ಹಾವೇರಿ: ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಫುಲ್ ಗರಂ ಆಗಿದ್ದು, ಕ್ಲಾಸ್ ತೆಗೆದುಕೊಂಡಿದ್ದಾರೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆಯುತ್ತಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲಿ ಜಿಲ್ಲೆಯ ಕೋವಿಡ್ ಪ್ರಕರಣಗಳ ಕುರಿತು ಸರಿಯಾದ ಅಂಕಿ ಅಂಶಗಳನ್ನು ನೀಡದ್ದರಿಂದ ಸಚಿವ ಬಸವರಾಜ್ ಬೊಮ್ಮಾಯಿ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸರಿಯಾದ ಅಂಕಿ, ಸಂಖ್ಯೆ ನೀಡಲು ಆಗದವರು ಕೊರೊನಾ ಹೇಗೆ ನಿಯಂತ್ರಣ ಮಾಡ್ತೀರಾ ಎಂದು ಕೆಂಡಾಮಂಡಲವಾದರು. ತಕ್ಷಣವೆ ಸಂಬಂಧಿಸಿದವರನ್ನು ಅಮಾನತ್ತು ಮಾಡುವಂತೆ ಸೂಚನೆ ನೀಡಿದರು. ಡಿಎಚ್‍ಓ ಡಾ.ರಾಘವೇಂದ್ರಸ್ವಾಮಿ ಅವರನ್ನು ಬದಲಿಸಿ ತಕ್ಷಣವೇ ಜಿಲ್ಲೆಗೆ ಆಕ್ಟಿವ್ ಆಗಿರೋ ಡಿಎಚ್‍ಓ ನೇಮಿಸುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಪ್ರತಿದಿನ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ ಸಾವಿಗೆ ಸರಿಯಾದ ಕಾರಣ ನೀಡದ್ದಕ್ಕೆ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಅವರನ್ನು ತರಾಟೆಗೆ ತೆಗೆದುಕೊಂಡರು. ದಿನ ಸಾಯುತ್ತಿದ್ದಾರೆ, ಜಿಲ್ಲೆಯಲ್ಲಿನ ಸಾವಿನ ಪ್ರಮಾಣ ನೋಡಿದರೆ ಎದೆ ಝಲ್ ಅನ್ನುತ್ತೆ. ನೀವು ಒಂದು ದಿನವಾದರೂ ಸಾವಿನ ಬಗ್ಗೆ ವರದಿ ನೀಡಿದ್ದೀರಾ, ಸಾಯುವವರನ್ನ ನೋಡಿದರೆ ನಿಮಗೇನೂ ಅನ್ನಿಸೋದಿಲ್ವಾ? ಕೊರೊನಾ ಎರಡನೇ ಅಲೆಯಲ್ಲಿ ಬಹಳಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಸರಿಯಾಗಿ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದರು.

The post ಸರಿಯಾಗಿ ಸಂಖ್ಯೆ ನೀಡದವರು ಕೊರೊನಾ ಹೇಗೆ ನಿಯಂತ್ರಿಸ್ತೀರಿ- ಡಿಸಿಗೆ ಬೊಮ್ಮಾಯಿ ಕ್ಲಾಸ್ appeared first on Public TV.

Source: publictv.in

Source link