ಸವರನ್ ಗೋಲ್ಡ್ ಬಾಂಡ್ ಬಗ್ಗೆ ಎಲ್ಲ ಮಾಹಿತಿಯನ್ನು ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ನೀಡಿದ್ದಾರೆ | Investment expert Dr Balaji Rao explains about Sovereign Gold Bond


ಖ್ಯಾತ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ಈ ಸಂಚಿಕೆಯಲ್ಲಿ ಸವರನ್ ಗೋಲ್ಡ್ ಬಾಂಡ್ ಬಗ್ಗೆ ವಿವರಿಸಿದ್ದಾರೆ. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಈ ಬಾಂಡ್ ಇನ್ನೂ ಹೆಚ್ಚು ಜನಪ್ರಿಯಗೊಂಡಿಲ್ಲ. ಸವರನ್ ಗೋಲ್ಡ್ ಬಾಂಡ್ ಅಥವಾ ಎಸ್ ಜಿ ಬಿ ಭಾರತದಲ್ಲಿ ಕೇವಲ ಇತ್ತೀಚಿಗೆ ಲಾಂಚ್ ಆಗಿದೆ. ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸಿದ್ದು 2015ರಲ್ಲಿ ಅಂದರೆ 6 ವರ್ಷಗಳ ಹಿಂದೆ. ಹಿಂದೊಮ್ಮೆ ಚಿನ್ನದ ನಾಡು ಎನಿಸಿಕೊಂಡಿದ್ದ ಭಾರತದಲ್ಲಿ ಈಗ ಚಿನ್ನದ ಉತ್ಪಾದನೆ ಅಕ್ಷರಶಃ ನಿಂತುಹೋಗಿದೆ ಎಂದು ಡಾ ರಾವ್ ಹೇಳುತ್ತಾರೆ. ಹಟ್ಟಿ ಮತ್ತು ಕೋಲಾರ ಗೋಲ್ಡ್ ಫೀಲ್ಡ್ನಲ್ಲಿದ್ದ ಚಿನ್ನದ ರಿಸರ್ವ್ ಗಳು ಈಗ ಬರಿದಾಗಿಬಿಟ್ಟಿವೆ. ಅಂದರೆ, ಪ್ರತಿಸಲ ನಾವು ಚಿನ್ನದ ಅಂಗಡಿಗೆ ಹೋಗಿ ಕೊಳ್ಳುವ ಬಂಗಾರ ಅಮದು ಮಾಡಿಕೊಂಡಿರುವಂಥದ್ದು!

ಹೌದು, ನಂಬಲು ಕಷ್ಟವಾದರೂ ವಾಸ್ತವ ಮಾತ್ರ ಇದೇ. ಚಿನ್ನದ ಬೆಲೆ ಹೆಚ್ಚಾದಾಗ ನಾವು ಭಾರತದಲ್ಲಿ ಯಾರನ್ನೂ ದೂಷಿಸುವಂತಿಲ್ಲ. ವಿವಿಧ ಸಂದರ್ಭಗಳಲ್ಲಿ ನಾವು ಮಾಡುವ ಚಿನ್ನದ ಖರೀದಿಯನ್ನು ಡಾ ರಾವ್ ನಮ್ಮ ದೇಶದ ಕರೆನ್ಸಿಯನ್ನು ಮಾರಿ ಬೇರೆ ದೇಶದ ಕರೆನ್ಸಿ ಕೊಳ್ಳುವುದಕ್ಕೆ ಹೋಲಿಸುತ್ತಾರೆ. ಕರೆನ್ಸಿ ಖರೀದಿಯನ್ನು ಒಂದು ಕೆಟ್ಟ ಪದ್ಧತಿ ಅಂತ ಹೇಳುವ ಅವರು ನಮ್ಮ ದುಡ್ಡು ತೆತ್ತು ಬೇರೆ ದೇಶಗಳಿಂದ ಆಮದಾಗಿರುವ ಚಿನ್ನ ಕೊಳ್ಳುವುದು ಸಹ ಹಿತಕರವಲ್ಲದ ಅನುಭವ ಎನ್ನುತ್ತಾರೆ.

