ಸತತ ಕೆಲಸದಿಂದ ದಣಿದ ಕಣ್ಣುಗಳಿಗೆ ವಿಶ್ರಾಂತಿ ನೀಡುವುದು ಹೇಗೆ?; ಸುಲಭದ ವಿಧಾನಗಳು ಇಲ್ಲಿವೆ | Here is simple solution for tired and puffy eyes problem


ಸತತ ಕೆಲಸದಿಂದ ದಣಿದ ಕಣ್ಣುಗಳಿಗೆ ವಿಶ್ರಾಂತಿ ನೀಡುವುದು ಹೇಗೆ?; ಸುಲಭದ ವಿಧಾನಗಳು ಇಲ್ಲಿವೆ

ಪ್ರಾತಿನಿಧಿಕ ಚಿತ್ರ

ಈಗಿನ ಡಿಜಿಟಲ್ ಯುಗದಲ್ಲಿ ಬಹುತೇಕರು ಕಂಪ್ಯೂಟರ್ ಮೂಲಕವೇ ಕೆಲಸ ಮಾಡುತ್ತಾರೆ. ಒಂದು ವೇಳೆ ಕಂಪ್ಯೂಟರ್ ಮೂಲಕ ಅಲ್ಲದಿದ್ದರೂ ಎಲ್ಲರೂ ನಿತ್ಯ ಒಂದಷ್ಟು ಗಂಟೆಗಳ ಕಾಲ ಮೊಬೈಲ್ ಬಳಕೆಯನ್ನು ಮಾಡಿಯೇ ಮಾಡುತ್ತಾರೆ. ಆದರೆ ಇವುಗಳಿಂದ ನಿಮ್ಮ ಕಣ್ಣುಗಳಿಗೆ ಆಯಾಸವಾಗುತ್ತದೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಕೆಲವರು ಕಂಪ್ಯೂಟರ್​, ಲ್ಯಾಪ್ಟಾಪ್​ ಮೂಲಕ ಕೆಲಸ ಮಾಡುತ್ತಿದ್ದರೆ ಮಾತ್ರ ಕಣ್ಣುಗಳಿಗೆ ಆಯಾಸವಾಗುತ್ತದೆ. ಮೊಬೈಲ್ ಸಮಸ್ಯೆಯಿಲ್ಲ ಎಂದು ಭಾವಿಸುತ್ತಾರೆ. ವಾಸ್ತವವಾಗಿ ಅದು ತಪ್ಪು. ಸತತವಾಗಿ ಬಳಸಿದರೆ ಎಲ್ಲಾ ಡಿಜಿಟಲ್ ಸ್ಕ್ರೀನ್​ಗಳೂ ಕಣ್ಣುಗಳಿಗೆ ತ್ರಾಸದಾಯಕವೇ ಆಗಿರುತ್ತದೆ. ಆದರೆ ಅದು ಬಹುತೇಕರಿಗೆ ಇಂದು ಅನಿವಾರ್ಯ. ಹಾಗಾದರೆ ಇದಕ್ಕೆ ಹೊಂದಿಕೊಳ್ಳುವುದು ಹೇಗೆ? ಯಾವೆಲ್ಲಾ ವಿಧಾನಗಳಿಂದ ಕಣ್ಣುಗಳನ್ನು ಚೈತನ್ಯದಾಯಕವಾಗಿ ಉಳಿಸಬಹುದು? ಇಲ್ಲಿದೆ ಮಾಹಿತಿ.

ಕಣ್ಣುಗಳಿಗೆ ಆಯಾಸವಾದಾಗ ಅವು ದಣಿಯುತ್ತವೆ. ಇದು ದೀರ್ಘಾವಧಿಯಲ್ಲಿ ಸಮಸ್ಯೆಗಳಿಗೂ ಕಾರಣವಾಗಬಹುದು. ಕಣ್ಣಿನ ದಣಿವು, ನಿದ್ರೆಯ ಅಭಾವ ಮನಶ್ಶಾಂತಿ ಕದಡುವಿಕೆಗೆ ಕಾರಣವಾಗಬಹುದು. ದೈಹಿಕ ಆಲಸ್ಯಕ್ಕೆ ಕಾರಣವಾಗಬಹುದು. ಹಾಗಾದರೆ ಆಯಾಸಗೊಂಡ ಕಣ್ಣುಗಳಿಗೆ ವಿಶ್ರಾಂತಿ ನೀಡುವುದು ಹೇಗೆ? ಇಲ್ಲಿ ಕೆಲವೊಂದು ಸುಲಭದ ವಿಚಾರಗಳನ್ನು ನೀಡಲಾಗಿದೆ.

