ಸಮುದ್ರ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೆ ಮರವಂತೆಗೆ ಭೇಟಿ ನೀಡಿ; ಒಂದೇ ಕಡೆ ಸಿಗಲಿದೆ ಬೀಚ್ ಮತ್ತು ನದಿಯ ಅದ್ಭುತ ಅನುಭವ | Visit Maravanthe if planning a sea trip beach and the river in one place at udupi


ಸಮುದ್ರ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೆ ಮರವಂತೆಗೆ ಭೇಟಿ ನೀಡಿ; ಒಂದೇ ಕಡೆ ಸಿಗಲಿದೆ ಬೀಚ್ ಮತ್ತು ನದಿಯ ಅದ್ಭುತ ಅನುಭವ

ಮರವಂತೆ

ಉಡುಪಿ: ಒಂದು ಕಡೆ ಭೋರ್ಗರೆಯುವ ಕಡಲು, ಮತ್ತೊಂದು ಕಡೆ ತುಂಬಿ ಹರಿಯುವ ನದಿ. ಇವುಗಳ ನಡುವೆ ರಾಷ್ಟೀಯ ಹೆದ್ದಾರಿ. ಭಾರತದಲ್ಲೇ ಇಂತಹ ವಿಶೇಷ ಪ್ರಕೃತಿ ವಿಸ್ಮಯ ಮತ್ತು ಅದ್ಭುತ ಇರುವುದು ಬಹುಷಃ ರಾಜ್ಯದ ಕರಾವಳಿಯಲ್ಲಿಯೇ ಎಂದು ಅನ್ನಿಸುತ್ತದೆ. ಏಕೆಂದರೆ ರಸ್ತೆಯ ಆ ಕಡೆ ನದಿ, ಈ ಕಡೆ ಸಮುದ್ರ ಸಿಗುವುದು ಎಂದರೆ ಎಂತವರು ಕೂಡ ಒಮ್ಮೆ ನೋಡಲೇಬೇಕು ಎಂದು ಕೊಳ್ಳುತ್ತಾರೆ. ಅದು ಕೂಡ ಹೊರ ರಾಜ್ಯಕ್ಕೆ ಭೇಟಿ ನೀಡದೆ ಇಲ್ಲೇ ಅಂತಹ ಅಧ್ಬುತಕ್ಕೆ ಸಾಕ್ಷಿಯಾಗುವುದು ಪ್ರವಾಸಿಗರಿಗೆ ಮತ್ತಷ್ಟು ಖುಷಿ. ಹಾಗಿದ್ದರೆ ಯಾವುದೀ ಸುಂದರ ಸ್ಥಳ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಾವತ್ತೂ ವಿರಮಿಸದೇ ಅಪ್ಪಳಿಸುವ ಸಮುದ್ರದ ಅಲೆ. ಕಲ್ಲುಗಳ ಮೇಲೆ ಸೃಷ್ಟಿಯಾಗುವ ಹಾಲ್ನೊರೆ, ಕಣ್ಣು ಹಾಯಿಸಿದಷ್ಟೂ ಕಾಣುವ ಕಡಲ ನೀಲ ಜಲ ರಾಶಿ, ದೂರದಲ್ಲೆಲ್ಲೋ ತೇಲುವ ದೋಣಿ, ನಾವೇ ಸಮುದ್ರ ಮಧ್ಯೆ ನಿಂತ ಭಾವ. ಇದು ಉಡುಪಿ ಜಿಲ್ಲೆಯ ಮರವಂತೆ ಕಡಲ ತೀರದಲ್ಲಿ ಇರುವ ಸಮುದ್ರ. ಈ ಸಮುದ್ರದ ಇಕ್ಕೆಲಗಳಲ್ಲಿನ ಕಲ್ಲುಗಳ ಮೇಲೆ ನಿಂತರೆ ನಮಗಾಗುವ ಅದ್ಭುತ ಅನುಭವ ಹೇಳತೀರದು. ಅದನ್ನು ಸ್ವತಃ ಅನುಭವಿಸದರೆ ಮಾತ್ರ ಅದರ ರೋಮಾಂಚಕತೆ ಅರ್ಥವಾಗುತ್ತದೆ.

ನಮ್ಮ ದೇಶದಲ್ಲೇ ಹಲವಾರು ಸಮುದ್ರ ಕಿನಾರೆಗಳು ಇವೆ. ಆದರೆ ಅವುಗಳಲ್ಲಿ ಮರವಂತೆ ಬೀಚ್ ವಿಶೇಷ ಏಕೆಂದರೆ ಒಂದು ಕಡೆ ಅರಬ್ಬೀ ಸಮುದ್ರ ಮತ್ತೊಂದು ಕಡೆ ಸೌಪರ್ಣಿಕಾ ನದಿ ನಡುವೆ ರಾಷ್ಟ್ರೀಯ ಹೆದ್ದಾರಿ. ಒಂದೇ ದಂಡೆಯ ಅಕ್ಕ ಪಕ್ಕ ನದಿ ಮತ್ತು ಸಮುದ್ರ ಇರುವುದು ನಮ್ಮ ದೇಶದಲ್ಲೇ ಅಪರೂಪ. ಕಲ್ಲುಗಳನ್ನು ಜೋಡಿಸುವ ಬದಲಿಗೆ ದಂಡೆಗೆ ಲಂಬವಾಗಿ ಸಮುದ್ರದತ್ತ ಹೊರಚಾಚಿರುವ ಗ್ರಾಯಿನ್ ಅಥವಾ ಕರೆಗೋಡೆ ಎಂದು ಕರೆಯಲಾಗುವ ಕಲ್ಲಿನ ನಿರ್ಮಾಣಗಳನ್ನು ಇಲ್ಲಿ ರಚಿಸಲಾಗಿದೆ. ಇದರ ಮೇಲೆ ನಿಂದು ಸಮುದ್ರ ನೋಡುದೇ ಸಂತಸ. ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವವರನ್ನು ಈ ಪ್ರಾಕೃತಿಕ ವಿಶೇಷತೆ ಸೆಳೆಯುತ್ತಿದೆ.

ಸದ್ಯ ಮಳೆ ಕಡಿಯಾಗುತ್ತಿದ್ದಂತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮರವಂತೆ ಸಮುದ್ರದತ್ತ ದಾವಿಸುತ್ತಿದ್ದಾರೆ. ದೂರದ ಊರಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗುವವರು ಕೂಡ ತಮ್ಮ ವಾಹನ ನಿಲ್ಲಿಸಿ ಕ್ಷಣ ಕಾಲ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಅಲ್ಲದೇ ಸೆಲ್ಫಿ ಕ್ಲಿಕ್ಕಿಸಿ ಆನಂದ ಪಡುತ್ತಿದ್ದಾರೆ.

ಒಟ್ಟಿನಲ್ಲಿ ಯಾವಾಗಲೂ ಒಂದೇ ತರಹದ ಸಮುದ್ರ ನೋಡಿ, ಬೋರ್ ಆಯ್ತು, ಅಂದರೆ ಮರವಂತೆಯಂತ ವಿಶೇಷ ಸಮುದ್ರಕ್ಕೂ ಭೇಟಿ ನೀಡಬಹುದು. ಉಡುಪಿ ಕಡೆ ಪ್ರವಾಸಕ್ಕೆ ಬಂದರೆ ಮರವಂತೆಗೂ ಕೂಡ ಭೇಟಿ ನೀಡಬಹುದು.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ:
ಸಮುದ್ರದಾಳದಲ್ಲಿ ಹಾರಾಡಿದ ಕನ್ನಡ ಧ್ವಜ; ನೇತ್ರಾಣಿ ಅಡ್ವೇಂಚರ್ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

World Oceans Day 2021: ಸಮುದ್ರಕ್ಕೆ ಪ್ರವಾಸ ಹೋಗುವುದು ಬಲು ಇಷ್ಟ ಎನ್ನುವವರು ಸಾಗರದ ಕಾಳಜಿಯ ಬಗ್ಗೆಯೂ ಗಮನಹರಿಸಿ

TV9 Kannada


Leave a Reply

Your email address will not be published. Required fields are marked *