ಹೊಸದಿಲ್ಲಿ: ಕೋವಿಡ್ ಹಾವಳಿ, ಕೇಂದ್ರ-ರಾಜ್ಯ ಸರಕಾರಗಳ ತರಹೇವಾರಿ ನಿರ್ಬಂಧಗಳು, ಜೈವಿಕ ಸುರಕ್ಷಾ ವಲಯದ ಸಂಕಟಗಳ ನಡುವೆ ಈ ಬಾರಿಯ ಐಪಿಎಲ್‌ ಶುಕ್ರವಾರ ಆರಂಭವಾಗಲಿದೆ. ಎಲ್ಲ ರೀತಿಯ ಸವಾಲುಗಳ ನಡುವೆ ಬಿಸಿಸಿಐ ಎ. 9ರಿಂದ ಮೇ 30ರ ವರೆಗೆ ಕೂಟ ನಡೆಸಲಿದೆ.

ಎ. 9, ಶುಕ್ರವಾರ ಚೆನ್ನೈಯಲ್ಲಿ ಮುಂಬೈ ಇಂಡಿಯನ್ಸ್‌-ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ಉದ್ಘಾಟನ ಪಂದ್ಯ ನಡೆದರೆ ಮೇ 30ರಂದು ಅಹಮದಾಬಾದ್‌ನ ವಿಶ್ವದ ಬೃಹತ್‌ ಕ್ರಿಕೆಟ್‌ ಮೈದಾನದಲ್ಲಿ ಫೈನಲ್‌ ನಡೆಯಲಿದೆ.

ಪ್ರೇಕ್ಷಕರಿಗೆ ಪ್ರವೇಶವಿಲ್ಲ  :

ಕೋವಿಡ್ ಕಾರಣ ಈ ಬಾರಿ ಪ್ರೇಕ್ಷಕರಿಗೆ ಪ್ರವೇಶವಿಲ್ಲ ಎಂದು ಬಿಸಿಸಿಐ ಹೇಳಿದೆ. ಆರಂಭದ ಕೆಲವು ಪಂದ್ಯ ನೋಡಿಕೊಂಡು ಮತ್ತೆ ಪ್ರವೇಶ ನೀಡುವ ಬಗ್ಗೆ ಆಲೋಚಿಸುವುದಾಗಿ ಒಂದೆರಡು ತಿಂಗಳುಗಳ ಹಿಂದೆ ಬಿಸಿಸಿಐ ಹೇಳಿತ್ತು.

ಆರೇ ತಾಣಗಳಲ್ಲಿ ಇಡೀ ಕೂಟ :

ಬೆಂಗಳೂರು, ಹೊಸದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತಾ, ಅಹ್ಮದಾಬಾದ್‌ನಲ್ಲಿ ಈ ಬಾರಿಯ ಕೂಟ ನಡೆಯಲಿದೆ. ಕೋವಿಡ್ ಮುಕ್ತ ಸಂದರ್ಭ ಕನಿಷ್ಠ 8ರಿಂದ 9 ತಾಣಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಈ ಬಾರಿ ಪ್ರತೀ ತಾಣದಲ್ಲೂ ತಲಾ 10 ಪಂದ್ಯಗಳು ನಡೆಯಲಿವೆ. ವಿಶೇಷ ವೆಂದರೆ ಯಾವುದೇ ತಂಡಕ್ಕೂ ತನ್ನದೇ ನೆಲದಲ್ಲಿ ಆಡುವ ಅವಕಾಶವಿಲ್ಲ.

ಕನ್ನಡ ಸೇರಿ 8 ಭಾಷೆಗಳಲ್ಲಿ ಕಮೆಂಟ್ರಿ :

ಹಿಂದಿ, ಇಂಗ್ಲಿಷ್‌ ಜತೆಗೆ ಭಾರತದ ಇತರ 6 ಸ್ಥಳೀಯ ಭಾಷೆಗಳಲ್ಲಿ ವೀಕ್ಷಕ ವಿವರಣೆ ಇರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಲಿ, ಮರಾಠಿ ಭಾಷಿಕರೂ ವಿವರಣೆಯನ್ನು ಕೇಳಬಹುದು. ಭಾಷೆಗಳ ಮಟ್ಟಿಗೆ ಇದು ಉತ್ತಮ ಬೆಳವಣಿಗೆ.

52 : ಒಟ್ಟು 52 ದಿನಗಳ ಕೂಟ. ಎ. 9ರಂದು ಆರಂಭ, ಮೇ 30ಕ್ಕೆ ಮುಕ್ತಾಯ.

90 : ಸ್ಟಾರ್‌ನ್ಪೋರ್ಟ್ಸ್ ಪರ ಪಾಲ್ಗೊಳ್ಳುವ ವೀಕ್ಷಕ ವಿವರಣೆಗಾರರು.

60 : ಐಪಿಎಲ್‌ನಲ್ಲಿ ನಡೆಯುವ ಪಂದ್ಯಗಳ ಸಂಖ್ಯೆ. 56 ಲೀಗ್‌ ಪಂದ್ಯ ಗಳು, ಫೈನಲ್‌ ಸೇರಿ 4 ಅಂತಿಮ ಸುತ್ತಿನ ಪಂದ್ಯಗಳು.

196 : ಈ ಬಾರಿ ಒಟ್ಟು  8 ತಂಡಗಳ 196  ಆಟಗಾರರು.

ಕ್ರೀಡೆ – Udayavani – ಉದಯವಾಣಿ
Read More