ಬೆಂಗಳೂರು: ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆಯಲ್ಲಿ ನಡೆದ ಬೆಂಗಳೂರು ಶಾಸಕರು ಮತ್ತು  ಕಾಂಗ್ರೆಸ್​ ನಾಯಕರ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

ಡಿ.ಕೆ‌.‌ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಡಿ.ಕೆ‌.‌ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬೆಂಗಳೂರಿನ ಕಾಂಗ್ರೆಸ್​ನ ಶಾಸಕರು ಸೇರಿದಂತೆ ಕೆಲವು ವಿಚಾರಗಳ ಕುರಿತು ಒಮ್ಮತದ ನಿರ್ಣಯಕ್ಕೆ ಬರಲಾಗಿದೆ.

ಬಿಬಿಎಂಪಿ ಚುನಾವಣೆ, ಬೆಂಗಳೂರಿನಲ್ಲಿ ಪಕ್ಷ ಸಂಘಟನೆ, ಪದಾಧಿಕಾರಿಗಳ ಪಟ್ಟಿ ಸೇರಿದಂತೆ ಕೆಲ ಮಹತ್ವದ ವಿಚಾರಗಳ ಸಂಬಂಧ ಒಮ್ಮತದ ನಿರ್ಣಯ ತೆಗೆದುಕೊಂಡಿದೆ. ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಪಿನ್ ಟು ಪಿನ್ ಡೀಟೈಲ್ಸ್ ನ್ಯೂಸ್​​ಫಸ್ಟ್​ಗೆ ಲಭ್ಯವಾಗಿದೆ.

ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯ ನಿರ್ಣಯಗಳು

  • ನಿರ್ಣಯ-1: ಬೆಂಗಳೂರಿನ ಎಲ್ಲಾ 28 ಕ್ಷೇತ್ರಗಳಲ್ಲಿರುವ ಪಕ್ಷದ ನಾಯಕರು‌ ಒಗ್ಗೂಡಿ ಪ್ರವಾಸ ಮಾಡುವುದು
  • ನಿರ್ಣಯ-2: ಬೆಂಗಳೂರಿನ ಎಲ್ಲಾ 198 ವಾರ್ಡ್ ಗಳಲ್ಲಿ ಪಕ್ಷ ಸಂಘಟನೆಗೆ ಕಾರ್ಯಕ್ರಮಗಳ ಹಮ್ಮಿಕೊಳ್ಳುವುದು
  • ನಿರ್ಣಯ-3: ಬಿಬಿಎಂಪಿ ಚುನಾವಣೆ ನಡೆಯಲೇಬೇಕಾದ ಹಿನ್ನೆಲೆಯಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಸಮಿತಿ ರಚಿಸುವುದು
  • ನಿರ್ಣಯ-4: ಪದಾಧಿಕಾರಿಗಳ ಪಟ್ಟಿ, ಡಿಸಿಸಿ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಮಾಲೋಚನೆ ನಡೆಸಿ ಹೈಕಮಾಂಡ್ ನಿಂದ ಅಂತಿಮಗೊಳಿಸುವುದು
  • ನಿರ್ಣಯ-5: ಬಿಬಿಎಂಪಿ ಚುನಾವಣೆಯ ದೃಷ್ಟಿಯಿಂದ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡ ನಿಗದಿಪಡಿಸಿ, ಆಕಾಂಕ್ಷಿಗಳಿಗೆ ಜವಾಬ್ದಾರಿಗಳ ಕೊಡುವ ಮೂಲಕ ಈಗಿನಿಂದಲೇ ಸಜ್ಜುಗೊಳಿಸುವುದು.

ಹೀಗೆ ಹಲವು ನಿರ್ಣಯಗಳನ್ನ ತೆಗೆದುಕೊಂಡಿರುವ ಕಾಂಗ್ರೆಸ್​​ ಮುಖಂಡರು, ಸೋಮವಾರ ಹೈಕಮಾಂಡ್ ನಾಯಕರನ್ನ ಭೇಟಿಯಾಗಲಿದ್ದಾರೆ. ವಿಶೇಷ ಅಂದ್ರೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಅವರು ಒಟ್ಟಿಗೆ ದೆಹಲಿ ಪ್ರವಾಸ ಮಾಡಿ, ಹೈಕಮಾಂಡ್ ನಾಯಕರ ಬಳಿ ಚರ್ಚೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

The post ಸಭೆಯಲ್ಲಿ 5 ಪ್ರಮುಖ ನಿರ್ಣಯ ಕೈಗೊಂಡ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ appeared first on News First Kannada.

Source: newsfirstlive.com

Source link