ಕೊರೊನಾ ವೈರಸ್​ ದಾಳಿಗೆ ಇಂದು ಇಡೀ ವಿಶ್ವವೇ ಬಸವಳಿದಿದೆ.. ಆದ್ರೆ ಈ ವೈರಸ್ ಜನಕ ಚೀನಾ ಮಾತ್ರ ಸತ್ತವರ ಮನೆ ಮುಂದೆ ಓಲಗ ಬಾರಿಸಿದಂತೆ ಬೀಗುತ್ತಲೇ ಇದೆ.. ಬೀಗುವವ ಬಾಗಲೇ ಬೇಕು ಅನ್ನೋ ಹಾಗೆ.. ವುಹಾನ್ ವೈರಸ್ ತನ್ನ ಮುಖವಾಡ ಕಳಚುತ್ತಿದ್ದು.. ಚೀನಾದ ಪಾಖಂಡಿ ನಡೆ ಬಯಲಿಗೆ ಬರೋಕೆ ಶುರುವಿಟ್ಟುಕೊಂಡಿದೆ.. ಆದ್ರೆ ಅದರೊಂದಿಗೆ ಈಗ ಮತ್ತೊಂದು ದೇಶದ ಪಾತ್ರ ಕೂಡ ಬಯಲಿಗೆ ಬರ್ತಿದೆ.. ಅಷ್ಟಕ್ಕೂ ಏನೀ ಸ್ಟೋರಿ? ಈ ಬಾರಿ ಯಾರ ಮುಖವಾಡ ಕಳಚುತ್ತಿದೆ?

ಯುದ್ಧವೆಂದರೆ ಭೋರ್ಗರೆಯುವ ಗನ್ನು-ಬಾಂಬು-ರಾಕೆಟ್​ಗಳು.. ಘರ್ಜಿಸೋ ಯುದ್ಧ ವಿಮಾನಗಳು..ಭೂಮಿ ನಡುಗಿಸೋ ಟ್ಯಾಂಕರ್​​ಗಳು.. ರಣಾಂಗಣದಲ್ಲಿ ರಕ್ತ ತರ್ಪಣ ಸುರಿಸುತ್ತಿರೋ ಯೋಧರು.. ವೈರಿಗಳ ರುಂಡ ಚೆಂಡಾಡುವ ಯುದ್ಧ ಕಲಿಗಳು.. ನೋವಿನ ಆರ್ತನಾದ.. ಗೆಲುವಿನ ಶಂಖನಾದ.. ಬಿದ್ದವನ ಕೀರಲು ಪ್ರತಿಭಟನೆ.. ಗೆದ್ದವನ ಅಟ್ಟಹಾಸ..

ಇದು ಯುದ್ಧ.. ಇಲ್ಲಿ ಶತ್ರುಗಳೂ ಯಾರು ಅಂತಾ ಗೊತ್ತು.. ಆಕ್ರಮಣಕಾರರು ಕಣ್ಣ ಮುಂದೆಯೇ ಇರ್ತಾರೆ.. ರಕ್ಷಕರೂ ರಣರಂಗದಲ್ಲೇ ಹೂಂಕರಿಸುತ್ತಿರ್ತಾರೆ.. ಸೋಲು-ಗೆಲುವಿನ ಲೆಕ್ಕ ಇಲ್ಲಿಯೇ ಚುಕ್ತಾ.. ಯಾವುದೂ ಉದ್ರಿ ಇಲ್ಲ.. ಸಾಲ ಇಲ್ಲ.. ಇಂಥ ಯುದ್ಧ ಆಡಲು ಎರಡು ಪರಸ್ಪರ ವಿರೋಧಿ ಪಡೆಗಳು ಬೇಕು.. ಅವು ರಣರಂಗದಲ್ಲಿಯೇ ಕಣ್ಣಲ್ಲಿ ಕಣ್ಣಿಟ್ಟು.. ಬಿಸಿ ರಕ್ತದ ಗುಂಡಿಗೆಯ ದಾಂಡಿಗರು ಮದಗಜಗಳಂತೆ ಕಾದಾಡುವುದೇ ರಣಾಂಗದ ಅಲಂಕಾರ.. ಆದ್ರೆ ಯುದ್ಧದ ರೂಪವನ್ನೇ ಬದಲಿಸಿರೋ ಆ ದೇಶ ಸದ್ದೇ ಆಗದಂತೆ ಬರೋಬ್ಬರಿ 40 ಲಕ್ಷ ಜನರನ್ನ ಬಲಿಪಡೆದು ಬಿಟ್ಟಿದೆಯಾ? ಹಲವಾರು ದೇಶಗಳ ಆರ್ಥಿಕತೆಯನ್ನು ಪಾತಾಳಾಕ್ಕೆ ಸೇರಿಸಿ ಬಿಟ್ಟಿದೆಯಾ? ಕೋಟ್ಯಂತರ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿ ಬಿಟ್ಟಿದೆಯಾ? ಅದಕ್ಕೆ ಇನ್ನೊಂದು ದೇಶದ ಪರೋಕ್ಷ ಸಹಾಯ ಇದೆಯಾ?

