ಜೊತೆ ಜೊತೆಯಲಿ..ಈ ಹಿಂದೆ ಈ ಲೈನ್ ಕೇಳಿದ್ರೇ ನಮ್ಮ ಶಂಕರ್ನಾಗ್ ಹಾಗೂ ಅರುಂಧತಿ ನಾಗ್ ಅವರ ಅಭಿನಯದ ಎವರ್ಗ್ರೀನ್ ಹಾಡು ಜೊತೆಯಲಿ ಜೊತೆ ಜೊತೆಯಲಿ…ಗೀತೆ ಕಿವಿಯಲ್ಲಿ ಗುಯ್ ಗುಡುತ್ತಿತ್ತು…ಈ ಹಾಡನ್ನ ಮೀರಿಸೊಕೆ ಸಾಧ್ಯವಿಲ್ಲ ಬಿಡಿ. ಆದ್ರೇ ಇಷ್ಟೇ ಯಶಸ್ಸು ಕಂಡಿದ್ದು ನಮ್ಮ ಕಿರುತೆರೆ ಸೆನ್ಸ್ಷನ್ ಜೊತೆ ಜೊತೆಯಲಿ ಧಾರಾವಾಹಿ..
ವಿಭಿನ್ನ ಕತಾ ಹಂದರದ ಧಾರಾವಾಹಿ ಇಲ್ಲಿಯವರೆಗೂ ಸಾಕಷ್ಟು ಎಪಿಸೋಡ್ಗಳನ್ನು ಕಂಪ್ಲೀಟ್ ಮಾಡಿ ಯಶಸ್ವಿಯಾಗಿ ಮುನ್ನುಗ್ತಾಯಿದೆ…ಟೈಟಲ್ ಟ್ರ್ಯಾಕ್ನಿಂದಲೇ ಸದ್ದು ಮಾಡಿದ ಈ ಧಾರಾವಾಹಿ ಹೊಸ ಟ್ವಿಸ್ಟ್ಗಳೊಂದಿಗೆ ಪ್ರೇಕ್ಷಕರಿಗೆ ಎಲ್ಲಿಯೂ ಬೋರ್ ಹೊಡೆಸದಂತೆ ಭರ್ಜರಿಯಾಗಿ ಸಾಗ್ತಾಯಿದೆ.
ಅನು ಹಾಗೂ ಆರ್ಯವರ್ಧನ್ ಅವರ ಪ್ರೇಮಾನುರಾಗಕ್ಕೆ ಮನಸೋತಿರುವ ಪ್ರೇಕ್ಷಕರು, ಧಾರಾವಾಹಿ ಪ್ರಾರಂಭವಾಗಿ ಬರೊಬ್ಬರಿ 3 ವರ್ಷಗಳಾದ್ರೂ ಇಂದಿಗೂ ಅದೇ ಕುತೂಹಲವನ್ನ ಉಳಿಸಿಕೊಂಡು ಬೆಳಸಿಕೊಂಡು ಬಂದಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಧಾರಾವಾಹಿ ಅದ್ಧೂರಿ ಮೇಕಿಂಗ್ನಿಂದಲೇ ವೀಕ್ಷಕರನ್ನ ಹಿಡಿದಿಟ್ಟಿದೆ..
45 ವರ್ಷದ ಶ್ರೀಮಂತ ಆರ್ಯವರ್ಧನ್ ಹಾಗೂ 20 ವರ್ಷದ ಮಧ್ಯಮ ಕುಟುಂಬದ ಹುಡುಗಿ ನಡುವೆ ನಡೆಯುವಂತಹ ಪ್ರೀತಿ ಕತೆಯನ್ನು ಮುಖ್ಯ ಎಳೆಯಾಗಿಟ್ಟುಕೊಂಡು ಆರಂಭವಾಗಿದ್ದ ಸೀರಿಯಲ್ನಲ್ಲಿ ಸದ್ಯ ಅನು-ಆರ್ಯ ಸಖತ್ ಗ್ರಾಂಡ್ ಆಗಿ ಸಪ್ತಪದಿ ತುಳಿದಿದ್ದಾರೆ..ಆರ್ಯನ ಜೀವನದ ಕಥೆಗಳು ಕುತೂಹಲದಿಂದ ಕೂಡಿದ್ದು, ಅವನ ಗತಕಾಲದ ಒಂದಿಷ್ಟು ರಹಸ್ಯಗಳು ಅನುಗೆ ಗೊತ್ತಾಗಿದೆ.
