ತಾನು ಭಾರತೀಯ ಸೇನೆ ಸೇರಬೇಕು, ಭಾರತಾಂಬೆಯ ಸೇವೆ ಮಾಡ್ಬೇಕು ಅನ್ನೋದು ಬಿಪಿನ್ ಸಿಂಗ್ ರಾವತ್ ರಕ್ತದಲ್ಲಿಯೇ ಬಂದಿತ್ತು. ಯಾಕಂದ್ರೆ, ಭಾರತೀಯ ಸೇನೆಗೂ ಬಿಪಿನ್ ಕುಟುಂಬಕ್ಕೂ ತಲೆತಲಾಂತರದ ಸಂಬಂಧವಿದೆ. ಬಿಪಿನ್ರವರ ಇಡೀ ಕುಟುಂಬವೇ ತಮ್ಮನ್ನ ತಾವು ದೇಶಸೇವೆಗೆ ಮುಡಿಪಾಗಿಟ್ಟಿತ್ತು. ಬಿಪಿನ್ ರಾವತ್ ದೇಶಸೇವೆಯ ಕಥೆಯನ್ನ ಹೇಳ್ತೀವಿ ಈ ರಿಪೋರ್ಟ್ನಲ್ಲಿ .
ದೇಶದ ಇತಿಹಾಸದಲ್ಲಿ ಯಾರೂ ನಿರೀಕ್ಷೆ ಮಾಡಲಾಗದಂತಹ ದುರಂತ ನಡೆದುಹೋಗಿದೆ. ತಮಿಳುನಾಡಿನ ಕೂನೂರ್ ಬಳಿ ಸೇನಾ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಧಗಧಗಿಸಿದೆ. ಹೆಲಿಕಾಪ್ಟರ್ನಲ್ಲಿದ್ದ 14 ಮಂದಿಯಲ್ಲಿ 13 ಮಂದಿಯ ಸಾವು ದೃಢವಾಗಿದೆ. ಇದೇ ಹೆಲಿಕಾಪ್ಟರ್ನಲ್ಲಿ ಭಾರತದ ಮೂರು ಸೇನಾಪಡೆಯ ಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ ಮತ್ತವರ ಪತ್ನಿಯೂ ಇದ್ದರು. ದುರದೃಷ್ಟವಶಾತ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಕೂಡ ಅಪಘಾತದಲ್ಲಿ ಮೃತರಾಗಿದ್ದಾರೆ. ಇಂದು ನಮ್ಮೊಂದಿಗೆ ರಾವತ್ ಇಲ್ಲ. ಆದ್ರೆ, ಭಾರತೀಯ ಸೇನೆಗೂ, ರಾವತ್ ಕುಟುಂಬಕ್ಕೂ ಇರೋ ತಲೆತಲಾಂತರದ ನಂಟನ್ನು, ಸೇನೆಯಲ್ಲಿ ರಾವತ್ ನಡೆದು ಬಂದ ಹಾದಿ ಮರೆಯಲಾಗದು.
ಮೂರೂ ಸೇನೆಯ ಮುಖ್ಯಸ್ಥ ಸೇರಿದಂತೆ ಸೇನೆಯಲ್ಲಿ ಅನೇಕ ಹುದ್ದೆಯನ್ನು ಬಿಪಿನ್ ಸಿಂಗ್ ರಾವತ್ ನಿರ್ವಹಿಸಿದ್ದರು. ಖಡಕ್ ಸೇನಾಧಿಕಾರಿಯಾಗಿದ್ದ ಬಿಪಿನ್ ಭಾರತೀಯ ಸೇನೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದು ಮಹತ್ವದ ಕಾಣಿಕೆಗಳನ್ನ ನೀಡಿದ್ದರು. ಅದರಲ್ಲಿಯೂ ಚೀನಾಗಡಿಯಲ್ಲಿ ಚೀನಿ ಸೈನಿಕರ ಉಪಟಳಕ್ಕೆ ಬ್ರೇಕ್ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದವರು. ಇನ್ನು, ಪಾಕಿಸ್ತಾನ ಗಡಿಯಲ್ಲಿ ಉಗ್ರರ ನುಸುಳುವಿಕೆಗೆ ತಡೆ ನೀಡಿದವರು. ಉಳಿದಂತೆ ಬಾಂಗ್ಲಾ, ನೇಪಾಳ, ಭೂತಾನ್…..ಎಲ್ಲಾ ಗಡಿ ಪ್ರದೇಶದಲ್ಲಿಯೂ ಭಾರತೀಯ ಸೇನೆ ಹದ್ದಿನ ಕಣ್ಣಿಡುವಂತೆ ಮಾಡಿದವರು. ಕಾಶ್ಮೀರದಲ್ಲಿ ಕಲ್ಲು ತೂರುವವರ ಹೆಡೆಮುರಿ ಕಟ್ಟಿದವರು. ವಿವಿಧ ದೇಶಗಳ ಸೇನಾ ಮುಖ್ಯಸ್ಥರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿ ರಕ್ಷಣಾ ಒಪ್ಪಂದದಲ್ಲಿ, ಪರಸ್ಪರ ರಕ್ಷಣಾ ಸಹಕಾರದಲ್ಲಿ ನೆರವಾದವರು. ಹೀಗೆ ಬಿಪಿನ್ ಭಾರತಾಂಬೆಗೆ ನೀಡಿದ ಸೇವೆಯನ್ನು ಹೇಳುತ್ತಾ ಹೋದರೆ ದಿನವೇ ಸಾಕಾಗುವುದಿಲ್ಲ.