ಹೌದು ಅಂಥದ್ದೊಂದು ದೇಶವಿದೆ.. ಮುಗುಳು ನಗುತ್ತಲೇ ಬೊಗಸೆ ನೀರು ಸಿಕ್ಕರೂ ಮುಳುಗಿಸಲು ಯತ್ನಿಸುತ್ತೆ.. ಆತ್ಮೀಯತೆಯಿಂದಲೇ ನಿಮ್ಮನ್ನು ತಂಬಿಕೊಂಡಿರುತ್ತೆ.. ಆದ್ರೆ ಗೊತ್ತೆಯಾಗದ ಹಾಗೆ ಜೀವ ತೆಗೆದಿರುತ್ತೆ.. ತೋರಿಸಲು ಬೃಹತ್ ಶಸ್ತ್ರಾಸ್ತ್ರ ಸಂಗ್ರಹ.. ಅತ್ಯಾಧುನಿಕ ಮರಣಾಸ್ತ್ರಗಳನ್ನು ಹೊಂದಿದೆ.. ಆದ್ರೆ ಕಣ್ಣಿಗೇ ಕಾಣದ ಜೀವಿಗಳನ್ನು ಬಳಸಿ ಇಂದು ವಿಶ್ವದ ಮೇಲೆ ಯುದ್ಧ ಸಾರಿಬಿಟ್ಟಿದೆ.. ಹೌದು ನಿಮ್ಮ ಊಹೆ ನಿಜ.. ಅದು ಬೇರೆಯಾವುದೇ ದೇಶವಲ್ಲ ಅದು.. ಚೀನಾ.. ಕೊರೊನಾ ವೈರಸ್​​ ಲ್ಯಾಬೊರೇಟರಿಯಲ್ಲಿ ಹುಟ್ಟಿದ್ದು ಅನ್ನೋದು ಇಂದು ಬಹುತೇಕ ಖಚಿತವಾಗಿದ್ದು.. ವಿಶ್ವದ ಮೇಲೆ ಈ ಬಯೋ-ಅಸ್ತ್ರವನ್ನ ಚೀನಾ ಪ್ರಯೋಗಿಸಿಬಿಟ್ಟಿದೆಯಾ? ಅನ್ನೋ ಪ್ರಶ್ನೆ ಬಹುತೇಕ ಸತ್ಯವಾಗ್ತಿದೆ.. ಸತ್ಯವಾಗ್ತಿದೆ ಅಂತಲ್ಲ.. ಈಗಾಗಲೇ ವಿಶ್ವದ ದೇಶಗಳ ಮೇಲೆ ಚೀನಾ ಗೊತ್ತೇಯಾಗದ ಹಾಗೆ ಯುದ್ಧ ಸಾರಿ ಬಿಟ್ಟಿದೆಯಾ?! ಎಂಬ ಪ್ರಶ್ನೆ ಬಲವಾಗ್ತಿದೆ.. ಜೊತೆಗೆ ಇನ್ನೊಂದು ದೇಶದ ಡಬಲ್ ಗೇಮ್ ಕೂಡ ಬೆಳಕಿಗೆ ಬರ್ತಿದೆ..

