ಸರ್ಕಾರದಲ್ಲಿ ಇದ್ದು ಸರ್ಕಾರದ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಉದ್ಭವವಾಗಿಲ್ಲ: ಜೆಸಿ ಮಾಧುಸ್ವಾಮಿ | JC Madhuswamy on Karnataka Politics BJP Communal Clashes RSS Congress Hindu Muslim


ಸರ್ಕಾರದಲ್ಲಿ ಇದ್ದು ಸರ್ಕಾರದ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಉದ್ಭವವಾಗಿಲ್ಲ: ಜೆಸಿ ಮಾಧುಸ್ವಾಮಿ

ಜೆಸಿ ಮಾಧುಸ್ವಾಮಿ

ಬೆಳಗಾವಿ: ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರದ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸುವ ಪರಿಸ್ಥಿತಿ ಉದ್ಭವವಾಗಿಲ್ಲ. ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರದ ಭಾಗವಾಗಿದ್ದೇನೆ. ಸರ್ಕಾರದ ವಿರುದ್ಧ ಆ ರೀತಿ ನಾನು ಮಾತುಗಳನ್ನು ಆಡಿಲ್ಲ ಎಂದು ಬೆಳಗಾವಿಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಗೃಹಸಚಿವರು ತಮಗೆ ಬಂದ ಮಾಹಿತಿ ಆಧರಿಸಿ ಹೇಳಿದ್ದಾರೆ. ಆಕಸ್ಮಿಕವಾಗಿ ಆರಗ ಜ್ಞಾನೇಂದ್ರ ಹೇಳಿದ್ದಾರೆ ಅಂತಾ ಅಂದಿದ್ದೆ. ನಂತರ ಸ್ವತಃ ಗೃಹಸಚಿವ ಆರಗ ಅವರೇ ತಿದ್ದಿಕೊಂಡಿದ್ದಾರೆ. ಯಾವ ಸರ್ಕಾರ ಕೂಡ ವಿವಾದ ಸೃಷ್ಟಿ ಮಾಡಲು ಇರುವುದಿಲ್ಲ. ವಿವಾದವನ್ನು ಬಗೆಹರಿಸಲು ನಾವು ಸರ್ಕಾರ ನಡೆಸೋದು. ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮೊದಲ ಆದ್ಯತೆ ಅಂದಿದ್ದೇನೆ. ಯಾರಾದ್ರೂ ಹಾಳು ಮಾಡಲು ಪ್ರಯತ್ನಿಸಿದ್ರೆ ನಿಲ್ಲಿಸಬೇಕಾಗುತ್ತೆ. ನಿಲ್ಲಿಸದೇ ಹೋದ್ರೆ ಕ್ರಮ ಕೈಗೊಳ್ಳಲು ಯೋಚಿಸಬೇಕಾಗುತ್ತೆ. ಎಲ್ಲರ ಹಿತರಕ್ಷಣೆಗೆ ನಾವು ಕೆಲಸ ಮಾಡ್ತೀವಿ ಎಂದು ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಆರ್​ಎಸ್​ಎಸ್​ನವರು ರಣಹೇಡಿಗಳೆಂದು ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶ ಕಟ್ಟಲು RSS ಪಡುತ್ತಿರುವ ಶ್ರಮಕ್ಕೆ ಬೆಲೆ ಕಟ್ಟೋಕ್ಕಾಗಲ್ಲ. ಮಾತು ಮಾತಿಗೆ RSS ಅವರನ್ನು ಎಳೆದು ತರುವುದು ಸರಿಯಲ್ಲ. ಬಿ.