
ಕಿರಣ್ ರಾಜ್
Kannadathi Serial | Kiran Raj: ಕಿರಣ್ ರಾಜ್ ಫೌಂಡೇಶನ್ ಮೂಲಕ ಶಾಲೆಯನ್ನು ದುರಸ್ತಿ ಮಾಡಿ, ಸುಣ್ಣಬಣ್ಣದಿಂದ ಅಲಂಕರಿಸಿ ಕೊಡಲಾಗಿದೆ. ಇದರಿಂದ ಈ ಶಾಲೆಗೆ ಹೊಸ ಮೆರುಗು ಬಂದಂತಾಗಿದೆ.
ಸೀರಿಯಲ್ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ಬ್ಯುಸಿ ಆಗಿದ್ದಾರೆ ನಟ ಕಿರಣ್ ರಾಜ್. ‘ಕನ್ನಡತಿ’ ಧಾರಾವಾಹಿಯಿಂದ (Kannadathi Serial) ಅವರ ಖ್ಯಾತಿ ಹೆಚ್ಚಿದೆ. ಕಿರುತೆರೆಯಲ್ಲಿ ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ಹಾಗಂತ ಅವರು ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಸುಮ್ಮನೆ ಕುಳಿತಿಲ್ಲ. ಸಮಾಜಕ್ಕೆ ತಮ್ಮ ಕೈಲಾದಷ್ಟು ಸಹಾಯಕ ಮಾಡುವ ಮೂಲಕವೂ ಕಿರಣ್ ರಾಜ್ (Kiran Raj) ಮಾದರಿ ಆಗಿದ್ದಾರೆ. ಸಮಾಜಮುಖಿ ಕಾರ್ಯಗಳನ್ನು ಮಾಡುವ ಸಲುವಾಗಿಯೇ ಕಿರಣ್ ರಾಜ್ ಅವರು ತಮ್ಮದೇ ಹೆಸರಿನಲ್ಲಿ ಫೌಂಡೇಶನ್ ಹೊಂದಿದ್ದಾರೆ. ಆ ಮೂಲಕ ಹಲವು ಕೆಲಸಗಳು ಆಗುತ್ತಿವೆ. ತಮ್ಮ ದುಡಿಮೆಯ ಹಣವನ್ನು ಅವರು ಈ ಉದ್ದೇಶಕ್ಕೆ ಬಳಸುತ್ತಾರೆ. ಈಗ ಕಿರಣ್ ರಾಜ್ ಫೌಂಡೇಶನ್ (Kiran Raj Foundation) ಮೂಲಕ ಶಾಲೆಯೊಂದರ ದುರಸ್ಥಿ ಮಾಡಲಾಗಿದೆ. ಹೊಸದಾಗಿ ಪೇಂಟಿಂಗ್ ಮಾಡಿಸಿ ಸರ್ಕಾರಿ ಶಾಲೆಯನ್ನು ಅಂದಗೊಳಿಸಲಾಗಿದೆ. ಅವರು ಮಾಡಿರುವ ಈ ಕೆಲಸ ಎಲ್ಲರಿಗೂ ಮಾದರಿ ಆಗಿದೆ.
ಈ ಮೊದಲು ಕೂಡ ಕಿರಣ್ ರಾಜ್ ಅವರು ಹಲವು ಜನಪರ ಕಾರ್ಯಗಳಿಂದ ಗಮನ ಸೆಳೆದಿದ್ದರು. ಕೊರೊನಾದಿಂದ ಲಾಕ್ಡೌನ್ ಆದಾಗ ಅವರು ಮಂಗಳಮುಖಿಯರಿಗೆ ಸಹಾಯ ಮಾಡಿದ್ದರು. ಅವರ ನೆರವನ್ನು ನೆನೆದು ಮಂಗಳಮುಖಿಯರು ಎಮೋಷನಲ್ ಆಗಿದ್ದರು. ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಮಾಡುವ ಸಾಮಾಜಿಕ ಕೆಲಸಗಳನ್ನು ಗಮನಿಸಿರುವ ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು, ಶೀತಲಗೊಂಡಿದ್ದ ತಮ್ಮ ಶಾಲೆಯನ್ನು ದುರಸ್ತಿ ಮಾಡಿಸಿಕೊಡುವಂತೆ ಕಿರಣ್ ರಾಜ್ಗೆ ಮನವಿ ಮಾಡಿಕೊಂಡಿದ್ದರು. ಮಕ್ಕಳ ಮನವಿಗೆ ಅವರು ಸ್ಪಂದಿಸಿದ್ದಾರೆ.