ಹೌದು.. ಇಂದಿಗೂ ಒಂದೂ ಸಂಗತಿ ಸ್ಪಷ್ಟವಾಗಿಲ್ಲ.. ಆದ್ರೆ ಸಂದೇಹ ಬಲವಾಗ್ತಿದೆ.. ಕೊರೊನಾ ವೈರಸ್ ನಿಜಕ್ಕೂ ವೆಟ್ ಮಾರುಕಟ್ಟೆಯಿಂದಲೇ ಬಂತಾ? ಬಾವಲಿಗಳಿಂದ ಬಂತಾ? ಮಿಂಕ್ಸ್ ಗಳಿಂದ ಬಂತಾ? ಚಿಪ್ಪು ಹಂದಿಗಳಿಂದ ಬಂತಾ? ಅಥವಾ ಇದು ಯಾವುದಾದ್ರೂ ದೇವರ ಶಾಪಾನಾ? ದೆವ್ವಗಳ ಕಾಟಾನಾ? ಈ ಥರ ಕೇಳಿದ್ರೆ ನಗು ಬರ್ತಿರಬೇಕಲ್ವಾ? ಯಾಮಾರಿಬಿಟ್ರೆ ಈ ಚೀನಾದವರು ಅದನ್ನೂ ನಂಬಿಸಿ ಬಿಡ್ತಾರೆ.. ಅಥವಾ ತಾವೇ ಒಂದು ಡುಬ್ಲಿಕೇಟ್ ದೆವ್ವ ತಯಾರಿಸಿ ಊರು ಕೇರಿಗಳನ್ನ ಅಲೆಸಿ ಬಿಡ್ತಾರೆ.. ಅದಿರ್ಲಿ.. ಹಾಗಿದ್ರೆ ಇದು ಏನು? ಇದು ಬಂದಿದ್ದು ಎಲ್ಲಿಂದ? ಅನ್ನೋ ಪ್ರಶ್ನೆಗೆ ಒಂದು ಉತ್ತರವಂತೂ ಸ್ಪಷ್ಟವಾಗ್ತಿದೆ.. ಇನ್​ಫ್ಯಾಕ್ಟ್​​ ಕೈ ಬೆರಳು ಚೀನಾದ ವುಹಾನ್​ನಲ್ಲಿರೋ ಲ್ಯಾಬೊರೇಟರಿಯತ್ತಲೇ ತೋರಿಸುತ್ತಿದೆ..! ಜೊತೆಗೆ ಇನ್ನೊಂದು ದೇಶದ ದ್ವಂದ್ವ ನೀತಿಯನ್ನೂ ಬೆತ್ತಲೆಗೊಳಿಸುತ್ತಿದೆ..

ಕೊರೊನಾ ವೈರಸ್ ಮ್ಯಾನ್​ಮೇಡ್ ಅಂದ್ರೆ ನಂಬಲಿಲ್ಲ
ಡೋನಾಲ್ಡ್​ ಟ್ರಂಪ್​​ರನ್ನಂತೂ ಜೋಕರ್ ಮಾಡಿದ್ರು
ಈಗ ಡೋನಾಲ್ಡ್ ಟ್ರಂಪ್ ಹೇಳಿದ್ದೇ ಸತ್ಯವಾಗ್ತಿದೆಯಾ?

ಕೊರೊನಾ ವೈರಸ್ ಯಾವ ರೀತಿಯಿಂದ ನೋಡಿದ್ರೂ ನಿಸರ್ಗದತ್ತವಾಗಿ ಹುಟ್ಟುಕೊಂಡ ವೈರಸ್ ಅಂತಾ ಅನಿಸೋದಿಲ್ಲ.. ಈ ಬಗ್ಗೆ ಕಳೆದ ವರ್ಷದಿಂದಲೇ ಹಲವರು ಪ್ರಶ್ನೆ ಮಾಡಲು ಆರಂಭಿಸಿದ್ರು.. ಆದ್ರೆ ಅಂಥದ್ದೆಲ್ಲವನ್ನ ಕಾಲ್ಪನಿಕ ಅಂತಾ ಹೇಳಿ ಅಲ್ಲಗಳೆಯಲಾಯ್ತು.. ಸದ್ಯ ಅಮೆರಿಕಾ ಅಧ್ಯಕ್ಷರಾಗಿರೋ ಜೋ ಬೈಡನ್ ಪಕ್ಷವೇ ಈ ವಾದವನ್ನ ತಳ್ಳಿ ಹಾಕಿತ್ತು.. ಟ್ರಂಪ್ ವುಹಾನ್ ವೈರಸ್ ಅಥವಾ ಚೀನಾ ವೈರಸ್ ಅಂತಾ ಕರೆದಿದ್ದಕ್ಕೆ ಅವರ ಟ್ವೀಟ್​ಗಳನ್ನೇ ಬ್ಯಾನ್ ಮಾಡಲಾಗಿತ್ತು.. ಅವರನ್ನ ಕಾಮಿಡಿಪೀಸ್ ಅನ್ನೋ ಹಾಗೆ ಹೀಗಳೆಯಲಾಯ್ತು.. ವರ್ಲ್ಡ್ ಹೆಲ್ತ್ ಆರ್ಗನೈಜೇಶನ್ ಅನ್ನೋದರ ಬದಲಾಗಿ ವುಹಾನ್ ಹೆಲ್ತ್ ಆರ್ಗನೈಜೇಶನ್ ಎಂದೇ ಕರೆಸಿಕೊಳ್ಳುವಲ್ಲಿ ಖುಷಿ ಪಡ್ತಿರೋ ವಿಶ್ವ ಆರೋಗ್ಯ ಸಂಸ್ಥೆ ಸಹ ಕ್ಷಣ ಕ್ಷಣಕ್ಕೂ.. ಹೆಜ್ಜೆ ಹೆಜ್ಜೆಗೂ ಚೀನಾ ಪರವಾಗಿಯೇ ವಾದ ಮಂಡಿಸ್ತಾ ಬಂದಿತ್ತು..

