ಸರ್ಕಾರದ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಕ್ರಮದ ವೇದಿಕೆಗೆ ಪುನೀತ್ ಹೆಸರು


ಬೆಂಗಳೂರು: ತಮ್ಮ ನಡೆ, ನುಡಿ, ಸರಳತೆ, ಸಮಾಜ ಸೇವೆ ಮೂಲಕ ಯುವ ಜನತೆಗೆ ಮಾದರಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಕಲಬುರಗಿಯಲ್ಲಿ ಇದೇ 11 ರಂದು ನಡೆಯಲಿರುವ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರದ ವೇದಿಕೆಗೆ ಹೆಸರಿಡಿಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ತೀರ್ಮಾನಿಸಿದ್ದಾರೆ.

ಇದೇ ತಿಂಗಳ 11 ರಂದು ಕಲಬುರಗಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಉದ್ಯಮಿಯಾಗಿ ಉದ್ಯೋಗ ನೀಡು ಮತ್ತು ಕೈಗಾರಿಕೆ ಅದಾಲತ್ ಕಾರ್ಯಾಗಾರವನ್ನು ಆಯೋಜಿಸಿದೆ. ಕಾರ್ಯಾಗಾರ ನಡೆಯುವ ವೇದಿಕೆಗೆ “ಪುನೀತ್ ರಾಜ್ ಕುಮಾರ್” ಎಂದು ಹೆಸರಿಟ್ಟು ಆಗಲಿದ ಮೇರು ನಟನೆಗೆ ಗೌರವ ಸಮರ್ಪಣೆ ಸಲ್ಲಿಸಲು ಸಚಿವ ನಿರಾಣಿ ಅವರು ಮುಂದಾಗಿದ್ದಾರೆ.

ಕಲಬುರಗಿ ಮಾತ್ರವಲ್ಲದೆ, ಮುಂದೆ ನಡೆಯಲಿರುವ ಮೈಸೂರು, ಬೆಳಗಾವಿ, ಕರಾವಳಿಭಾಗದ ಮಂಗಳೂರು ಹಾಗೂ ತುಮಕೂರಿನಲ್ಲಿ “ಉದ್ಯಮಿಯಾಗು ಉದ್ಯೋಗ ನೀಡು” ಕಾರ್ಯಕ್ರಮದ ವೇದಿಕೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಸರ್ವಸಮ್ಮತದ ತೀರ್ಮಾನವನ್ನು ಸಚಿವರು ತೆಗೆದುಕೊಂಡಿದ್ದಾರೆ.

ಕೇವಲ ಸಿನಿಮಾ ಕ್ಷೇತ್ರಕ್ಕೆ ಗುರುತಿಸಿಕೊಳ್ಳದ ಪುನೀತ್ ರಾಜ್ ಕುಮಾರ್ ಅನೇಕ ಸಮಾಜ‌ ಸೇವೆಗಳಲ್ಲೂ ತೊಡಗಿಸಿಕೊಂಡಿದ್ದರು. ನಿಜ ಜೀವನದಲ್ಲಿ ಪುನೀತ್ ರಾಜ್ ಕುಮಾರ್ ರಾಜಕುಮಾರನಾಗಿಯೇ ಮೆರೆದರು. ಮುಂದಿನ ಯುವಜನಾಂಗಕ್ಕೆ ಅವರ ಹೆಸರು “ಆಜಾರಮರಗೊಳಿಸಲು” ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿರುವುದಾಗಿ ನಿರಾಣಿ ಅವರು ಹೇಳಿದ್ದಾರೆ.

ಯುವಜನತೆಯು ಯಾರೊಬ್ಬರ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ ಬದುಕಬೇಕು ಎಂಬುದು ಅಪ್ಪು ಅವರ ಕನಸಾಗಿತ್ತು. ಅವರು ಕಂಡಿದ್ದ ಕನಸನ್ನು ನನಸು ಮಾಡುವ ಸಣ್ಣ ಪ್ರಯತ್ನ ಇದಾಗಿದೆ ಎಂದಿದ್ದಾರೆ. ಪುನೀತ್​ ರಾಜ್​ಕುಮಾರ್​ ನಟನಾಗಿ ಮಾತ್ರವಲ್ಲ ನಿರ್ಮಾಪಕನಾಗಿಯೂ ಉದ್ಯಮಶೀಲತೆ ತೋರಿದರು. ಅವರು ಪಿಆರ್​ಕೆ ಪ್ರೊಡಕ್ಷನ್​ ಆರಂಭಿಸುವ ಮೂಲಕ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದರು. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ಅವರು ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದರು ಎಂದು ನಿರಾಣಿ ಅವರು ಕೊಂಡಾಡಿದರು.

News First Live Kannada


Leave a Reply

Your email address will not be published. Required fields are marked *