ಕೇಂದ್ರ ಸರ್ಕಾರವೂ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಪ್ರಾಧಾನ್ಯ ಕೊಡದೆ ಅವಮಾನ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ಕೆಂಡಕಾರಿದ್ದರು. ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ನಮ್ಮ ಪಕ್ಷ ಅಪಾರ ಗೌರವ ಹೊಂದಿದೆ ಎಂದು ತಿರುಗೇಟು ನೀಡಿದೆ.
ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಪ್ರತಿ ವರ್ಷ ನಾರಾಯಣ ಗುರು ಜಯಂತಿ ಆಚರಿಸಿ ಮಹಾನ್ ಸಮಾಜ ಸುಧಾರಕರಿಗೆ ಹೃದಯಪೂರ್ವಕ ಗೌರವ ನೀಡುತ್ತಿದ್ದೇವೆ. ಕೇರಳ ಸರ್ಕಾರ ಮಾಡಿದ ತಪ್ಪಿಗೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಪ್ರಶ್ನಿಸಬೇಕಿರುವುದು ಕೇರಳದ ಸಿಪಿಐಎಂ ಪಕ್ಷವನ್ನೇ ಹೊರತು ಕೇಂದ್ರವನ್ನಲ್ಲ ಎಂದು ಬರೆದುಕೊಂಡಿದೆ.
ಮೊಸರಿನಲ್ಲೂ ಕಲ್ಲು ಹುಡುಕುವ ಜಾಯಮಾನ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹೊಸತೇನಲ್ಲ. ಆದರೂ ಸೂಕ್ಷ್ಮ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸ್ತಬ್ಧ ಚಿತ್ರದ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಕ್ತ ಮಾರ್ಗದರ್ಶಿ ಸೂತ್ರವನ್ನು ಕೇರಳ ಸರ್ಕಾರಕ್ಕೆ ಕಳುಹಿಸಿತ್ತು. ಈ ಶಿಷ್ಟಾಚಾರವನ್ನು ಉಲ್ಲಂಘಿಸಿದ ಕೇರಳ ಸರ್ಕಾರದ ರಾಜಕೀಯ ಕುತಂತ್ರದಿಂದ ಈಗ ವಿವಾದ ಸೃಷ್ಟಿಯಾಗಿದೆ. ಮಾಜಿ ಮುಖ್ಯಮಂತ್ರಿಗಳಿಬ್ಬರು ಸತ್ಯದ ಪರವಾಗಿ ನಿಲ್ಲುವವರಾದರೆ ಈ ವಿಚಾರದಲ್ಲಿ ಮೋದಿಯವರನ್ನು ಬೆಂಬಲಿಸಬೇಕಲ್ಲವೇ? ಎಂದು ಪ್ರಶ್ನಿಸಿದೆ.