ಆದ್ರೆ, ಇದೀಗ ಏನಾಯ್ತು? ಬರೋಬ್ಬರಿ 18 ತಿಂಗಳ ನಂತರ, ಸುಮಾರು 40 ಲಕ್ಷ ಜನರ ಸಾವಿನ ಬಳಿಕ.. ಕೋಟ್ಯಾಂತರ ಕುಟುಂಬಗಳು ಪಡಬಾರದ ಪಾಡು ಪಟ್ಟಬಳಿಕ.. ಚೀನಾ ಹೊರತು ಪಡಿಸಿ ಉಳಿದ ದೇಶಗಳ ಆರ್ಥಿಕತೆ ಪಾತಾಳ ಮುಟ್ಟಿದ ಬಳಿಕ.. ಎಲ್ಲಕ್ಕಿಂತ ಹೆಚ್ಚಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ಕಳೆದುಕೊಂಡ ನಂತರ.. ಈವ ವಿಶ್ವದ ಚಿತ್ತ ಮತ್ತ ವುಹಾನ್​ನತ್ತ ನೆಟ್ಟಿದೆ.. ಇದು ಚೀನಾವೇ ತಯಾರಿಸಿದ ವೈರಸ್ ಅನ್ನೋ ಮಾತು ಬಲಗೊಳ್ಳಲು ಆರಂಭಿಸಿದೆ.. ಇದಕ್ಕೆ ಕಾರಣವೇನು ಗೊತ್ತಾ? ಇನ್ನೊಂದು ದೇಶ ಈ ಪಾಪದಿಂದ ಕೈ ತೊಳೆದುಕೊಳ್ಳಲು ಸಾಧ್ಯಾನಾ?

ಚೀನಾ ಪರ ಬ್ಯಾಟ್​ ಬೀಸಿದ್ದ ಬೈಡನ್ ಪ್ಲೇಟ್ ಚೇಂಜ್
ಅತ್ಯುನ್ನತ ತನಿಖೆಗೆ ಆದೇಶ ನೀಡಿದ ಅಮೆರಿಕಾ ಪ್ರೆಸಿಡೆಂಟ್

ಈ ಹಿಂದೆ ಅಮೆರಿಕಾ ಅಧ್ಯಕ್ಷರಾಗೋಕಿಂತ ಪೂರ್ವದಲ್ಲಿ ಜೋ ಬೈಡನ್ ಮತ್ತು ಅವರ ಪಕ್ಷ ವುಹಾನ್ ವೈರಸ್​ ಥಿಯರಿಯನ್ನ ಅಲ್ಲಗಳೆಯುತ್ತಲೇ ಬಂದಿತ್ತು. ಆದ್ರೆ, ಈಗ ಜೋ ಬೈಡನ್ ಸತ್ಯ ಹೊರತೆಗೆಯಲು ಮುಂದಾಗಿದ್ದಾರೆ.. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೂ ಆದೇಶ ನೀಡಿದ್ದಾರೆ.. ಆದ್ರೆ ಇದ್ರಲ್ಲಿ ಇನ್ನೊಂದು ಟ್ವಿಸ್ಟ್ ಇದು.. ಇನ್ನೊಂದು ದೇಶವೂ ಆರೋಪದಿಂದ ಅಷ್ಟು ಸುಲಭವಾಗಿ ಎಸ್ಕೇಪ್ ಆಗೋಕೆ ಸಾಧ್ಯವಿಲ್ಲ.. ಅಂದಹಾಗೆ ಈ ಬೆಳವಣಿಗೆಯ ಕೆಲವು ಮುಖ್ಯಾಂಶಗಳನ್ನ ಗಮನಿಸೋದಾದ್ರೆ..

May 14, 2021
ಮೇ 14, 2021ರಂದು 14 ಜನ ಅಮೆರಿಕಾದ ವಿಜ್ಞಾನಿಗಳು ಸೈನ್ಸ್​ ಅನ್ನೋ ಮ್ಯಾಗಝೀನ್​ನಲ್ಲಿ ಲೇಖನವೊಂದನ್ನ ಬರೆದಿದ್ದರು. ಈ ಲೇಖನದಲ್ಲಿ ಅವರು ಕೊರೊನಾ ಲ್ಯಾಬ್​ ಲೀಕ್ ಥಿಯರಿ ಹಾಗೂ ಪ್ರಾಣಿಗಳಿಂದ ಸೋಂಕು ಬಂದಿತ್ತು ಅನ್ನೋ ಎರಡೂ ವಾದಗಳೂ ಜೀವಂತವಾಗಿವೆ.. ಹೀಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅವಶ್ಯ ಎಂದು ಹೇಳಿದ್ರು..

