ಶಿಮ್ಲಾ: ಕೋವಿಡ್ ಸೋಂಕಿತ ತಾಯಿಯ ದೇಹವನ್ನು ಮಗ ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗಿಸಿದ್ದು, ಊರಿನ ಯಾವಬ್ಬರೂ ಮೃತ ದೇಹ ಕೊಂಡೊಯ್ಯಲು ಸಹಾಯ ಮಾಡದೆ ಅಮಾನವೀಯವಾಗಿ ವರ್ತಿಸಿದ್ದಾರೆ.

ಈ ಹೃದಯವಿದ್ರಾವಕ ಘಟನೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲಿ ನಡೆದಿದ್ದು, ತಾಯಿಯ ದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಅಧಿಕಾರಿಗಳು ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಕಾಂಗ್ರಾ ಡಿಸಿ ರಾಕೇಶ್ ಪ್ರಜಾಪತಿ ಸಹ ಪ್ರತಿಕ್ರಿಯಿಸಿದ್ದು, ತಹಶೀಲ್ದಾರ್ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ.

ನನ್ನ ತಾಯಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಿಗದ ಕಾರಣ ವಾಪಸ್ ಮನೆಗೆ ಕರೆ ತಂದಿದ್ದೆ. ಗುರುವಾರ ಸಂಜೆ 4.30ಕ್ಕೆ ಸಾವನ್ನಪ್ಪಿದರು, ಈ ಬಗ್ಗೆ ಗ್ರಾಮ ಪಂಚಾಯತ್ ಮುಖ್ಯಸ್ಥ ಸೂರಂ ಸಿಂಗ್‍ಗೆ ಮಾಹಿತಿ ನೀಡಿದೆ. ಆದರೆ ಗ್ರಾಮದ ಯಾರೊಬ್ಬರೂ ನನಗೆ ಸಹಾಯ ಮಾಡಲಿಲ್ಲ. ಕಡೆಗೆ ನಾನೇ ನನ್ನ ತಾಯಿಯ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಕಿಲೋಮೀಟರ್‍ಗಟ್ಟಲೇ ದೂರ ಇರುವ ಸ್ಮಶಾನಕ್ಕೆ ಕೊಂಡೊಯ್ದೆ ಎಂದು ವ್ಯಕ್ತಿ ವಿವರಿಸಿದ್ದಾರೆ.

ಪಂಚಾಯಿತಿ ಮುಖ್ಯಸ್ಥ ಸಹ ಯಾವುದೇ ವಾಹನದ ವ್ಯವಸ್ಥೆ ಮಾಡಲಿಲ್ಲ, ಹೀಗಾಗಿ ನಾನೇ ಹೆಗಲ ಮೇಲೆ ತಾಯಿಯ ದೇಹ ಹೊತ್ತೊಯ್ಯಲು ನಿರ್ಧರಿಸಿದೆ ಎಂದು ವಿವರಿಸಿದ್ದಾರೆ.

ಈ ಬಗ್ಗೆ ಸಿಂಗ್ ಸಹ ಪ್ರತಿಕ್ರಿಯಿಸಿದ್ದು, ನಾನು ಹಾಗೂ ಆಶಾ ಕಾರ್ಯಕರ್ತೆಯರು ಪಿಪಿಇ ಕಿಟ್ ವ್ಯವಸ್ಥೆ ಮಾಡುತ್ತಿದ್ದೆವು. ಆದರೆ ಆತ ಇದನ್ನು ತಿರಸ್ಕರಿಸಿದ. ಎರಡು ಟ್ರ್ಯಾಕ್ಟರ್ ಟ್ರೈಲರ್ ಮಾಲೀಕರ ಬಳಿ ಮಾತನಾಡಿದೆ. ಆದರೆ ಕೊರೊನಾ ಸೋಂಕು ತಗುಲುವ ಭಯದಿಂದ ಅವರು ಟ್ರೈಲರ್ ನೀಡಲು ಒಪ್ಪಲಿಲ್ಲ. ನನಗೆ ಅನಾರೋಗ್ಯವಾದ ಕಾರಣ ನಾನು ಅವರ ಮನೆಗೆ ತೆರಳಲಿಲ್ಲ, ಆದರೆ ಗ್ರಾಮಸ್ಥರಿಗೆ ಕಟ್ಟಿಗೆ ವ್ಯವಸ್ಥೆ ಮಾಡಲು ತಿಳಿಸಿದ್ದೆ ಎಂದು ಪಂಚಾಯಿತಿ ಮುಖ್ಯಸ್ಥ ತಿಳಿಸಿದ್ದಾರೆ.

ತಹಶೀಲ್ದಾರ್ ಬಂಗ್ವಾರ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲು ಗ್ರಾಮಸ್ಥರ ಗುಂಪೊಂದು ಸ್ಮಶಾನಕ್ಕೆ ತೆರಳಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಮೃತ ಸೋಂಕಿತರ ದೇಹವನ್ನು ಜಿಲ್ಲಾಡಳಿತವೇ ಅಂತ್ಯಕ್ರಿಯೆ ಮಾಡುತ್ತಿದೆ. ಇದೀಗ ಮನೆಯಲ್ಲಿ ಸೋಂಕಿತರು ಸಾವನ್ನಪ್ಪಿದರೂ ಜಿಲ್ಲಾಡಳಿತದಿಂದಲೇ ಮಾಡಲಾಗುವುದು ಎಂದು ತಿಳಿಸಿದ್ದಾರೆ.

The post ಸಹಾಯ ಮಾಡದ ಗ್ರಾಮಸ್ಥರು- ಸೋಂಕಿತ ತಾಯಿಯ ದೇಹವನ್ನು ಹೆಗಲ ಮೇಲೆ ಹೊತ್ತೊಯ್ದು ಅಂತ್ಯಸಂಸ್ಕಾರಗೈದ ಮಗ appeared first on Public TV.

Source: publictv.in

Source link