ಸಲಗನ ಆಟವೇನೋ ಶುರುವಾಯ್ತು.. ಸಿನಿಮಾದ ಪ್ಲಸ್-ಮೈನಸ್ ಏನು..?

ನಾವು ನೀವು ಈಗ ಸಲಗ ಸಿನಿಮಾದ ರಿಲೀಸ್ ಸಂಭ್ರಮ ಸಡಗರವನ್ನ ನೋಡಿದ್ವಿ.. ಈಗ ಸಿನಿಮಾ ಹೇಗಿದೆ.. ಈ ಸಿನಿಮಾವನ್ನ ಯಾಕೆ ನೋಡಬೇಕು.. ಈ ಸಿನಿಮಾದ ಪ್ಲಸ್ ಏನು ಮೈನಸ್ ಏನು.. ಸಲಗ ಸಿನಿಮಾವನ್ನ ನೋಡಿದ ಪ್ರೇಕ್ಷಕ ಪ್ರಭು ಏನೆಂದ..? ಎಲ್ಲವನ್ನೂ ಮುಕ್ತವಾಗಿ ಹೇಳ್ತಿವಿ ಕೇಳಿ..

ಕೊರೊನಾದ ಎರಡು ಅಲೆಗಳ ಬಳಿಕ ಸ್ಯಾಂಡಲ್ವುಡ್ ಅಂಗಳದಲ್ಲಿ ಬಿಗ್ ಸ್ಟಾರ್ ಬಿಗ್ ಮೂವಿ ರಿಲೀಸ್ ಆಗಿದೆ. ದುನಿಯಾ ವಿಜಯ್ ಸಿನಿದುನಿಯಾದ ಬಹುದೊಡ್ಡ ಡೈರೆಕ್ಷನ್ ಕನಸು ಕೊನೆಗೂ ನನಸಾಗಿದೆ. ರಾಜ್ಯಾದ್ಯಂತ ದಸರಾ ಸಂಭ್ರಮ ಹೆಚ್ಚಿಸಿದೆ ಸಲಗ. ಇಷ್ಟಕ್ಕೂ ಡಾಲಿ- ವಿಜಯ್ ಟಗ್ ಆಫ್ ವಾರ್ ರೋಚಕ.. ಹಾಡು ಮತ್ತು ಬ್ಯಾಕ್​​ಗ್ರೌಂಡ್ ಮ್ಯೂಸಿಕ್ ಮನಮೋಹಕ..

ಆಯುಧ ಪೂಜೆಗೆ ಸಂಭ್ರಮದ ‘ಸಲಗ’ನ ಅಬ್ಬರ
ರಾ-ರಗಡ್ ರಂಗಿನ ಕಥೆ ದುನಿಯಾ ವಿಜಯ್ ‘ಸಲಗ’

ಹಲವು ಸೋಲುಗಳನ್ನ ಕಂಡು ತಾನೇ ಏನಾದ್ರು ಮಾಡಬೇಕು ಎಂದು ಮೈ ಕೊಡವಿ ಡೈರೆಕ್ಷನ್ ಕ್ಯಾಪ್ ತೊಟ್ಟು ಆ್ಯಕ್ಷನ್ ಪ್ಲಸ್ ಆ್ಯಕ್ಷನ್ ಕಟ್ ಹೇಳಿ ಗೆದ್ದಿದ್ದಾರೆ ದುನಿಯಾ ವಿಜಯ್.. ಸಲಗ ಸಿನಿಮಾ ಪಕ್ಕಾ ಮಾಸ್ ಸಿನಿಮಾ.. ಮಾಸ್ ಅನ್ನೋಕ್ಕಿಂತ ರಾ ರಾಗಡ್ ಸಿನಿಮಾ.. ರಿಯಲ್ ಭೂಗತ ಲೋಕವನ್ನ ರಿಯಲಿಸ್ಟಿಕ್ ಆಗಿಯೇ ತೋರಿಸಿದ್ದಾರೆ ದುನಿಯಾ ವಿಜಯ್..