May 26, 2021
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ತಮ್ಮ ದೇಶದ ಇಂಟೆಲಿಜೆನ್ಸ್ ಕಮ್ಯುನಿಟಿ ಅಥವಾ ಗುಪ್ತಚಾರ ದಳಗಳಿಗೆ ಒಂದು ಟಾರ್ಗೆಟ್ ಅನ್ನ ನೀಡಿದ್ರು.. 90 ದಿನಗಳ ಒಳಗೆ ವುಹಾನ್ ವೈರಸ್ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಕಟ್ಟಪ್ಪಣೆ ಮಾಡಿದ್ರು.. ಇದು ಪ್ರಾಣಿಗಳಿಂದ ಬಂದಿರೋದಾ? ಅಥವಾ ಲ್ಯಾಬ್​ನಿಂದ ಲೀಕ್ ಆಗಿದೆಯಾ? ಅನ್ನೋದನ್ನ ಬಹಿರಂಗ ಮಾಡಿ ಎಂದು ತಿಳಿಸಿದ್ರು..

ಎಲ್ಲಿದೆ ಈ ಲ್ಯಾಬ್? ಯಾವುದು ಈ ಲ್ಯಾಬ್?

ಚೀನಾದ ವುಹಾನ್ ಪ್ರಾಂತ್ಯದಲ್ಲಿ ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಅಂತಾ ಚೀನಾದ ಸರ್ಕಾರಿ ಮಾಲೀಕತ್ವದ ಬೃಹತ್ ವೈರಸ್​ ಲ್ಯಾಬ್ ಇದೆ. ಅತ್ಯಂತ ಹೈ ಸೆಕ್ಯುರಿಟಿ ಈ ಲ್ಯಾಬ್​ಗಿದ್ದು, ಇಲ್ಲಿ ಬರೋಬ್ಬರಿ 2300 ಡೆಡ್ಲಿ ವೈರಸ್​​ಗಳನ್ನು ಸಂಗ್ರಹಿಸಲಾಗಿದೆ. ಇದು ಏಷ್ಯಾದಲ್ಲೇ ಅತ್ಯಂತ ದೊಡ್ಡ ವೈರಸ್ ಲ್ಯಾಬ್ ಆಗಿದೆ. ಈ ಲ್ಯಾಬ್​ನಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿ ವುಹಾನ್ ಸೀ-ಫುಡ್ ಮಾರ್ಕೆಟ್ ಇದ್ದು. ಇಲ್ಲಿಯೇ ಮೊದಲ ಬಾರಿ ಕೊರೊನಾ ಸೋಂಕು ಪತ್ತೆಯಾಗಿತ್ತು ಅಂತಾ ಚೀನ ಜಗತ್ತನ್ನು ನಂಬಿಸಿಕೊಂಡು ಬಂದಿದೆ..
ಈ ಲ್ಯಾಬ್​ ಸಾಕಷ್ಟು ಗೊಂದಲದ ಇತಿಹಾಸವನ್ನೇ ಹೊಂದಿದೆ. ಈ ಲ್ಯಾಬ್​ನಲ್ಲಿ ಬಾವಲಿಗಳಲ್ಲಿ ಪತ್ತೆಯಾಗುವ RAT-G-13 ಅನ್ನೋ ಹೆಸರಿನ ವೈರಸ್​​​ಅನ್ನು ಜೆನೆಟಿಕಲ್ ಮಾಡಿಫೈ ಮಾಡಲು ಯತ್ನಿಸಲಾಗಿತ್ತು.. ಕೊರೊನಾ ವೈರಸ್ ರೀತಿಯ ಲಕ್ಷಣಗಳಿಂದಲೇ ಜನರನ್ನು ಸಾಯಿಸಲು ಈ ವೈರಸ್​ಗಳೂ ಸಕ್ಷಮವಾಗಿದ್ದವು. ಇಂಥ ವೈರಸ್​ಗಳನ್ನ ಗೇನ್ ಆಫ್ ಫಂಕ್ಷನ್ ಹೆಸರಲ್ಲಿ.. ಅಂದ್ರೆ ವೈರಸ್​ಗಳನ್ನು ಮತ್ತಷ್ಟು ಘಾತಕಗೊಳಿಸಿ ಸಂಶೋಧನೆ ನಡೆಸುವ ಪ್ರಕ್ರಿಯೆ ಮೂಲಕ ಇವುಗಳನ್ನು ಮಾಡಿಫೈ ಮಾಡಿಸಲು ಯತ್ನಿಸಲಾಗಿತ್ತು.. ಇದಕ್ಕೆ ಇನ್ನೊಂದು ದೇಶವೂ ಸಾಥ್ ಕೊಟ್ಟಿತ್ತು..