ಮೂಲತಃ ಉತ್ತರಖಂಡದವರು ಬಿಪಿನ್ ರಾವತ್
1978ರಲ್ಲಿ ಭಾರತೀಯ ಸೇನೆಗೆ ಸೇರಿದ ವೀರಯೋಧ
ಮೂರು ಸೇನಾ ನಾಯಕರಾಗಿದ್ದ ಬಿಪಿನ್ ಸಿಂಗ್ ರಾವತ್ ಉತ್ತರಖಂಡ ರಾಜ್ಯದವರಾಗಿದ್ದರು. 16 ಮಾರ್ಚ್ 1958ರಲ್ಲಿ ಜನಿಸಿದ ಇವ್ರು, 1978ರಲ್ಲಿ ಭಾರತೀಯ ಸೇನೆ ಸೇರಿದ್ದರು. ಖಡಕ್ ವ್ಯಕ್ತಿತ್ವದ ಬಿಪಿನ್ ಅನೇಕ ಖಡಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಕಳಂಕ ಇಲ್ಲದೇ ಕ್ಲೀನ್ ವ್ಯಕ್ತಿತ್ವ ಜೊತೆಗೆ ತ್ವರಿತ ಸಮಯದಲ್ಲಿ ಖಡಕ್ ನಿರ್ಧಾರ ಕೈಗೊಳ್ಳುತ್ತಿದ್ರು ಬಿಪಿನ್ ರಾವತ್. ಹೀಗಾಗಿಯೇ ಹಂತ ಹಂತವಾಗಿ ಉನ್ನತ ಹುದ್ದೆಗಳು ಇವರನ್ನು ಹುಡುಕಿಕೊಂಡು ಬಂದ್ವು.
ಬಿಪಿನ್ ಸಿಂಗ್ ರಾವತ್ 1978 ರಲ್ಲಿ ಭಾರತೀಯ ಸೇನೆಯನ್ನು ಸೇರ್ಪಡೆಯಾಗುತ್ತಾರೆ. 1984 ರಲ್ಲಿ ಕ್ಯಾಪ್ಟನ್ ಆಗಿ ಬಿಪಿನ್ ಬಡ್ತಿ ಪಡೆಯುತ್ತಾರೆ. 1989 ರಲ್ಲಿ ಮೇಜರ್ ಸ್ಥಾನ ಬಿಪಿನ್ಗೆ ಒಲಿದು ಬರುತ್ತದೆ. ಹಾಗೇ 2011 ರಲ್ಲಿ ಮೇಜರ್ ಜನರ್ ಆಗಿ ನೇಮಕವಾನಗಿದ್ದರು.
2017 ರವರೆಗೂ ಭಾರತೀಯ ಸೇನೆಯಲ್ಲಿ ಅನೇಕ ಹುದ್ದೆಗಳಲ್ಲಿ ಬಿಪಿನ್ ನಿರ್ವಹಿಸಿದ್ದರು. ಇವರ ಕಾರ್ಯ ವೈಖರಿ ಹಿರಿಯ ಅಧಿಕಾರಿಗಳ, ರಕ್ಷಣಾ ಸಚಿವರ ಕಣ್ಣಿಗೂ ಬೀಳುತ್ತೆ. ಹೀಗಾಗಿ ಅನಂತರ ಭಾರತೀಯ ಸೇನೆಯಲ್ಲಿ ಅತ್ಯುನ್ನತ ಹುದ್ದೆಗಳು ಬಿಪಿನ್ ಸಿಂಗ್ ರಾವತ್ ಹುಡುಕಿಕೊಂಡು ಬರುತ್ತೆ.
