ಬೆಳಗಾವಿ: ರೈತನ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ವಿಚಾರ ಸಂಬಂಧ ಸಚಿವ ಉಮೇಶ್ ಕತ್ತಿ ಇದೀಗ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಯಾರು ಈಶ್ವರ ನನಗೆ ಗೊತ್ತಿಲ್ಲ. ಕಾಳಸಂತೆಯಲ್ಲಿ ಅಕ್ಕಿ ದಂಧೆ ಮಾಡ್ತಿದ್ದಾರೆ ಅದನ್ನು ನಾನು ಕೇಳಿದ್ದೆ. ಅಕ್ಕಿ ಕಡಿತ ಮಾಡಿದ್ದಾರೆ ಸಾಯಬೇಕೋ ಅಂತಾ ಕೇಳಿದ, ಸತ್ತು ಹೋಗಪ್ಪಾ ಅಂದೆ ಎಂದು ಹೇಳಿದರು.

ಅವನು ಸಾಯ್ತೀನಿ ಅಂದ್ರೆ ನಾನೇನು ಉತ್ತರ ಕೊಡಲಿ ಅಂದ್ರು. ಈ ವೇಳೆ ಮಾಧ್ಯಮದವರು, ನೀನು ಸಾಯಬೇಡ ಅಂತ ಸಮಾಧಾನ ಹೇಳಿ ಧೈರ್ಯ ತುಂಬಬೇಕು ಅಂದಾಗ, ಅಷ್ಟು ದೊಡ್ಡ ಮನುಷ್ಯ ಅಲ್ಲ ಎಂದು ಸಚಿವರು ತಿಳಿಸಿದರು.

ಏಪ್ರಿಲ್ ತಿಂಗಳಲ್ಲಿ ಬಂದಿದೆ ಮೇ ತಿಂಗಳಲ್ಲಿ ನೋಡೋಣ ಅಂತ ಹೇಳಿದ್ದೇನೆ. ಆರೂವರೆ ಕೋಟಿ ಜನರಿಗೆ ಉತ್ತರ ಕೊಡುತ್ತಾ ಎಲ್ಲಿ ಹೋಗಲಿ ನಾನು? ಸತ್ತು ಹೋಗ್ಲಾ ಅಂತ ಕೇಳಿದ್ರೆ ನಾನೇನು ಉತ್ತರಿಸಲಿ ಹೇಳಿ? ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಮೇ ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಪಡಿತರ ವಿತರಣೆ ಮಾಡುತ್ತೆ ಎಂದು ಸಚಿವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

ಆಗಿದ್ದೇನು..?
ರೈತ ಸಂಘ ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯರ ಅವರು ಕತ್ತಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಈಶ್ವರ ಅವರು ಪಡಿತರ ಅಕ್ಕಿ ಕಡಿತಗೊಳಿಸಿರುವುದರ ಸಂಬಂಧ ಸಚಿವರನ್ನು ಪ್ರಶ್ನಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ ಕೊಡ್ತೀವಿ. ಲಾಕ್‍ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಕತ್ತಿ ಉತ್ತರಿಸಿದ್ದಾರೆ.

ಈ ವೇಳೆ ಮಾತು ಮುಂದುವರಿಸಿದ ಈಶ್ವರ, ಲಾಕ್‍ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಮರುಪ್ರಶ್ನೆ ಹಾಕಿದ್ದಾರೆ. ಆಗ ಸಚಿವರು, ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಉಡಾಫೆಯ ಮಾತಾಡಿದ್ದಾರೆ. ಅಲ್ಲದೆ ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ.

The post ಸಾಯ್ಬೇಕಾ ಅಂತ ಕೇಳಿದಾಗ ಸತ್ತು ಹೋಗಪ್ಪಾ ಅಂದೆ: ಕತ್ತಿ ಸಮರ್ಥನೆ appeared first on Public TV.

Source: publictv.in

Source link