲೋಕಕ್ಕೆ ಕಾಲಿಟ್ಟರು. ಬಳಿಕ ನಿಧಾನವಾಗಿ ಸಿನಿಮಾ ವಿತರಣೆಗೆ ಕೈ ಹಾಕಿದ ರಾಮು ಆರಂಭದಲ್ಲಿ ಕರ್ನಾಟಕದಲ್ಲಿ ತೆಲುಗು ಸಿನಿಮಾಗಳ ವಿತರಣೆಯ ಮೂಲಕ ವಿತರಕನಾಗಿ ಗಾಂಧಿನಗರಕ್ಕೆ ಪರಿಚಯವಾದರು. ಸಿನಿಮಾದಿಂದ ಬಂದ ಹಣವನ್ನು ಸಿನಿಮಾಕ್ಕೆ ಹಾಕಬೇಕು ಎಂಬ ತತ್ವವನ್ನು ಅಳವಡಿಸಿಕೊಂಡ ಕನ್ನಡದಕೆಲವೇ ಕೆಲವು ನಿರ್ಮಾಪಕರಲ್ಲಿ ರಾಮು ಕೂಡ ಒಬ್ಬರು.

ತಮ್ಮ ತೆಲುಗು ಚಿತ್ರಗಳ ವಿತರಣೆರಯಿಂದ ಬಂದ ಲಾಭವನ್ನು ನಿರ್ಮಾಣಕ್ಕೆ ವಿನಿಯೋಗಿಸಿದವ ರಾಮು, 1993ರಲ್ಲಿ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಜೊತೆಗೂಡಿ “ಗೋಲಿಬಾರ್‌’ ಚಿತ್ರವನ್ನು ಮೊದಲ ಬಾರಿಗೆ ನಿರ್ಮಿಸಿದರು. ಮೊದಲ ಸಿನಿಮಾವೇ ಸೂಪರ್‌ ಹಿಟ್‌ ಆಗುವ ಮೂಲಕ ರಾಮು ಅವರಿಗೆ ಹಣ, ಹೆಸರು ಎರಡನ್ನೂ ತಂದುಕೊಟ್ಟಿತು. ಅದಾದ ಬಳಿಕ ರಾಮು ಹಿಂದಿರುಗಿ ನೋಡಿದ್ದೇ ಇಲ್ಲ. ಒಂದರ ಹಿಂದೊಂದು ಬಿಗ್‌ ಬಜೆಟ್‌ ಸಿನಿಮಾಗಳನ್ನು ನಿರ್ಮಿಸುತ್ತ “ಕೋಟಿ ನಿರ್ಮಾಪಕ’ ಎಂದೇ ಪ್ರಖ್ಯಾತಿ ಪಡೆದರು

ಮೊದಲ ಕೋಟಿ ನಿರ್ಮಾಪಕ ಖ್ಯಾತಿ ಕನ್ನಡ ಚಿತ್ರರಂಗದಲ್ಲಿ ಕೇವಲ ಲಕ್ಷಗಳ ಬಂಡವಾಳ ಹೂಡಿ ಸಿನಿಮಾಗಳನ್ನು ನಿರ್ಮಿಸುತ್ತಿದ್ದ ಕಾಲದಲ್ಲಿ, ಮೊದಲ ಬಾರಿಗೆ 1990ರ ದಶಕದಲ್ಲಿಯೇ ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸಿದ ಖ್ಯಾತಿ ನಿರ್ಮಾಪಕ ರಾಮು ಅವರದ್ದು. ಅದಾದ ಬಳಿಕ ಇಡೀ ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ರಾಮು ಅವರನ್ನು “ಕೋಟಿ ನಿರ್ಮಾಪಕ’ ಎಂದೇ ಕರೆಯಲು ಪ್ರಾರಂಭಿಸಿದರು. ಅದರಲ್ಲೂ ಆ್ಯಕ್ಷನ್‌ ಸಿನಿಮಾಗಳ ನಿರ್ಮಾಣದಲ್ಲಿ ರಾಮು ಅವರದ್ದು ಎತ್ತಿದ ಕೈ.