ಇನ್ನೂ ಆರ್ಯವರ್ಧನನ ಮೊದಲ ಪತ್ನಿ ರಾಜನಂದಿನಿಯ ಕಥೆ ಸಧ್ಯದಲ್ಲಿಯೇ ತೆರೆದುಕೊಳ್ಳುತ್ತಿದ್ದು, ತಂಡ ಪಾತ್ರಕ್ಕೆ ಒಪ್ಪುವಂತ ಕಲಾವಿದೆಯ ಹುಡುಕಾಟದಲ್ಲಿತ್ತು. ಈ ಬಗ್ಗೆ ನಾವು ಕೂಡ ಮಾಹಿತಿ ನೀಡಿದ್ವಿ. ಡೇ ಒನ್ನಿಂದ ರಾಜನಂದಿನಿ ಎಂಬ ಹೆಸರಿನ ಸುತ್ತ ಇರುವ ರಹಸ್ಯಗಳನ್ನ ಒಂದೊಂದಾಗಿ ರಿವೀಲ್ ಮಾಡುತ್ತಾ ಬರುತ್ತಿದ್ದು, ಮುಂದೆ ಏನಾಗುತ್ತದೆ ಎಂಬ ರೋಚಕತೆಯನ್ನ ಪ್ರೇಕ್ಷಕರಿಗೆ ನೀಡುತ್ತಾ ಬಂದಿದೆ.
ಇದೀಗ ಆರ್ಯವರ್ಧನ್ ಕುಟುಂಬ 20 ವರ್ಷದ ನಂತರ ರಹಸ್ಯಗಳ ಗೂಡಾದ ಸಂಪಿಗೆಪುರದ ಬಂಗಲೆಯತ್ತ ಹೆಜ್ಜೆ ಹಾಕಿದ್ದು, ಆರ್ಯನ ಸುತ್ತ ಅನುಮಾನಗಳ ತೂಗು ಕತ್ತಿ ಸುತ್ತುತ್ತಿದೆ. ಇತ್ತ ಅನುಳನ್ನ ಹಂತ ಹಂತವಾಗಿ ರಾಜನಂದಿನಿ ಆವರಿಸಿಕೊಳ್ಳುತ್ತಿದ್ದು, ಅವಳ ಗತಕಾಲದ ಕತೆ ತೆರೆದುಕೊಂಡಿದೆ.
ಇನ್ನೂ ಕತೆಯಲ್ಲಿ ಆರ್ಯವರ್ಧನ್ ಅವರ ಪಾತ್ರ ನೆಗೆಟೀವ್ ಶೇಡ್ ರೀತಿಯಲ್ಲಿ ತೆರೆದುಕೊಳ್ಳುತ್ತಿದ್ದು, ಇದಕ್ಕೆ ಪುಷ್ಟಿ ಕೊಡುವಂತೆ ಝೆಂಡೆ ಹಾಗೂ ಆರ್ಯ ಸಂಭಾಷಣೆ ನಡೆದಿದೆ. ಒಂದು ಹಂತದಲ್ಲಿ ಕತೆ ಸಿನಿಮಾ ರೀತಿಯಲ್ಲಿ ಮೂಡಿಬರುತ್ತಿದ್ದು, ನಿರ್ದೇಶಕ ಆರೂರು ಜಗದೀಶ್ ಅವರು ಕತೆಯ ಬಗ್ಗೆ ವೀಕ್ಷಕರು ಎಲ್ಲಿಯೂ ಲೆಕ್ಕಾಚಾರ ಹಾಕದಂತೆ ಸಖತ್ ಇಂಟ್ರಸ್ಟಿಂಗ್ ಆಗಿ ತೆಗೆದುಕೊಂಡು ಹೋಗುತ್ತಿದ್ದಾರೆ.
ಇನ್ನೂ ಇಡೀ ಧಾರಾವಾಹಿಯ ಜೀವಾಳವಾಗಿರುವ ರಾಜನಂದನಿಯ ಪಾತ್ರವನ್ನ ಯಾರು ನಿರ್ವಹಿಸಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯದಲ್ಲಿಯೇ ಉತ್ತರ ಸಿಗಲಿದೆ.