ಹುಡುಕಿ ಬಂದಿದ್ದ ಹುದ್ದೆಗಳು
2017ರ ನಂತರ ಭಾರತೀಯ ಸೇನೆಯಲ್ಲಿ ಬಿಪಿನ್ ಸಿಂಗ್ ಅತ್ಯುನ್ನತ ಹುದ್ದೆಗೆ ಬಡ್ತಿ ಪಡೆದಿದ್ರು. 1 ಸೆಪ್ಟೆಂಬರ್ 2016 ಕ್ಕೆ ಭೂಸೇನೆಯ ಉಪ ಮುಖ್ಯಸ್ಥರಾಗಿ ಬಡ್ತಿ ಪಡೆದಿದ್ರು. ಇನ್ನು, 31ರ ಡಿಸೆಂಬರ್ 2016ರಂದು ಭಾರತೀಯ ಭೂಸೇನೆಯ ಮುಖ್ಯಸ್ಥರಾಗಿ ಬಿಪಿನ್ ಭೂಸೇನೆಯ 27ನೇ ಮುಖ್ಯಸ್ಥರ ಹುದ್ದೆಯಲ್ಲಿ ಬಿಪಿನ್ ಸಿಂಗ್ ರಾವತ್ ಕಾರ್ಯನಿರ್ವಹಿಸುತ್ತಾರೆ. ಅನಂತರ 1 ಜನವರಿ 2020ಕ್ಕೆ ಮೂರು ಸೇನೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು. ಹಾಗೇ ಮಿಲಿಟರಿ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ಸೇವೆಸಲ್ಲಿಸಿದ್ರು..
ಇನ್ನು, ಬಿಪಿನ್ ರಾವತ್ ಅಧಿಕಾರದಲ್ಲಿದ್ದಾಗ ಹಲವಾರು ರೋಚಕ ಮಿಲಿಟರಿ ಕಾರ್ಯಾಚರಣೆಯಲ್ಲೂ ಭಾಗಿಯಾಗಿದ್ದರು..
ಬಿಪಿನ್ ರಣವಿಕ್ರಮ.. ಮಯನ್ಮಾರ್ ಕಾರ್ಯಾಚರಣೆ
ಜೂನ್ 2015ರಲ್ಲಿ ಈಶಾನ್ಯ ಭಾರತದಲ್ಲಿ ಉಗ್ರರ ಉಪಟಳ ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದ ಬಿಪಿನ್ ರಾವತ್, ಗಡಿ ನುಸುಳುವಿಕೆಯನ್ನ ಯಶಸ್ವಿಯಾಗಿ ತಡೆಗಟ್ಟುವಲ್ಲಿ ಮಹತ್ವದ ಕಾರ್ಯಚರಣೆಯ ಮುಂದಾಳತ್ವ ವಹಿಸಿದ್ದರು. ರಾವತ್ ಮೇಲುಸ್ತುವಾರಿಯಲ್ಲಿ ಮಯನ್ಮಾರ್ ಗಡಿಯೊಳಗೆ ನುಗ್ಗಿ ಆಪರೇಷನ್ ನಡೆಸಲಾಗಿತ್ತು. ಭಾರತದ 70 ಕಮಾಂಡೋಗಳು ಕೇವಲ 40 ನಿಮಿಷದಲ್ಲಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದರು.
ಬಿಪಿನ್ ರಣವಿಕ್ರಮ.. ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್
2016ರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಬಗ್ಗೆ ಪ್ಲಾನ್ ಮಾಡಿದ್ದೇ ಬಿಪಿನ್ ರಾವತ್ ಎಂಬ ಮಾತಿದೆ. ಸೌತ್ ಬ್ಲಾಕ್ ಮೂಲಕವೇ ಇಡೀ ಕಾರ್ಯಾಚರಣೆಯ ರೂಪುರೇಷೆ ರಚಿಸಿದ್ದರಂತೆ ರಾವತ್. ಜೊತೆಗೆ ಫೆಬ್ರವರಿ 2019ರಲ್ಲಿ ಪಾಕಿಸ್ತಾನ ಗಡಿಯೊಳಗೆ ನುಗ್ಗಿ ಅಲ್ಲಿ ಸರ್ಜಿಕಲ್ ಸ್ಟ್ರೈಕ್ ಯಶಸ್ವಿಯಾಗುವಂತೆ ಮಾಡಿದ್ದರು. ಇನ್ನು, ಬಿಪಿನ್ ರಾವತ್, ಸೇನಾ ಮುಖ್ಯಸ್ಥರಾದ ಬಳಿಕ ಉಗ್ರರ ಉಪಟಳಕ್ಕೆ ನಿಯಂತ್ರಣ ತರುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದರು.ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆಗಳಿಗೆ ಮದ್ದು ಅರೆದಿದ್ದರು.
