ಶಿವಮೊಗ್ಗ: ಕೊರೊನಾ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಲಾಕ್ ಡೌನ್ ಸಮಯದಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಿದೆ. ಆದರೆ ಜಿಲ್ಲೆಯ ತೀರ್ಥಹಳ್ಳಿ ಇದುವರೆಗೂ ಇಂದಿಗೂ ಕ್ಯಾಂಟೀನ್ ಆರಂಭವಾಗಿಲ್ಲ. ಹೀಗಾಗಿಯೇ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದ್ದಾರೆ.

ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಯ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ಗೆ ಕಿಮ್ಮನೆ ರತ್ನಾಕರ್ ಚಾಲನೆ ನೀಡಿದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಬಡವರ, ಕೂಲಿ ಕಾರ್ಮಿಕರ ಅನುಕೂಲಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಕೊರೊನಾ ಲಾಕ್‍ಡೌನ್‍ನಲ್ಲಿ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರವೇ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದೆ. ಆದರೆ ತೀರ್ಥಹಳ್ಳಿಯಲ್ಲಿ ಇನ್ನೂ ಇಂದಿರಾ ಕ್ಯಾಂಟೀನ್‍ಗೆ ಜಾಗ ಗುರುತಿಸದೇ ನಿರ್ಮಾಣ ಮಾಡದ ಕಾರಣ ಇಂದಿರಾ ಕ್ಯಾಂಟೀನ್ ತೆರೆದಿರಲಿಲ್ಲ.

ತೀರ್ಥಹಳ್ಳಿ ಶಾಸಕರು ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯದೇ ಇರುವುದನ್ನು ಖಂಡಿಸಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಸಮಾನ ಮನಸ್ಕರನ್ನು ಸೇರಿಸಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಿದ್ದಾರೆ. ಬೆಳಗ್ಗೆ 50 ಜನ ಹಾಗೂ ಮಧ್ಯಾಹ್ನ 100 ಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆಯುವವರೆಗೂ ನಾವೇ ಇಂದಿರಾ ಕ್ಯಾಂಟೀನ್ ನಡೆಸುವುದಾಗಿ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

The post ಸರ್ಕಾರಕ್ಕೆ ಸೆಡ್ಡು ಹೊಡೆದು ಇಂದಿರಾ ಕ್ಯಾಂಟೀನ್ ಆರಂಭಿಸಿದ್ರು ಕಿಮ್ಮನೆ ರತ್ನಾಕರ್ appeared first on Public TV.

Source: publictv.in

Source link