ಸಾಕಷ್ಟು ನಿದ್ದೆ ಮಾಡಿ:
ನಿಯಮಿತವಾಗಿ ರಾತ್ರಿಯ ವೇಳೆಯ ಒಳ್ಳೆಯ ನಿದ್ರೆ ಕಣ್ಣುಗಳು ಉಬ್ಬುವುದನ್ನು, ಆಯಾಸಗೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಯಸ್ಕರಿಗೆ ರಾತ್ರಿಯಲ್ಲಿ ಸುಮಾರು 7 ರಿಂದ 9 ಗಂಟೆಗಳ ನಿದ್ದೆ ಬೇಕು. ನಿರಂತರ ಒತ್ತಡ ಮತ್ತು ಸಾಂಕ್ರಾಮಿಕ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ಸಂದರ್ಭಗಳ ನಡುವೆ, ಎಲೆಕ್ಟ್ರಾನಿಕ್ ಸಾಧನಗಳ ಮುಂದೆ ದೀರ್ಘ ಗಂಟೆಗಳ ಕಾಲ ಕೂರಬೇಕಾಗಿದೆ. ನಿಮ್ಮ ಕಣ್ಣುಗಳ ಮೇಲೆ ಅತಿಯಾದ ಒತ್ತಡವನ್ನು ತಪ್ಪಿಸಲು ನೀವು ಹೆಚ್ಚು  ರಾತ್ರಿಯ ವಿಶ್ರಾಂತಿಯನ್ನು ಪಡೆಯುವುದು ಉತ್ತಮ.

ಕೆಫೀನ್ ಪದಾರ್ಥಗಳನ್ನು ಕಡಿಮೆ ಬಳಸಿ:
ಕೆಫೀನ್ ಒಂದು ಪ್ರಸಿದ್ಧ ಉತ್ತೇಜಕವಾಗಿದೆ ಮತ್ತು ತ್ವರಿತ ಪಿಕ್-ಮಿ-ಅಪ್‌ಗಾಗಿ ಜನರು ಸೇವಿಸುತ್ತಾರೆ. ಆದರೆ, ನೀವು ದಣಿದ ಮತ್ತು ಉಬ್ಬಿದ ಕಣ್ಣುಗಳಿಂದ ಬಳಲುತ್ತಿದ್ದರೆ, ಕೆಫಿನ್ ಪಾನೀಯವನ್ನು ತ್ಯಜಿಸುವುದು ಉತ್ತಮ. ಕಾಫಿ ಕಡಿಮೆ ನಿದ್ರೆಗೆ ಕಾರಣವಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ, ನೀವು ಮಲಗುವ ಸಮಯಕ್ಕೆ ಕನಿಷ್ಠ 6 ಗಂಟೆಗಳ ಮೊದಲು ಕೆಫೀನ್ ಪದಾರ್ಥಗಳನ್ನು ಸೇವಿಸುವುದು ನಿಲ್ಲಿಸಬೇಕು.

eye health

ಪ್ರಾತಿನಿಧಿಕ ಚಿತ್ರ

ಸ್ಕ್ರೀನ್ ನೋಡುವ ಸಮಯ ಕಡಿಮೆ ಮಾಡಿ:
ಕೊರೊನಾ ಸಾಂಕ್ರಾಮಿಕದ ನಂತರ ಎಲ್ಲರೂ ಡಿಜಿಟಲ್ ಸ್ಕ್ರೀನ್ ನೋಡುವ ಸಮಯ ಹೆಚ್ಚಾಗಿದೆ.  ಲ್ಯಾಪ್‌ಟಾಪ್‌ಗಳು, ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಂದ ವಿವಿಧ ಪರದೆಗಳನ್ನು ನೋಡುವಾಗ, ನಾವು ಈ ಸಾಧನಗಳಿಂದ ಬ್ಲೂ ಲೈಟ್ ಕಿರಣಗಳಿಗೆ ಒಡ್ಡಿಕೊಳ್ಳುತ್ತೇವೆ. ಅಲ್ಪಾವಧಿಯಲ್ಲಿ ಇದೇನು ಸಮಸ್ಯೆ ತಂದೊಡ್ಡುವುದಿಲ್ಲ. ಆದರೆ ಸತತ ಬಳಕೆ ಕಣ್ಣುಗಳಿಗೆ ಒತ್ತಡವನ್ನು ಉಂಟುಮಾಡಬಹುದು.

ಸಾಕಷ್ಟು ನೀರು ಕುಡಿಯಿರಿ:
ನಿರ್ಜಲೀಕರಣದಿಂದ ಮುಖ ಮತ್ತು ಕಣ್ಣುಗಳ ಸುತ್ತ ಊದಿಕೊಳ್ಳಬಹುದು. ಸಾಕಷ್ಟು ನಿದ್ರೆ ಮತ್ತು ಸರಿಯಾದ ವಿಶ್ರಾಂತಿ ಪಡೆಯುವುದರ ಜೊತೆಗೆ, ನಿಯಮಿತವಾಗಿ ನೀರನ್ನು ಕುಡಿಯುವುದು ಬಹಳ ಮುಖ್ಯ. ಇದರಿಂದ ಕಣ್ಣು ಹಾಗೂ ದೇಹ ಚೈತನ್ಯದಾಯಕವಾಗಿರುತ್ತದೆ.

ಈ ಸಲಹೆಗಳು ಎಲ್ಲರಿಗೂ ತಿಳಿದಿರುವಂಥವುಗಳು. ಆದರೆ ಅದನ್ನು ಅನುಸರಿಸುವಲ್ಲಿ ಒಂದಲ್ಲ ಒಂದು ಕಾರಣದಿಂದ ಎಲ್ಲರೂ ಮರೆಯುತ್ತಾರೆ. ಕಣ್ಣು ಹಾಗೂ ದೇಹದ ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ಮರೆಯದೇ ಅನುಸರಿಸಿ.

TV9 Kannada


Leave a Reply

Your email address will not be published. Required fields are marked *