– ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
– ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

ಮಂಗಳೂರು: ಕರ್ನಾಟಕದ ಕರಾವಳಿ ಇಂದು ತೌಕ್ತೆ ಚಂಡಮಾರುತದ ಹೊಡೆತಕ್ಕೆ ನಲುಗಿ ಹೋಗಿದೆ. ಪರಿಣಾಮ ನಿನ್ನೆ ತಡರಾತ್ರಿಯಿಂದಲೇ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಬ್ಬರದ ಮಳೆಯಾಗುತ್ತಿದೆ.

ಶನಿವಾರ ಮಧ್ಯಾಹ್ನದ ವೇಳೆ ಮಂಗಳೂರಿನ ಪಣಂಬೂರು,ಸೋಮೇಶ್ವರ, ಉಳ್ಳಾಲ, ಕೋಟೆಪುರ, ಕೈಕೋ, ಉಚ್ಚಿಲ, ಸುರತ್ಕಲ್, ಸಸಿಹಿತ್ಲು, ಬೈಕಂಪಾಡಿ ಮುಂತಾದ ಕಡಲತೀರದಲ್ಲಿ ಅಲೆಗಳ ಅಬ್ಬರ ಭಾರೀ ಪ್ರಮಾಣದಲ್ಲಿತ್ತು.

ಸಮುದ್ರಪಾಲಾದ ಸ್ಮಶಾನ:
ಮಂಗಳೂರು ಹೊರವಲಯದ ಸೋಮೇಶ್ವರ ಕಡಲ ತೀರದಲ್ಲಿ ಕಡಲು ಪ್ರಕ್ಷುಬ್ಧಗೊಂಡು ಏಕಾಏಕಿ ದಡಕ್ಕೆ ಅಲೆಗಳು ಅಪ್ಪಳಿಸಿದ್ರಿಂದ, ರಕ್ಕಸ ಗಾತ್ರದ ಅಲೆಗಳು ಸ್ಮಶಾನವನ್ನು ಧರಾಶಾಹಿ ಮಾಡಿತ್ತು. ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾದ ಹಿಂದೂ ರುದ್ರಭೂಮಿಯ ತಡೆಗೋಡೆ ನಿನ್ನೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕುಸಿದಿತ್ತು. ಭಾರೀ ಗಾಳಿ ಮಳೆಗೆ ಹಲವು ಕಟ್ಟಡಗಳು ಧರಾಶಾಹಿಯಾಗಿವೆ. ಅರಬ್ಬೀ ಸಮುದ್ರ ತೀರದ ಹಲವು ಅಂಗಡಿಗಳು ಸಮುದ್ರಪಾಲಾಗಿವೆ. ಸೋಮೇಶ್ವರ, ಸಸಿಹಿತ್ಲು, ಬೈಕಂಪಾಡಿ, ಉಳ್ಳಾಲ ಭಾಗದಲ್ಲಿ ಭಾರೀ ಅಲೆ ಅಬ್ಬರಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.

ಬೋಟ್ ರಕ್ಷಣೆ
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೂವರು ಮೀನುಗಾರರು ಸಮುದ್ರದ ಮದ್ಯೆ ಸಿಲುಕಿಕೊಂಡಿದ್ದರು. ಇವನ್ನು ಕೋಸ್ಟ್ ಗಾರ್ಡ್ ಪಡೆ ರಕ್ಷಿಸಿದೆ. ಬೋಟ್ ಎಂಜಿನ್ ಫೇಲ್ ಆಗಿ ಕೇರಳದ ಕಣ್ಣೂರು ಕಡಲ ತೀರದಿಂದ 10 ನಾಟಿಕಲ್ ಮೈಲ್ ದೂರದಲ್ಲಿ ಆಳ ಸಮುದ್ರ ದಲ್ಲಿ ಮೀನುಗಾರರು ಅಪಾಯದಲ್ಲಿದ್ದರು. ಚಂಡಮಾರುತದ ವಾನಿರ್ಂಗ್ ಇದ್ದರೂ ಮೀನುಗಾರಿಕೆಗೆ ತೆರಳಿದ್ದ ಕೇರಳದ ಮೀನುಗಾರರು ಅಪಾಯದಲ್ಲಿದ್ದರು. ಮೂವರು ಕೇರಳದ ಮೀನುಗಾರರನ್ನು ಮಂಗಳೂರಿನಿಂದ ಹೊರಟಿದ್ದ ಕೋಸ್ಟ್ ಗಾರ್ಡ್ ಶಿಪ್ ರಕ್ಷಿಸಿದೆ. ಮಂಗಳೂರಿನ ಐಸಿಜಿ ವಿಕ್ರಮ್ ಹೆಸರಿನ ಕೋಸ್ಟ್ ಗಾರ್ಡ್ ಹಡಗಿನ ಸಿಬ್ಬಂದಿ ಗಳು ತಡರಾತ್ರಿ ಆಳ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಸೋಮೇಶ್ವರ ಪುರಸಭೆ ಅಧಿಕಾರಿಗಳಿಂದ ಸಮುದ್ರ ಪಾತ್ರದ ಜನರಿಗೆ ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡಲಾಗಿದೆ. ದಡದಲ್ಲಿದ್ದ ಮೀನುಗಾರಿಕಾ ಬೋಟ್ ಗಳಿಗೂ ಹಾನಿಯಾಗಿದೆ. ದಡದಲ್ಲಿರುವ ಬೋಟ್ ಗಳನ್ನು ಸುರಕ್ಷಿತ ಸ್ಥಳಗಳಿಗೆ ಮೀನುಗಾರರು ರವಾನಿಸಿದ್ದಾರೆ. ಮಂಗಳೂರು ಹೊರವಲಯದ ಸೋಮೇಶ್ವರದ ಕಡಲಕಿನಾರೆಯಲ್ಲಿ ರಸ್ತೆ, ಮನೆಗಳತ್ತ ಸಮುದ್ರದ ನೀರು ನುಗ್ಗಿ ಅವಾಂತರವಾಗಿದೆ.

ಮಂಗಳೂರಿಗೆ ಹೊಂದಿಕೊಂಡಂತೆ ಇರುವ ಕೇರಳದ ಕಾಸರಗೋಡಿನಲ್ಲೂ ಭಾರೀ ಅನಾಹುತ ಸಂಭವಿಸಿದೆ. ನೋಡನೋಡುತ್ತಿದ್ದಂತೆ  ಉಪ್ಪಳದ ಮಸೋಡಿ ತೀರಪ್ರದೇಶದಲ್ಲಿದ್ದ ಮೂಸ ಎಂಬುವವರಿಗೆ ಸೇರಿದ ಮನೆ ಧರಾಶಾಹಿಯಾಗಿದೆ. ಭಾನುವಾರ ಕೂಡ ಕರ್ನಾಟಕ ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು ಕಡಲ ತೀರದ ಜನರು ಎಚ್ಚರಿಕೆಯಿಂದ ಇರಬೇಕಿದೆ.

The post ಸಮುದ್ರಪಾಲಾಯ್ತು ಮನೆ – ಏಳುತ್ತಿದೆ ರಕ್ಕಸ ಅಲೆಗಳು, ಸುರಿಯುತ್ತಿದೆ ಭಾರೀ ಮಳೆ appeared first on Public TV.

Source: publictv.in

Source link