ಇನ್ನೊಂದು ದೇಶ..ಇನ್ನೊಂದು ದೇಶ
ಅಷ್ಟಕ್ಕೂ ಯಾವುದು ಆ ಇನ್ನೊಂದು ದೇಶ?

ಆ ಇನ್ನೊಂದು ದೇಶ ಬೇರೆಯಾವುದೂ ಅಲ್ಲ ಅದೇ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ.. ಹೌದು ಅಚ್ಚರಿಯಾದ್ರೂ ಇದು ಸತ್ಯ.. ಚೀನಾದ ಪಾಪದಲ್ಲಿ ಅಮೆರಿಕಾದ್ದೂ ಪಾಲಿದೆ.. ಒಂದು ವೇಳೆ ಕೊರೊನಾ ವೈರಸ್​​ ಅನ್ನ ಚೀನಾದ ವುಹಾನ್ ಲ್ಯಾಬ್​ನಲ್ಲಿಯೇ ಅಭಿವೃದ್ಧಿ ಪಡಿಸಿದ್ದರೆ.. ಆ ಪಾಪ ಕೂಪದಿಂದ ಪಾರಾಗಲು ಅಮೆರಿಕಕ್ಕೂ ಸಾಧ್ಯವಿಲ್ಲ.. ಜನರ ಸಾವಿನ ರಕ್ತ.. ದೊಡ್ಡಣ್ಣನ ಕೈಗೂ ಮೆತ್ತಿ ಬಿಡುತ್ತೆ..
ಹೌದು.. ಇದು ನಿಜ 2014 ರಲ್ಲಿಯೇ ಅಮೆರಿಕಾದ ಯೂನಿವರ್ಸಿಟಿ ಆಫ್ ನಾರ್ಥ್ ಕೆರೊಲಿನಾ ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ ಜೊತೆ ಕೈ ಜೋಡಿಸಿತ್ತು.. ಗೇನ್ ಆಫ್ ಫಂಕ್ಷನ್ ಸ್ಟಡಿಗೆ ಧನ ಸಹಾಯ ಕೂಡ ನೀಡಿತ್ತು.. ಆ ವೇಳೆ ಅವರು ಸಾರ್ಸ್​​ ವೈರಸ್​ ಅನ್ನ ಗೇನ್ ಆಫ್ ಫಂಕ್ಷನ್ ಮೂಲಕ ಮತ್ತಷ್ಟು ಅಪಾಯಕಾರಿಯನ್ನಾಗಿಸಿ ಸಂಶೋಧನೆ ನಡೆಸಲು ಯತ್ನಿಸುತ್ತಿದ್ರು. ಇನ್​ ಫ್ಯಾಕ್ಟ್ 2014ರಲ್ಲಿ ಚೀನಾ ಮತ್ತು ಅಮೆರಿಕಾ ಒಟ್ಟಾಗಿ ಈ ಅಧ್ಯಯನ ನಡೆಸ್ತಿತ್ತು.. ನಂತರದಲ್ಲಿ ಅಧಿಕೃತವಾಗಿ ಹಿಂದೆ ಸರಿದ್ರೂ ಅನಧಿಕೃತವಾಗಿ ನಿರಂತರವಾಗಿ ಹಣ ಸಹಾಯ ನೀಡುತ್ತಲೇ ಬಂದಿತ್ತು.. 2014ರಲ್ಲಿಯೇ ಅಮೆರಿಕಾದ ಡಾ. ಆ್ಯಂಥೋಣಿ ಫೌಸಿ ನೇತೃತ್ವದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್​ಫೆಕ್ಷಿಯಸ್ ಡಿಸೀಸ್ ಸಂಸ್ಥೆ ವುಹಾನ್ ಲ್ಯಾಬ್​ಗೆ ಪರೋಕ್ಷವಾಗಿ ಧನ ಸಹಾಯ ನೀಡಿತ್ತು. ​​ ಅದೂ ಕೂಡ ಬಾವಲಿಗಳಲ್ಲಿ ಪತ್ತೆಯಾಗುವ ಕೊರೊನಾ ವೈರಸ್ ಬಗ್ಗೆ..!