ಸಲಗ ಸಿನಿಮಾದ ಒನ್​ ಲೈನ್ ಸ್ಟೋರಿ

ಸೂರಿ ಅಣ್ಣ ಅನ್ನೋ ರೌಡಿಶೀಟರ್ ಕೊಲೆಯಿಂದ ಓಪನ್ ಆಗೋ ಸಿನಿಮಾ, ಮುಂದೆ ಆತನ ತಮ್ಮ ಕೆಂಡ, ಶೆಟ್ಟಿ, ಡೆಡ್ಬಾಡಿ ಸೀನ ಹೀಗೆ ಒಂದಷ್ಟು ಅಂಡರ್ವರ್ಲ್ಡ್ ಡಾನ್ಗಳನ್ನ ಪರಿಚಯಿಸುತ್ತೆ. ಜೈಲಲ್ಲಿ ಇದ್ದುಕೊಂಡೇ ಸೂರಿ ಅಣ್ಣನನ್ನ ಮೇಲಕ್ಕೆ ಕಳುಹಿಸಿದ ಸಲಗ ಎಲ್ಲರ ಕೆಂಗಣ್ಣಿಗೆ ಗುರಿಯಾಗ್ತಾನೆ. ಮೊದಲಾರ್ಧದಲ್ಲಿ ಸಲಗನಿಗೆ ಸ್ಕೆಚ್ ಹಾಕೋ ಇಷ್ಟೂ ಮಂದಿ ಡಾನ್ಗಳಿಗೆ ಭೂಗತಲೋಕದಲ್ಲಿ ಆನೆಯಷ್ಟೇ ದೈತ್ಯವಾಗಿ ಬೆಳೆದು ನಿಂತ ಸಲಗ ಹೇಗೆ ಖೆಡ್ಡಾ ತೋಡ್ತಾನೆ ಅನ್ನೋದನ್ನ ತೋರಿಸಲಾಗಿದೆ. ಇನ್ನು ಸಲಗನ ಅಬ್ಬರ, ಅಟ್ಟಹಾಸವನ್ನ ಮಟ್ಟ ಹಾಕಲು ಕಮೀಷನರ್, ಎಸಿಪಿ ಸಾಮ್ರಾಟ್ರನ್ನ ಅಖಾಡಕ್ಕೆ ಇಳಿಸುತ್ತಾರೆ.

ಎಸಿಪಿ ಬಂದ ಬಳಿಕ ಲಾಂಗ್​ಗೆ ರೆಸ್ಟ್ ಕೊಡ್ತಾನಾ ಸಲಗ..? ಇಷ್ಟಕ್ಕೂ ಸಲಗ ರೌಡಿಸಂಗೆ ಎಂಟ್ರಿ ಆಗಿದ್ಹೇಗೆ..? ಆತನ ಹಿನ್ನೆಲೆ ಏನು..? ವ್ಯವಸ್ಥೆ ಆತನನ್ನ ಹೀಗೆ ಮಾಡಿತಾ..? ನಿಜಕ್ಕೂ ಎಸಿಪಿ ಸಲಗನನ್ನ ಬದಲಿಸೋ ಪ್ರಯತ್ನದಲ್ಲಿ ಗೆಲ್ತಾರಾ ಹೇಗೆ ಅನ್ನೋದೇ ಸಲಗ ಸಿನಿಮಾದ ಸೆಕೆಂಡ್ ಆಫ್ ಸಸ್ಪೆನ್ಸ್​​​..