ಕೆ. ಹರಿಪ್ರಸಾದ್ RSS ಟೀಕಿಸುವುದನ್ನು ರೂಢಿಸಿಕೊಂಡಿದ್ದಾರೆ. ಎಲ್ಲದಕ್ಕೂ RSS ಕಾರಣ ಅಂತಾ ಮಾತಾಡೋದು ಗೌರವ ತರಲ್ಲ. ರಣಹೇಡಿಗಳೆಂದು ಮಾತಿನಲ್ಲೇ ಬಿ.ಕೆ. ಹರಿಪ್ರಸಾದ್ ಧೀರರಾದ್ರೆ, ಒಂದು ದಿವಸ ಅವರೇ ಪಶ್ಚಾತ್ತಾಪ ಪಡಬೇಕಾಗುತ್ತೆ. ವಿನಾಕಾರಣ ಆರ್​​ಎಸ್​ಎಸ್​​ ಬಗ್ಗೆ ಮಾತನಾಡೋದು ಸರಿಯಲ್ಲ. ಮಾತು ಎತ್ತಿದ್ರೆ ಬರೀ ನಾಗ್ಪುರ ನಾಗ್ಪುರ ಅಂತಾ ಹೇಳುತ್ತ್ತೀರಿ. ಅದೇ ನಾಗ್ಪುರದಲ್ಲೇ ಡಾ. ಅಂಬೇಡ್ಕರ್ ಅವರು ದೀಕ್ಷೆ ಪಡೆದಿದ್ದು ಎಂದು ಬೆಳಗಾವಿಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಬಿಜೆಪಿ ಬಂದಿರೋದೇ ಸಂವಿಧಾನ ಬದಲಿಸಲು ಎಂದು ವಿಪಕ್ಷಗಳ ಆರೋಪ ವಿಚಾರವಾಗಿಯೂ ಅವರು ಮಾತನಾಡಿದ್ದಾರೆ. ಯಾವ ಸಂವಿಧಾನ ಬದಲಾಯಿಸುತ್ತೇವೆ ಅಂತಾ ಹೇಳಿದೀವಿ? ಎಲ್ಲಿ ಬದಲಾಯಿಸಿದೀವಿ? ನಾವು ನಮ್ಮ ಪ್ರಣಾಳಿಕೆಯಲ್ಲಿ ಏನ್ ಹೇಳಿದೀವಿ ಅಷ್ಟು ಮಾಡಿದೀವಿ. ಸಂವಿಧಾನ ಬದಲಾಯಿಸುವ ಸ್ಥಿತಿ ದೇಶದಲ್ಲಿ ಬಂದಿದೆ ಅಂತಾ ನಮಗೆ ಗೊತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಮುಸ್ಲಿಂರಿಗೆ ಆರ್ಥಿಕ ಬಹಿಷ್ಕಾರ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು ಯಾರು ಬಹಿಷ್ಕಾರ ಹಾಕಿದ್ದಾರೆ? ಯಾರೋ ಒಬ್ಬ ಮಾತನಾಡೋದು ಆರ್ಥಿಕ ಬಹಿಷ್ಕಾರ ಆಗುತ್ತಾ? ಆರ್ಥಿಕ ಬಹಿಷ್ಕಾರ ಹಾಕೋಕೆ ಸಾಧ್ಯನಾ? ಆ ಸಂಘಟನೆಗೂ ಸರ್ಕಾರಕ್ಕೂ ಯಾವುದೂ ಸಂಬಂಧ ಇಲ್ಲ. ಏನು ಆಗಿದೆ ವಾಸ್ತವ ಮಾಹಿತಿ ತಗೆದುಕೊಂಡ ಮೇಲೆ ನಿಜವಾದ ಕ್ರಮ ಜರುಗಿಸುತ್ತೇವೆ. ಕ್ರಮ ಕೈಗೊಳ್ಳಬೇಕಾಗುತ್ತೆ ಇಲ್ಲವಾದ್ರೆ ಸರ್ಕಾರ ನಡೆಸೋದು ಹೇಗೆ? ಯಾರಾದರೂ ಸುಮ್ಮಸುಮ್ಮನೇ ಪ್ರಚೋದನೆ ಮಾಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ರೆ ಕಾನೂನು ಸುವ್ಯವಸ್ಥೆ ಪಾಲನೆ ಹೇಗೆ ಮಾಡೋಕಾಗುತ್ತೆ? ಕಾನೂನು ಯಾರೇ ಕೈಗೆ ತಗೆದುಕೊಂಡರೂ ಅವರ ವಿರುದ್ಧ ಕ್ರಮ ಆಗುತ್ತೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

TV9 Kannada


Leave a Reply

Your email address will not be published.