ಬಿಪಿನ್ ರಣವಿಕ್ರಮ.. ಚೀನಾ ಕಿರಿಕ್ಗೆ ತಕ್ಕ ಉತ್ತರ
ಇನ್ನು, 2 ತಿಂಗಳು ಕಾಲ ಚೀನಾದೊಂದಿಗೆ ನಡೆದ ಗಡಿ ಘರ್ಷಣೆ ಶಮನವಾಗುವಲ್ಲಿ ರಾವತ್ ಪಾತ್ರ ದೊಡ್ಡದಿದೆ. 2017ರಲ್ಲಿ ಡೋಕ್ಲಾಮ್ನಲ್ಲಿ ಉಂಟಾಗಿದ್ದ ಪ್ರಕ್ಷುಬ್ಧತೆ ಕಡಿಮೆ ಮಾಡಿದ್ದರು ಬಿಪಿನ್ ರಾವತ್. ಕಮಾಂಡರ್ಗಳ ಮಟ್ಟದ ಸಭೆಗಳ ಮೂಲಕ ಉದ್ವಿಘ್ನತೆ ಕಡಿಮೆ ಮಾಡಿದ್ದರೆಂಬ ಹೆಗ್ಗಳಿಕೆ ಬಿಪಿನ್ ರಾವತ್ಗಿದೆ.
ಉನ್ನತ ಹುದ್ದೆಯಲ್ಲಿದ್ದಾಗ ಅಮೆರಿಕಾ, ರಷ್ಯಾ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳ ಆರ್ಮಿ ಮುಖ್ಯಸ್ಥರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು ಬಿಪಿನ್ ರಾವತ್. ಹಾಗೇ ಚೀನಾ ಗಡಿಯಲ್ಲಿ ಚೀನಿ ಸೈನಿಕರ ಉಪಟಳ ತಡೆಯುವಲ್ಲಿಯೂ ಯಶಸ್ವಿಯಾಗಿದ್ದರು. ಪಾಕಿಸ್ತಾನ ಗಡಿಯಲ್ಲಿ ಉಗ್ರರ ನುಸುಳುವಿಕೆಗೆ ಬ್ರೇಕ್ ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಭಾರತಾಂಬೆಗೆ ಇಷ್ಟೊಂದು ಸೇವೆ ಸಲ್ಲಿಸಿರೋ ಬಿಪಿನ್ ಸಿಂಗ್ ರಾವತ್ ಕುಟುಂಬಸ್ಥರೂ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ.
ಬಿಪಿನ್ ತಂದೆ ಕೂಡ ಆರ್ಮಿ ಆಫೀಸರ್ ಆಗಿದ್ದರು
ಬಿಪಿನ್ ಚಿಕ್ಕಪ್ಪ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು
ಹೌದು.. ಬಿಪಿನ್ ಸಿಂಗ್ ರಾವತ್ ಕುಟುಂಬಕ್ಕೂ ಭಾರತೀಯ ಸೇನೆಗೂ ತಲೆ ತಲೆತಲಾಂತರದ ಸಂಬಂಧ ಇದೆ ಅಂದಿರೋದು ಇದಕ್ಕೆ ನೋಡಿ. ರಾವತ್ ಕುಟುಂಬದಿಂದ ಭಾರತೀಯ ಸೇನೆ ಸೇರಿದವರಲ್ಲಿ ಬಿಪಿನ್ ಮೂರನೇ ಜನರೇಷನ್. ಅದಕ್ಕೂ ಮುನ್ನ ಬಿಪಿನ್ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಕೂಡ ಸೇನೆಯಲ್ಲಿ ವಿವಿಧ ಹುದ್ದೆ ನಿರ್ವಹಿಸಿ ನಿವೃತ್ತರಾಗಿದ್ರು. ಹಾಗೇ ಬಿಪಿನ್ ಚಿಕ್ಕಪ್ಪ ಮತ್ತು ಬಿಪಿನ್ ತಂದೆಯ ಚಿಕ್ಕಪ್ಪ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ರು.
ಬಿಪಿನ್ ರಾವತ್ ಸೇನಾ ಕುಟುಂಬದ ಕುಡಿಯಾಗಿದ್ರು. ದಕ್ಷ ಅಧಿಕಾರಿಯಾಗಿ ಭಾರತಾಂಬೆಗೆ ತಮ್ಮದೇ ಆದಂತಹ ಕೊಡೆಗೆಯನ್ನು ನೀಡಿದವರು. ಬಿಪಿನ್ ಸೇವೆಯನ್ನು ದೇಶ ಯಾವತ್ತೂ ಮರೆಯದು.
The post ಸಾಧನೆಗಳ ಸರದಾರ-ಕೆಚ್ಚೆದೆಯ ವೀರ ಬಿಪಿನ್ ರಾವತ್ ಸಾಧನೆ ಎಂಥದ್ದು ಗೊತ್ತಾ? appeared first on News First Kannada.