ಸಲಗ ಸಿನಿಮಾದ ಪ್ಲಸ್ ಪಾಯಿಂಟ್ಸ್​ಗಳ ಬಗ್ಗೆ ಒಂದು ಪಟ್ಟಿನೇ ಮಾಡಬಹುದು. ದುನಿಯಾ ವಿಜಯ್ ನಿರ್ದೇಶನ & ನಟನೆ ಅದ್ಭುತ.. ಮಾಸ್ತಿ ಡೈಲಾಗ್ಸ್ ಸಖತ್ ರಿಯಲಿಸ್ಟಿಕ್ ಕಮ್ ನೈಜ ಜೀವನದ ಕಹಿ ಸಿಹಿ ಸತ್ಯ.. ಶಿವ ಸೇನಾ ಸಿನಿಮಾಟೋಗ್ರಫಿ ನೈಜವಾಗಿ ಮೂಡಿಬಂದಿದೆ.. ಚರಣ್ ರಾಜ್ ಮ್ಯೂಸಿಕ್ ಬೊಂಬಾಟ್.. ಸುಧಿ , ಸಂಜನಾ , ಡಾಲಿ ಸೇರಿದಂತೆ ಎಲ್ಲರೂ ತಮಗೆ ಸಿಕ್ಕ ಪಾತ್ರವನ್ನ ನುಂಗಿ ನೀರು ಕುಡಿದಿದ್ದಾರೆ..

ಕಾಕ್ರೋಚ್ ಸುಧಿಯ ಪಾತ್ರ ಹಾಸ್ಯದ ರಸದೌತಣ ನೀಡಲಿದೆ. ರಾಕ್ಲೈನ್ ಸುಧಾಕರ್ ಇಂದು ನಮ್ಮೊಂದಿಗಿಲ್ಲ. ಆದ್ರೆ ತೆರೆಮೇಲೆ ಮಾತ್ರ, ಅವ್ರು ಅದೇ ಏರು ದನಿಯಲ್ಲಿ ನೋಡುಗರಿಗೆ ಮಸ್ತ್ ಮನರಂಜನೆ ನೀಡ್ತಾರೆ. ಇನ್ನು ಕಮೀಷನರ್ ಪಾತ್ರದಲ್ಲಿ ಅಚ್ಯುತ್, ಸಲಗ ತಂದೆಯ ಪಾತ್ರದಲ್ಲಿ ಸಂಪತ್, ಭಾಸ್ಕರ್ ಅನ್ನೋ ಹೊಸ ಪ್ರತಿಭೆ, ಶೆಟ್ಟಿ ಪಾತ್ರಧಾರಿಯಾಗಿ ಯಶ್ ಶೆಟ್ಟಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಸಿನಿಮಾದ ಪ್ಲಸ್ ಅಂದ್ಮೆಲೆ ಕೊಂಚವಾದ್ರು ಮೈನೆಸ್ ಪಾಯಿಂಟ್ಸ್ ಇರಲೇ ಬೇಕು.. ಸಲಗ ಸಿನಿಮಾ ರಿಯಲಿಸ್ಟಿಕ್ ಸಿನಿಮಾ.. ಹಂಗಂತ ಎಲ್ಲವನ್ನೂ ರಿಯಲ್ ಆಗಿ ತೋರಿಸಲು ಹೋಗಬಾರದು.. ಸಿನಿಮಾವೇ ಬೇರೆ ನಿಜ ಜೀವನವೇ ಬೇರೆ.. ಭೂಗತ ಲೋಕದ ಮಚ್ಚು ಲಾಂಗು ರಕ್ತ , ಗುಂಡು ತುಂಡು ಸಂಭಾಷಣೆ ಫ್ಯಾಮಿಲಿ ಆಡಿಯೆನ್ಸ್​​ಗೆ ಕುಳಿತು ನೋಡಲು ಮುಜುಗರವನ್ನ ಉಂಟುಮಾಡುತ್ತೆ.. ಇದೆಲ್ಲ ಮಾಮೂಲಿ ಅಂತ ಭಾವಿಸಿದ್ರೆ ಅರಾಮಾಗಿ ಸಲಗ ಸಿನಿಮಾವನ್ನ ನೋಡಬಹುದು..

News First Live Kannada

Leave a comment

Your email address will not be published. Required fields are marked *