1. ಎಸ್.ಆರ್ ವಿಶ್ವನಾಥ್ ಮನೆಗೆ ಪೊಲೀಸ್ ಭದ್ರತೆ
ಕೊಲೆಗೆ ಸ್ಕೆಚ್ ಹಿನ್ನೆಲೆ ಶಾಸಕ ಎಸ್.ಆರ್ ವಿಶ್ವನಾಥ್ ಮನೆಗೆ ಪೊಲೀಸ್ ಬಂದೂಬಸ್ತ್ ಒದಗಿಸಲಾಗಿದೆ. ಸಿಂಗನಾಯಕನಹಳ್ಳಿಯಲ್ಲಿರೋ ವಿಶ್ವನಾಥ್ರವರ ಮನೆಗೆ ರಾಜಾನುಕುಂಟೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.. ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.. ನಿನ್ನೆ ವಿಶ್ವನಾಥ್ ಕೊಲೆಗೆ ಸ್ಕೆಚ್ ಹಾಕಿರೋ ಬಗ್ಗೆ ವಿಡಿಯೋವೊಂದು ಹರಿದಾಡಿತ್ತು.. ಈ ಬಗ್ಗೆ ಕೇಸ್ ಕೂಡಾ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.. ಈ ಬೆಳವಣಿಗೆಯಿಂದ ಎಸ್.ಆರ್ ವಿಶ್ವನಾಥ್ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.
2. ‘ನಾನು ಬೊಮ್ಮಾಯಿ ಬದಲಾಗ್ತಾರೆ ಎಂದಿಲ್ಲ’
ನಾನು ಸಿಎಂ ಆಗಲ್ಲ, ಸಂಘಟನೆ ಏನು ಮಾಡುತ್ತೋ ಅದೇ ಕೆಲಸ ಮಾಡ್ತೀನಿ ಅಂತಾ ಸಚಿವ ಈಶ್ವರಪ್ಪ ಹೇಳಿದ್ದಾರೆ.. ನಿರಾಣಿ ಮುಂದಿನ ಸಿಎಂ ಎಂಬ ಹೇಳಿಕೆಗೆ ಉಡುಪಿಯಲ್ಲಿ ಸ್ಪಷ್ಟನೆ ನೀಡಿದ್ರು.. ನಾನು ನಿರಾಣಿ ಬಗ್ಗೆ ಮಾತನಾಡಿದ್ದು ನಿಜ.. ಆದ್ರೆ ಬಸವರಾಜ್ ಬೊಮ್ಮಾಯಿ ಬದಲಾಗ್ತಾರೆ ಅಂತಾ ಹೇಳಿಲ್ಲ ಅಂತ ಸಮರ್ಥಿಸಿಕೊಂಡ್ರು.. ಮುರುಗೇಶ್ ನಿರಾಣಿ ಸಣ್ಣ ಉದ್ದಿಮೆ ಆರಂಭಿಸಿ ದೊಡ್ಡ ಉದ್ಯಮಿಯಾದವರು.. ಒಂದು ವೇಳೆ ಅವಕಾಶ ಸಿಕ್ಕರೆ ಮುಂದೆ ಸಿಎಂ ಆಗಬಹುದು ಎಂದಿದ್ದೆ ಅಷ್ಟೆ ಅಂತಾ ಸ್ಪಷ್ಟನೆ ನೀಡಿದ್ರು.. ಇನ್ನು ಇದೇ ವೇಳೆ ನಾನು ಸಿಎಂ ಆಗಲ್ಲ, ಪಕ್ಷ ನನ್ನನ್ನು ಡಿಸಿಎಂ ಮಾಡಿತ್ತು, ಸಂಘಟನೆ ಏನೂ ನೀಡುತ್ತೋ ಅದನ್ನ ಮಾಡ್ತೀನಿ ಅಂತ ಹೇಳಿದ್ರು.