ತಮ್ಮ ಸಿನಿಮಾ ತೆರೆಮೇಲೆ ಶ್ರೀಮಂತವಾಗಿ, ಅದ್ಧೂರಿಯಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದ ರಾಮು ಎಷ್ಟೇ ಖರ್ಚಾಗುತ್ತಿದ್ದರೂ, ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರ ಈ ಸಿನಿಮಾ ಪ್ರೀತಿಯೇ ಒಂದರ ಹಿಂದೊಂದು ಬಿಗ್‌ ಬಜೆಟ್‌ ಸಿನಿಮಾಗಳನ್ನು ನಿರ್ಮಿಸುವಂತೆ ಅವರನ್ನು ಪ್ರೇರೇಪಿಸುತ್ತಿತ್ತು. ಇಲ್ಲಿಯವರೆಗೆ ಕನ್ನಡದಲ್ಲಿ ಸತತವಾಗಿ ಒಂದರ ಹಿಂದೊಂದು ಬಿಗ್‌ ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡುತ್ತ ಸಕ್ರಿಯವಾಗಿರುವ ನಿರ್ಮಾಪಕರಲ್ಲಿ ರಾಮು ಮುಂಚೂಣಿಯಲ್ಲಿದ್ದರು.

ಮೃದು ಸ್ವಭಾವದ ಮಿತಭಾಷಿ

ನಿರ್ಮಾಪಕ ರಾಮು ಚಿತ್ರರಂಗದಲ್ಲಿ ಮತ್ತು ತಮ್ಮ ಆಪ್ತ ವಲಯದಲ್ಲಿ ಮೃದು ಸ್ವಭಾವದ ವ್ಯಕ್ತಿ, ಮಿತಿ ಭಾಷಿ, ಸರಳ, ಸಜ್ಜನಿಕೆಯ ವ್ಯಕ್ತಿ ಎಂದೇ ಗುರುತಿಸಿ ಕೊಂಡಿದ್ದರು. ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ, ವಿತರಕನಾಗಿ ಗುರುತಿಸಿಕೊಂಡಿದ್ದ ರಾಮು, ಎಂದಿಗೂ ಚಿತ್ರರಂಗದಲ್ಲಿ ಅನಗತ್ಯ ವಾದ-ವಿವಾದಗಳಿಗೆ ಸಿಲುಕಿದವರಲ್ಲ. ಕನ್ನಡ ಬಹುತೇಕ ಎಲ್ಲ ಸ್ಟಾರ್ ಜೊತೆ, ನಿರ್ಮಾಪಕರು – ನಿರ್ದೇಶಕರ ಜೊತೆ ಆತ್ಮೀಯ ಒಡನಾಟ ಹೊಂದಿದ್ದರು. ತಮ್ಮ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಮಾಲಾಶ್ರೀ ಅವರನ್ನೇ ವರಿಸುವ ಮೂಲಕ ರಾಮು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಪ್ರಮುಖ ಸೂಪರ್‌ ಹಿಟ್‌ ಸಿನಿಮಾಗಳು

“ಗೋಲಿಬಾರ್‌’ ಸಿನಿಮಾದ ಮೂಲಕ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯವಾದ ಕೆ. ರಾಮು “ಲಾಕಪ್‌ ಡೆತ್‌’, “ಗೋಲಿಬಾರ್‌’, “ಸಿಂಹದ ಮರಿ’, “ಎ.ಕೆ-47′, “ರಾಕ್ಷಸ’, “ಕಲಾಸಿಪಾಳ್ಯ’, ಸೇರಿ ಇಲ್ಲಿಯವರೆಗೆ ರಾಮು 39 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ 40ನೇ ಸಿನಿಮಾ ಪ್ರಜ್ವಲ್‌ ದೇವರಾಜ್‌ ಅಭಿನಯದ “ಅರ್ಜುನ್‌ ಗೌಡ’ ಸದ್ಯ ಬಿಡುಗಡೆಗೆ ರೆಡಿಯಾಗಿದ್ದು, ಇನ್ನೇನು ತೆರೆಕಾಣಬೇಕಿದೆ.

ಸಿನೆಮಾ – Udayavani – ಉದಯವಾಣಿ
Read More

Leave a comment