ಕೊರೊನಾ ಸೋಂಕಿನ ಬಗ್ಗೆ ಅಮೆರಿಕಾಕ್ಕೆ ಮೊದಲೇ ತಿಳಿದಿತ್ತಾ?
2014ರ ಒಬಾಮಾರ ಒಂದು ಹೇಳಿಕೆ ಸೃಷ್ಟಿಸಿದೆ ಅಲ್ಲೋಲ ಕಲ್ಲೋಲ

ಹೌದು.. 2014ರಲ್ಲಿಯೇ ಅಮೆರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಒಂದು ಹೇಳಿಕೆ ನೀಡಿದ್ರು.. ಇಲ್ಲಿ ಅವರು ಸ್ಪಷ್ಟವಾಗಿ ಯಾರಿಗೆ ಗೊತ್ತು.. ಮುಂದೆ 5 ವರ್ಷಗಳ ನಂತರ ಸ್ಪಾನಿಶ್ ಫ್ಲೂ ಹೋಲುವ ವೈರಸ್ ಸೋಂಕು ಬಂದರೂ ಬರಬಹುದು.. ಅದಕ್ಕೆ ಅಮೆರಿಕಾ ಈಗಲೇ ಸಿದ್ಧವಾಗರಿಬೇಕು ಅಂತಾ ಹೇಳಿ ಬಿಟ್ಟಿದ್ದರು.

ಅಮೆರಿಕಾದ ವಿಚಾರ ಒಂದು ಕಡೆ ಆದ್ರೆ.. ಚೀನಾದ ಇನ್ನೊಂದು ಸಂಗತಿಯನ್ನೂ ಗಮನಿಸ್ಬೇಕು.. 2018ರಲ್ಲಿ ಚೀನಾದ ಹುಮಾನ್ಸ್ ಪ್ರಾಂತ್ಯದಲ್ಲಿನ ಗುಹೆಯೊಂದರ ಬಳಿ ವಾಸಿಸೋ ಗ್ರಾಮಸ್ಥರಲ್ಲಿ ಬಾವಲಿ ಕೊರೊನಾ ವೈರಸ್​ಗಳಿಗೆ ಸಂಬಂಧಿಸಿದಂತೆ ರೋಗ ನಿರೋಧಕ ಶಕ್ತಿ ಬೆಳೆದಿದ್ದು ಕಂಡು ಬಂದಿತ್ತು. 2019ರಲ್ಲಿ ಈ ಲ್ಯಾಬ್​ನಲ್ಲಿ ಕೆಲಸ ಮಾಡೋ ಮೂವರು ನಾವೆಲ್-ಕೊರೊನಾ ವೈರಸ್​ ಲಕ್ಷಣಗಳನ್ನು ಹೊಂದಿರೋ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ರು. ಇದನ್ನು ಕೂಡ ಅಮೆರಿಕಾದ ಗುಪ್ತಚರ ಇಲಾಖೆಯೇ ನೀಡಿದೆ. ಇನ್ನು 2019ರ ಡಿಸೆಂಬರ್​ನಲ್ಲ ಅಧಿಕೃತವಾಗಿ ವುಹಾನ್ ಆಸ್ಪತ್ರೆಯಲ್ಲಿ ಇಬ್ಬರು ನಾವೆಲ್ ಕೊರೊನಾ ವೈರಸ್​​ನಿಂದ ದಾಖಲಾಗಿದ್ರು. ತದನಂತರದಲ್ಲಿ ಕೊರೊನಾ ವೈರಸ್​ ಬಗೆಗಿನ ಎಲ್ಲ ಸಾಕ್ಷಿಗಳನ್ನು ಚೀನಾ ನಾಶ ಪಡಿಸುತ್ತಲೇ ಬಂದಿತು. ಬರೋಬ್ಬರಿ 5 ಸಾವಿರಕ್ಕೂ ಅಧಿಕ ಜನರನ್ನ ಇದೇ ನಿಟ್ಟಿನಲ್ಲಿ ಅರೆಸ್ಟ್ ಮಾಡಲಾಯ್ತು. ಅಥವಾ ಅವರು ಸೋಂಕಿತರು ಅಂತ ಹೇಳಿ ಕ್ವಾರಂಟೀನ್​ನಲ್ಲಿ ಇರಿಸಲಾಯ್ತು. ಜೊತೆಗೆ ಚೀನಾವೇ ಕೃತಕವಾಗಿ ಸೃಷ್ಟಿಸಿದ್ದ ಅಂತಾ ಹೇಳಲಾದ ಭೀಕರ ಪ್ರವಾಹ ಕಳೆದ ಜುಲೈನಲ್ಲಿ ವುಹಾನ್​ ನಗರದಲ್ಲಿ ಕಾಣಿಸಿಕೊಂಡಿತು.. ಈ ಮೂಲಕ ಕೂಡ ಸಾಕ್ಷಿ ನಾಶ ಮಾಡಲಾಯ್ತು ಅನ್ನೋ ಆರೋಪ ಅಂದಿಗೂ ಕೇಳಿ ಬಂದಿತ್ತು.