3. ‘ಸೆಂಟ್ರಲ್ ವಿಸ್ತಾ ಯೋಜನೆಯಿಂದ ಮಾಲಿನ್ಯ ಇಲ್ಲ’
ಸೆಂಟ್ರಲ್ ವಿಸ್ತಾ ಯೋಜನೆಯಿಂದ ದೆಹಲಿಯಲ್ಲಿ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ ಅಂತಾ ಸುಪ್ರಿಂ ಕೋರ್ಟ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಈ ಯೋಜನೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ ಅಂತಾನೂ ಕೇಂದ್ರ ಭರವಸೆ ನೀಡಿದೆ.. ಇನ್ನು ಈ ಕುರಿತಂತೆ ಆದಿತ್ಯಾ ದುಬೆ ಎನ್ನುವವರು ಯೋಜನೆಯಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ ಬುಧವಾರ ಸಂಜೆಯ ವೇಳೆಗೆ ಅಪಾಯಕಾರಿ ಮಟ್ಟವನ್ನು ತಲುಪಿದೆ.. ಸರಾಸರಿ 374 ಅನ್ನು ದಾಖಲಿಸಿದೆ.
4. ಕೃಷಿ ಕಾಯ್ದೆ ರದ್ದತಿಗೆ ಒಪ್ಪಿಗೆ ನೀಡಿದ ರಾಷ್ಟ್ರಪತಿ
ಉಭಯ ಸದನಗಳು ಸಂಸತ್ತಿನಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಿದ ಕೃಷಿ ಕಾನೂನುಗಳ ರದ್ದತಿ ಕಾಯ್ದೆ-2021ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರತಿಪಕ್ಷಗಳು ಚರ್ಚೆಯನ್ನು ಬಯಸಿ ಭಾರೀ ಘೋಷಣೆಗಳನ್ನು ಕೂಗಿದ್ದವು. ಆದರೆ ಯಾವುದೆ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ‘ದಿ ಫಾರ್ಮ್ ಲಾಸ್ ರಿಪೀಲ್ ಬಿಲ್-2021 ಅನ್ನು ಸರ್ಕಾರವು ಅಂಗೀಕರಿಸಿತ್ತು. ಉಭಯ ಸದನಗಳಲ್ಲಿ ಈ ಕಾಯ್ದೆಯನ್ನು ಸರ್ಕಾರವು ಮಂಡಿಸಿದ ಕೆಲವೇ ನಿಮಿಷಗಳಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
5. 934 ರೈಲ್ವೇ ಕೋಚ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ
ದೇಶದ ಅತೀ ದೊಡ್ಡ ಸಂಪರ್ಕ ಜಾಲ ರೈಲ್ವೆಯಲ್ಲಿ ಮತ್ತಷ್ಟು ಸುರಕ್ಷತಾ ಕ್ರಮ ಕೈಗೊಳ್ಳಲಾಗ್ತಿದೆ ಅಂತ ಸರ್ಕಾರ ಹೇಳಿದೆ.. ದೇಶದ 838 ರೈಲ್ವೇ ನಿಲ್ದಾಣಗಳ ಒಟ್ಟು ನಾಲ್ಕು ಸಾವಿರದ 934 ರೈಲ್ವೇ ಕೋಚ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ.. ಈ ಕುರಿತು ಕೇಂದ್ರ ರೈಲ್ವೇ ಸಚಿವಾಲಯ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ನೀಡಿದೆ.. ಅಲ್ಲದೆ ಕೇಂದ್ರದ ಈ ನಿರ್ಧಾರದಿಂದ ಕಳೆದ ಮೂರು ವರ್ಷಗಳಲ್ಲಿ ಅಂದರೆ 2018 ರಿಂದ 2020ರ ವರೆಗೆ ರೈಲ್ವೇ ವಿಭಾಗದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತಿದೆ ಅಂತಾ ಲೋಕಸಭೆಗೆ ರೈಲ್ವೇ ಸಚಿವಾಲಯ ಮಾಹಿತಿ ನೀಡಿದೆ.
