–  ಇಡೀ ಗ್ರಾಮ ಅಭಿವೃದ್ಧಿ ಭರವಸೆ

ಬೆಂಗಳೂರು(ಮಾಗಡಿ): ನಾಡಪ್ರಭುಗಳ ವೀರ ಸಮಾಧಿ ಇರುವ ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮವನ್ನು ಒಂದು ವರ್ಷದೊಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಮುಂದಿನ ವರ್ಷದ ಜಯಂತಿಯನ್ನು ಇಲ್ಲಿಯೇ ಆಚರಿಸಲಾಗುವುದು ಎಂದು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಇದನ್ನೂ ಓದಿ: ಕೆಂಪೇಗೌಡ ಜಯಂತಿ – 60 ಟನ್ ತರಕಾರಿ ವಿತರಿಸಿದ ಸೋಮಶೇಖರ್

ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ನಿಮಿತ್ತ ಡಿಸಿಎಂ ಅವರು, ತಾಲೂಕಿನ ಕೆಂಪಾಪುರ ಗ್ರಾಮದಲ್ಲಿರುವ ನಾಡಪ್ರಭುಗಳ ವೀರ ಸಮಾಧಿಗೆ ಭಾನುವಾರ ಬೆಳಗ್ಗೆ ಪೂಜೆ ಸಲ್ಲಿಸಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ. ಹೀಗಾಗಿ ಸಮಾಧಿ ಸ್ಥಳ, ಕೆಂಪಾಪುರ ಕೆರೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದರು. ಇದನ್ನೂ ಓದಿ: ಬಿಜೆಪಿಯವರು ಕಾಂಗ್ರೆಸ್‍ಗೆ ಸಪೋರ್ಟ್ ಮಾಡ್ತೀವಿ ಸಿಎಂ ಆಗಿ ಎಂದಿದ್ದಾರೆ: ಎಸ್.ಎಸ್ ಮಲ್ಲಿಕಾರ್ಜುನ್

ನಾಡಿನ ಮತ್ತು ದೇಶದ ಸಮಸ್ತ ಜನರು ಇಲ್ಲಿಗೆ ಭೇಟಿ ನೀಡುವಂತೆ ಆಗಬೇಕು. ಕೆಂಪೇಗೌಡರ ಕಾಲದ ವೈಭವವನ್ನು ಮರುಸೃಷ್ಠಿ ಮಾಡಿ  ಇಡೀ ಗ್ರಾಮವನ್ನು ಐತಿಹಾಸಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ಯೋಜನೆ ಜಾರಿ ಹಂತದಲ್ಲಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯನ್ನು ಕ್ಷಿಪ್ರವಾಗಿ ಮುಗಿಸಲಾಗುವುದು. ಅದಕ್ಕಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಫೆಬ್ರುವರಿ ನಾಡಪ್ರಭುಗಳ ಪ್ರತಿಮೆ ಅನಾವರಣ:

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ನಿರ್ಮಾಣ ಆಗುತ್ತಿರುವ ಸೆಂಟ್ರಲ್ ಪಾರ್ಕ್‍ನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಲೋಹದ ಪ್ರತಿಮೆಯನ್ನು ಮುಂಬರುವ ಫೆಬ್ರವರಿ-ಮಾರ್ಚ್‍ನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಕೋವಿಡ್‍ನಿಂದ ವಿಳಂಬವಾಗಿದ್ದ ಕಾಮಗಾರಿ ಪುನಾ ಭರದಿಂದ ಸಾಗಿದೆ. ನೋಯಿಡಾದಲ್ಲಿ ಪ್ರತಿಮೆ ಸಿದ್ಧವಾಗುತ್ತಿದೆ ಎಂದು ಇದೇ ವೇಳೆ ಡಿಸಿಎಂ ಅವರು ಹೇಳಿದರು.

ಶಾಸಕ ಮಂಜುನಾಥ್, ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಇಕ್ರಂ, ಬಿಜೆಪಿ ಮುಖಂಡ ಎಚ್.ಎಂ.ಕೃಷ್ಣಮೂರ್ತಿ, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಹುಲವಾಡಿ ದೇವರಾಜ್ ಮುಂತಾದವರು ಜತೆಯಲ್ಲಿದ್ದರು.

The post ಸಮಸ್ತ ಕನ್ನಡಿಗರ ಪಾಲಿಗೆ ಕೆಂಪಾಪುರವೂ ಒಂದು ಶ್ರದ್ಧಾಕೇಂದ್ರ: ಡಿಸಿಎಂ appeared first on Public TV.

Source: publictv.in

Source link