ಈ ಕೊರೊನಾ ವೈರಸ್ ಪ್ರಾಣಿಯಿಂದ ಬಂದಿದ್ದು ಅಂತಾ ಹೇಳಿದ್ದಕ್ಕಾಗಿ ಬರೋಬ್ಬರಿ 30 ಜೀವಿಗಳ 80 ಸಾವಿರ ಪ್ರಾಣಿ, ಪಕ್ಷಿಗಳ ತಳಿಗಳ ಅಧ್ಯಯನ ಕೂಡ ಮಾಡಲಾಯ್ತು.. ಆದ್ರೆ ಅವುಗಳಲ್ಲಿ ಒಂದೂ ಕೂಡ ಕೊರೊನಾ ವೈರಸ್ ಸೋಂಕಿತವಾಗಿರಲಿಲ್ಲ.. ಇಂದಿನ ವೈಜ್ಞಾನಿಕ ಯುಗದಲ್ಲಿ ಇದು ಮನುಷ್ಯನೇ ಮಾಡಿದ್ದು ಅನ್ನೋ ಕುರುಹೂ ಸಹ ಸಿಗದಹಾಗೆ ವೈರಸ್​ಗಳನ್ನು ಮಾಡಿಫೈ ಮಾಡಲು ಸಾಧ್ಯವಿದೆ.. ಇದನ್ನು ವಿಜ್ಞಾನಿಗಳೂ ಸಾರಿ ಸಾರಿ ಹೇಳ್ತಿದ್ದಾರೆ.

ಹೀಗಾಗಿ ಹೇಗೆ ನೋಡಿದ್ರೂ.. ಈ ವೈರಸ್​ ಸೃಷ್ಟಿಯಾಗಿದ್ದೇ ಆದಲ್ಲಿ, ಅದ್ರಲ್ಲಿ ಚೀನಾದ ನೇರ ಹಾಗೂ ಅಮೆರಿಕಾದ ಪರೋಕ್ಷ ಪಾತ್ರ ಇರೋದು ಕಂಡು ಬರ್ತಾನೆ ಇದೆ. ಆದ್ರೆ ಬೆಕ್ಕಿಗೆ ಗಂಟೆ ಕಟ್ಟೋರು ಯಾರು ಅನ್ನೋ ಹಾಗೆ ಚೀನಾವನ್ನ ಹೊಣೆಯನ್ನಾಗಿಸೋದು ಮತ್ತು ಅಮೆರಿಕಾದ ಬಳಿ ಉತ್ತರ ಕೇಳೋರು ಸದ್ಯ ಯಾರು? ಅನ್ನೋ ಪ್ರಶ್ನೆ ಮತ್ತಷ್ಟು ಬಲವಾಗಿದೆ.

ನೋಡಿದ್ರಲ್ಲ ಮನುಷ್ಯನ ಹಪಾಹಪಿ.. ತನ್ನ ಪಾರುಪತ್ಯ ಸಾಧಿಸಲು ಹೂಡುವ ಜಾಲಗಳು.. ಹೇಗೆ ಇಡೀ ಮನುಷ್ಯ ಕುಲಕ್ಕೇ ಸಂಚಕಾರ ತಂದಿಡಬಲ್ಲವು ಅಂತಾ.. ಇಂದು ಕೊರೊನಾ ವೈರಸ್​ ಸೃಷ್ಟಿಯಲ್ಲಿ ಚೀನಾದ ಪಾತ್ರ ಸ್ಪಷ್ಟವಾಗ್ತಿದ್ರೂ.. ಅದು ಇನ್ನೂ ಕಟಕಟೆಯಲ್ಲಿ ನಿಂತಿಲ್ಲ.. ಅದೇ ಸದ್ಯದ ವಿಪಾರ್ಯಸ.. ಅಲ್ಲವೇ?

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಸದ್ದಿಲ್ಲದೇ ಯುದ್ಧ ಮಾಡಿ 40 ಲಕ್ಷ ಜನರನ್ನ ಬಲಿ ಪಡೆಯಿತಾ ಚೀನಾ..? ಬಟಾಬಯಲಾಗುತ್ತಾ ರಹಸ್ಯ..? appeared first on News First Kannada.

Source: newsfirstlive.com

Source link