ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ತಂಡದ ಹೊಸ ಪ್ರಾಜೆಕ್ಟ್‌ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೊದಲಾರ್ಧ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. 

ಕಳೆದ ಎರಡು ವಾರಗಳಿಂದ ಚಿತ್ರ ತಂಡ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಾಸಂತ್ ಅವರೊಂದಿಗೆ ಚಿತ್ರೀಕರಣ ನಡೆಸುತ್ತಿದ್ದು, ಇನ್ನು ಮೂರು ದಿನಗಳಲ್ಲಿ ಚಿತ್ರದ ಮೊದಲಾರ್ಧ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. 

ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿ ತೊಡಗಿರುವ ರಕ್ಷಿತ್ ಶೆಟ್ಟಿಯವರು ಮಾತನಾಡಿ, ನಿರ್ದೇಶಕರು ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ನಡೆಸಿದ್ದಾರೆ. ಬೆಂಗಳೂರಿನಲ್ಲಿಯೇ ಈ ಚಿತ್ರೀಕರಣ ನಡೆಯುತ್ತಿದೆ. ನಂತರ ಕೆಲ ದಿನಗಳ ಕಾಲ ಬ್ರೇಕ್ ತೆಗೆದುಕೊಂಡು ಮುಂದಿನ ಚಿತ್ರೀಕರಣ ಕುರಿತು ನಿರ್ಧರಿಸುತ್ತೇವೆ. ಮುಂದಿನ ಚಿತ್ರೀಕರಣಕ್ಕೆ ಬೆಂಗಳೂರು ಬಿಟ್ಟು ಬೇರೆ ಸ್ಥಳಗಳಲ್ಲಿ ನಡೆಸಬೇಕಾಗಿದೆ. ಪ್ರಸ್ತುತ ಕೊರೋನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ನಮ್ಮ ಎಲ್ಲಾ ಪ್ಲಾನ್ ಗಳನ್ನು ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ. 

ಪ್ರಸ್ತುತ ನಾನು ರಿಚ್ಚಿ, ಪುಣ್ಯಕೋಟಿ, ಮಿಡ್'ವೇ ಟು ಮೋಕ್ಷ ಚಿತ್ರಗಳಿಗೆ ಸಹಿ ಹಾಕಿದ್ದೇನೆ. ಮೇ ತಿಂಗಳಿನಲ್ಲಿ ಮತ್ತೊಂದು ಚಿತ್ರದ ಕುರಿತು ಮಾಹಿತಿ ನೀಡಲಿದ್ದೇನೆ. ಚಿತ್ರದ ಟೈಟಲ್ ಕುರಿತ ಕೆಲಸ ಮುಂದುವರೆದಿದೆ. ಈ ಚಿತ್ರ ಕುರಿತು 2-3 ವಾರಗಳಲ್ಲಿ ಮಾಹಿತಿ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

2019ರಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರ ಬಿಡುಗಡೆ ಮಾಡಿದ ಬಳಿಕ ರಕ್ಷಿತ್ ಶೆಟ್ಟಿಯವರು 777 ಚಾರ್ಲಿ ಚಿತ್ರದಲ್ಲಿ ನಟಿಸಿದ್ದು, ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More