6. ಆಪರೇಷನ್ ಯಡವಟ್ಟು.. ದೃಷ್ಟಿ ಕಳೆದುಕೊಂಡ 65 ಮಂದಿ
ಬಿಹಾರ್ನ ಮುಜಾಫರ್ಪುರ್ ನಗರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಲ್ಲಿ ದುರಂತ ಸಂಭವಿಸಿದೆ.. ಶಸ್ತ್ರ ಚಿಕಿತ್ಸೆಯ ತೀವ್ರ ಸೋಂಕಿನ ನಂತರ 40 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದು, ಇದೀಗ ದೃಷ್ಟಿ ಕಳೆದುಕೊಂಡವರ ಸಂಖ್ಯೆ 65ಕ್ಕೆ ಏರಿದೆ.. ನವೆಂಬರ್ 22 ಮತ್ತು 27ರ ನಡುವೆ ನಡೆದ ಶಸ್ತ್ರ ಚಿಕಿತ್ಸೆ ನಂತರ, ಹಲವರಿಗೆ ತೀವ್ರವಾದ ಕಣ್ಣಿನ ಸೋಂಕು ಉಂಟಾಯಿತು.. ಮಂಗಳವಾರದವರೆಗೆ 25 ಸಂತ್ರಸ್ತರು ಪತ್ತೆಯಾಗಿದ್ದಾರೆ. ಪಾಟ್ನಾದ ಆಸ್ಪತ್ರೆಗಳಲ್ಲಿ ಇದುವರೆಗೂ 12 ಜನರ ಸೋಂಕಿತ ಕಣ್ಣುಗಳನ್ನು ತೆಗೆದುಹಾಕಿದ್ದಾರೆ, ಮುಜಾಫರ್ಪುರದ ಆಸ್ಪತ್ರೆಯಲ್ಲಿ ಉಳಿದ 53 ಮಂದಿಗೂ ಇದೇ ಸಲಹೆ ಕೊಡಲಾಗಿದೆ.
7. ಪ್ರವಾಹ ಸಂತ್ರಸ್ತರಿಗೆ ಮಿಡಿದ ಟಾಲಿವುಡ್ ಸ್ಟಾರ್ಸ್
ಆಂಧ್ರದಲ್ಲಿ ಭಾರೀ ಪ್ರಮಾಣದ ಮಳೆ ಹಾನಿ ಆಗಿದ್ದು, ಅದಕ್ಕೆ ಟಾಲಿವುಡ್ ಸ್ಟಾರ್ಗಳು ಸಂತ್ರಸ್ತರಿಗಾಗಿ ಮಿಡಿದಿದ್ದಾರೆ.. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.. ಟಾಲಿವುಡ್ನ ಮತ್ತೊಬ್ಬ ಸೂಪರ್ ಸ್ಟಾರ್ ಜ್ಯೂ.ಎನ್ ಟಿಆರ್ ಸಹ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.. ಆಂಧ್ರದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಸಂತ್ರಸ್ತರಾದ ಜನರು ದುಃಸ್ಥಿತಿಯಲ್ಲಿದ್ದಾರೆ.. ಅದಕ್ಕೆ ನಾನು ಅವರ ಚೇತರಿಕೆಗೆ ಒಂದು ಸಣ್ಣ ಹೆಜ್ಜೆಯನ್ನು ಇಡುತ್ತಿದ್ದು, ಸಿಎಂ ಪರಿಹಾರ ನಿಧಿಗೆ 25 ಲಕ್ಷವನ್ನು ನೀಡುತ್ತಿದ್ದೇನೆ ಅಂತ ತಿಳಿಸಿದ್ದಾರೆ.. ಅಲ್ಲದೇ, ಅಭಿಮಾನಿಗಳಿಗೂ ಸಹಾಯ ಮಾಡಿ ಅಂತ ಮನವಿ ಮಾಡಿದ್ದಾರೆ.
8. ಉತ್ತರ ಪ್ರದೇಶದಲ್ಲಿ ₹1 ಗೆ ಸಿಗಲಿದೆ ಮನೆ
ಸರ್ಕಾರಿ ನೌಕರರು ಹಾಗೂ ವಕೀಲರಿಗೆ 1 ರೂ.ನಲ್ಲಿ ಮನೆಯನ್ನು ಒದಗಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.. 2022ರ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ಭರ್ಜರಿ ಆಶ್ವಾಸನೆ ನೀಡಿದೆ.. ಈಗ ಸರ್ಕಾರಿ ನೌಕರರು ಹಾಗೂ ವಕೀಲರ ಸರದಿ ಬಂದಿದೆ. ಇನ್ನೂ ಈ ಯೋಜನೆ ಅಧಿಕೃತವಾಗಿ ಜಾರಿಯಾಗಿಲ್ಲ.. 1 ರೂ.ಗೆ ಯಾವ ರೀತಿ ಮನೆಗಳನ್ನು ನೀಡಬಹುದು ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಕರಡು ಸಿದ್ಧ ಪಡಿಸಿದ್ದಾರೆ. ಈ ಕರಡಿಗೆ ಉನ್ನತ ಮಟ್ಟದಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಪಡೆದು ಯೋಜನೆ ಜಾರಿಯಾಗಲಿದೆ ಅಂತಾ ತಿಳಿದುಬಂದಿದೆ.