ಓಕೆ, ನಾವು ಚಿನ್ನ ಖರೀದಿಸುವುದು ಎರಡು ಕಾರಣಗಳಿಗೆ ಅಂತ ಬಾಲಾಜಿ ರಾವ್ ಹೇಳುತ್ತಾರೆ. ಮೊದಲ ಕಾರಣ ಹೂಡಿಕೆಯ ಉದ್ದೇಶಕ್ಕಾದರೆ ಎರಡನೆಯದ್ದು, ಒಡವೆಗಳಿಗೆ. ಒಡವೆಗಳ ಖರೀದಿ ಮದುವೆ, ಹಬ್ಬ ಮೊದಲಾದ ಯಾವುದೇ ಕಾರಣಕ್ಕಾಗಿರಬಹುದು. ಈ ಕಾಂಟೆಕ್ಸ್ಟ್ ನಲ್ಲಿ ಇದು ಸಂಬಂಧಪಡದ ವಿಷಯ.

ಎರಡನೇ ಕಾರಣ ಹೂಡಿಕೆಗಾಗಿ. ಅಂದರೆ ಚಿನ್ನದ ಖರೀದಿಯಲ್ಲಿ ಈಗ ಹಣ ಹೂಡಿದರೆ, ಅದರ ಬೆಲೆ ಹೆಚ್ಚುತ್ತಲೇ ಹೋಗುವುದರಿಂದ ಮುಂದೆ ಮಾರಬೇಕಾದ ಪ್ರಸಂಗ ಎದುರಾದರೂ ನಾವು ಹೂಡಿದಕ್ಕಿಂತ ಜಾಸ್ತಿ ಹಣ ಸಿಗುವ ಭರವಸೆ ನಮಗಿರುತ್ತದೆ. ರಿಯಲ್ ಎಸ್ಟೇಟ್ ಅಥವಾ ಬೇರೆ ಯಾವುದಾದರೂ ಯೋಜನೆಯಲ್ಲಿ ಹಣ ಹೂಡುವ ಹಾಗೆ ನಾವು ಚಿನ್ನ ಖರೀದಿಯಲ್ಲಿ ಹೂಡುತ್ತೇವೆ.

ಇದೇ ಆಧಾರದಲ್ಲಿ ಸರ್ಕಾರ ಸವರನ್ ಗೋಲ್ಡ್ ಬಾಂಡ್ ಯೋಜನೆ ಜಾರಿಗೆ ತಂದಿದೆ. ಅಂದರೆ, ನಾವು ಹೂಡುವ ಹಣಕ್ಕೆ ಚಿನ್ನದ ಬದಲು ಅದೇ ಮೌಲ್ಯದ ಬಾಂಡ್ ಸಿಗುತ್ತದೆ. ಇದು ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್​ ಹಾಗೆ. ನಮಗೆ ದುಡ್ಡಿನ ಅವಶ್ಯಕತೆ ಎದುರಾದಾಗ, ಬಾಂಡನ್ನು ಮಾರಿದರೆ ಆಗಿನ ಚಿನ್ನದ ಬೆಲೆಯಲ್ಲಿ ಹಣ ವಾಪಸ್ಸು ಸಿಗುತ್ತದೆ.

ಸರಳ ಪದಗಳಲ್ಲಿ ಹೇಳುವುದಾದರೆ ಎಸ್ ಜಿ ಬಿ ಪೇಪರ್ ರೂಪದಲ್ಲಿರುವ ಚಿನ್ನ.

ಇದನ್ನೂ ಓದಿ:   Sanapur lake: ಸಾಣಾಪೂರ ಕೆರೆ ಬಗ್ಗೆ ಜನರಿಗೆ ಅರಿವು ಮೂಡಿಸಲು ನೀರಿಗೆ ಜಿಗಿದ ಕೊಪ್ಪಳ ಡಿಸಿ -ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *