ಉಡುಪಿ: ಸಮ್ಮತಿಯಿಂದ ಬೆಳೆಸಿದ ದೈಹಿಕ ಸಂಪರ್ಕ ಅಪರಾಧವೇನಲ್ಲ, ಹಾಗಾಗಿ ರಮೇಶ್​​ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡುವ ವೇಳೆ ಜೆ.ಸಿ. ಮಾಧುಸ್ವಾಮಿ, ರಮೇಶ್​​ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದರು.

ಜಾರಕಿಹೊಳಿ ಅವರಿಗೆ ಸರ್ಕಾರ ಮತ್ತು ಪಕ್ಷದ ಕಡೆಯಿಂದ ಏನೂ ತೊಂದರೆ ಮಾಡಿಲ್ಲ. ಆಕಸ್ಮಿಕವಾದ ಘಟನೆಗೆ ಅವರು ಬಲಿಯಾಗಿದ್ದಾರೆ ಅಷ್ಟೇ. ನಾವೆಲ್ಲ ಅವರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದೇವೆ. ಇದೊಂದು ಕಾನೂನಾತ್ಮಕ ಮತ್ತು ನೈತಿಕ ವಿಚಾರ. ಆದ್ದರಿಂದ ನೈತಿಕ ಹೊಣೆ ಹೊತ್ತು ರಮೇಶ್​ ರಾಜೀನಾಮೆ ನೀಡಿದ್ದಾರೆ. ಕಾನೂನಾತ್ಮಕವಾಗಿಯೂ ಯಾವುದೇ ಸಮಸ್ಯೆ ಇದೆ ಅನಿಸಲ್ಲ ಎಂದರು.

ನ್ಯಾಯಾಲಯದಲ್ಲಿ ಪ್ರಕರಣ ಇದ್ದಾಗ ಯಾರನ್ನೂ ದೂರಲು ಸಾಧ್ಯವಿಲ್ಲ

ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ. ಹೀಗೆಂದು ಸುಪ್ರೀಂಕೋರ್ಟ್ ಹೇಳಿದೆ. ಆ ಹೆಣ್ಣುಮಗಳ ವರ್ತನೆ ನೋಡಿದರೆ ಇಚ್ಛೆಪಟ್ಟು ಹೋಗಿದ್ದಾರೆ ಅನ್ನೋ ಭಾವನೆ ಬರುತ್ತೆ. ಹಾಗಾಗಿ ಜಾರಕಿಹೊಳಿಗೆ ಶಿಕ್ಷೆ ಆಗಲಾರದು ಅನಿಸುತ್ತೆ. ಎಲ್ಲವನ್ನೂ ಎದುರಿಸಲೇಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇದ್ದಾಗ ಯಾರನ್ನೂ ದೂರಲು ಸಾಧ್ಯವಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದರು ಮಾಧುಸ್ವಾಮಿ.

ಬೇರೆ ಪಕ್ಷದಿಂದ ಬಿಜೆಪಿಗೆ ಬರುವುದಾದರೆ ಸ್ವಾಗತ

ಹೀಗೆ ಮುಂದುವರಿದ ಅವರು, ಬಿಜೆಪಿಗೆ ಯಾರಾದರೂ ಬರುವುದಿದ್ದರೆ ಬರಲಿ. ಬೇರೆ ಪಕ್ಷದಿಂದ ಬಿಜೆಪಿಗೆ ಬರುವುದಾದರೆ ಸ್ವಾಗತ. ವಿಸ್ತರಣೆ ರಾಜಕೀಯ ಎಲ್ಲಾ ಪಕ್ಷಗಳ ಉದ್ದೇಶ ಆಗಿರುತ್ತದೆ. ಕಾಂಗ್ರೆಸ್​ನಿಂದ ಯಾರಾದರೂ ಬರುವವರಿದ್ದರೂ ನಾವು ಸ್ವಾಗತಿಸುತ್ತೇವೆ ಎಂದು ಡಿ.ಕೆ ಶಿವಕುಮಾರ್​​ ಹೇಳಿಕೆಗೆ ಟಾಂಗ್​ ನೀಡಿದರು.

ವ್ಯಾಕ್ಸಿನ್ ಬೋಗಸ್ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಚಾರಕ್ಕೆ ತಿರುಗೇಟು ನೀಡಿದ ಸಚಿವ ಮಾದುಸ್ವಾಮಿ, ಲಸಿಕೆ ವಿಚಾರದಲ್ಲಿ ಮೋದಿಯನ್ನ ಟೀಕೆ ಮಾಡಿದರೆ ನಿಮಗೆ ಒಳ್ಳೇದಾಗಲ್ಲ. ದೇಶದಲ್ಲಿ 80 ಕೋಟಿ ಜನಕ್ಕೆ ಉಚಿತ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ 2,000 ಕೋಟಿ ರುಪಾಯಿ ತೆಗೆದಿಟ್ಟಿದೆ ಎಂದು ಹೇಳಿದರು.

ವಿರೋಧ ಪಕ್ಷದಲ್ಲಿ ನನಗಿಂತ ಚೆನ್ನಾಗಿ ಕೆಲಸ ಮಾಡಿದವರು ಯಾರೂ ಇಲ್ಲ

ಡಿ.ಕೆ. ಶಿವಕುಮಾರ್ ಪಾಪದ ಮಾತಿನಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಟೀಕೆ ಮಾಡುವುದನ್ನು ಮಾಡಿ ಅದು ನಿಮ್ಮ ಡ್ಯೂಟಿ. ವಿರೋಧ ಪಕ್ಷದಲ್ಲಿ ನನಗಿಂತ ಚೆನ್ನಾಗಿ ಕೆಲಸ ಮಾಡಿದವರು ಯಾರೂ ಇಲ್ಲ. ನೈಸರ್ಗಿಕ ಆಪತ್ತಿನ ಕಾಲದಲ್ಲಿ ಎಲ್ಲವನ್ನೂ ಟೀಕೆ ಮಾಡಬಾರದು. ವ್ಯಾಕ್ಸಿನ್ ಉತ್ಪಾದನೆ ಮಾಡಲು ಕಂಪನಿಯವರಿಗೂ ಕಾಲಾವಕಾಶ ಬೇಕು. ಮುಂದಿನ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಲಸಿಕೆ ಅಭಿಯಾನ ಮುಗಿಯುತ್ತದೆ. ಇದು ಡಿಕೆ ಶಿವಕುಮಾರ್ ಅವರ ಬದುಕಿನ ಪ್ರಶ್ನೆ, ಹೀಗಾಗಿ ವಿರೋಧ ಮಾಡುತ್ತಾರೆ ಎಂದು ತಪರಾಕಿ ಬಾರಿಸಿದರು.

The post ಸಮ್ಮತಿಯ ದೈಹಿಕ ಸಂಪರ್ಕ ಅಪರಾಧವೇನಲ್ಲ: ರಮೇಶ್​​ ಜಾರಕಿಹೊಳಿ ಪರ ಮಾಧುಸ್ವಾಮಿ ಬ್ಯಾಟಿಂಗ್​​ appeared first on News First Kannada.

Source: newsfirstlive.com

Source link