9. ಮಗನಿಗಾಗಿ ಚಿರತೆ ಬಾಯಿಗೆ ಕೈಹಾಕಿದ ತಾಯಿ!
ಬುಡಕಟ್ಟು ಮಹಿಳೆಯೊಬ್ಬರು ಅಗಾಧ ಧೈರ್ಯ ಪ್ರದರ್ಶಿಸಿ ಚಿರತೆಯೊಂದಿಗೆ ಹೋರಾಡಿ ಚಿರತೆ ಬಾಯಿಂದ ತನ್ನ ಮಗುವನ್ನು ರಕ್ಷಿಸಿಕೊಂಡಿದ್ದಾಳೆ.. ತನ್ನ ಕಂದನನ್ನ ಚಿರತೆ ಬಂದು ಏಕಾಏಕಿ ಕೊಂಡೊಯ್ದಾಗ ಮಹಿಳೆ, ತನ್ನ ಇತರ ಮಕ್ಕಳನ್ನು ಗುಡಿಸಲಲ್ಲಿ ಕೂಡಿಹಾಕಿ, ಎಂಟು ವರ್ಷದ ಮಗನನ್ನು ಚಿರತೆ ಹೊತ್ತೊಯ್ದ ಕಡೆ ಓಡಿದ್ದಾಳೆ.. ಬಳಿಕ ಚಿರತೆಯೊಂದಿಗೆ ಹೋರಾಡಿ ತನ್ನ ಮಗನನ್ನು ರಕ್ಷಿಸಿಕೊಂಡಿದ್ದಾಳೆ.. ಚಿರತೆ ದಾಳಿಯಿಂದ ಮಗು ಮತ್ತು ತಾಯಿ ಗಾಯಗೊಂಡಿದ್ದಾರೆ.. ಮಹಿಳೆಯ ಈ ಸಾಹಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶ್ಲಾಘಿಸಿದ್ದಾರೆ.
10. 76 ವರ್ಷಗಳ ನಂತರ 2ನೇ ಮಹಾಯುದ್ಧದ ಬಾಂಬ್ ಸ್ಫೋಟ
ಮ್ಯೂನಿಚ್ನ ಜನನಿಬಿಡ ಪ್ರದೇಶದಲ್ಲಿನ ರೈಲು ಮಾರ್ಗದ ಪಕ್ಕದ ನಿರ್ಮಾಣ ಸ್ಥಳದಲ್ಲಿ ಎರಡನೇ ಮಹಾ ಯುದ್ಧದ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.. ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಅಂತ ಜರ್ಮನ್ ಪೊಲೀಸರು ತಿಳಿಸಿದ್ದಾರೆ.. ಡೊನ್ನರ್ಸ್ಬರ್ಗರ್ ಬ್ರೂಕೆ ನಿಲ್ದಾಣದ ಬಳಿಯಿರುವ ಸೈಟ್ನಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಇಡೀ ಪ್ರದೇಶ ದಟ್ಟವಾದ ಹೊಗೆಯಿಂದ ಆವೃತಗೊಂಡಿತ್ತು.. 2ನೇ ಮಾಹಾಯುದ್ಧ ನಡೆದು ಸುಮಾರು 76 ವರ್ಷಗಳು ಕಳೆದರೂ ಜರ್ಮನಿಯಲ್ಲಿ ಸ್ಫೋಟಗೊಳ್ಳದ ಬಾಂಬ್ಗಳು ಇನ್ನೂ ಪತ್ತೆಯಾಗುತ್ತಿದ್ದು, ಆಗಾಗ ಕಾಮಗಾರಿ ಕೆಲಸಗಳು ನಡೆಯುವ ಸ್ಥಳಗಳಲ್ಲಿ ಕಂಡು ಬರುತ್ತಿವೆ.