ವಿಶ್ವ ಆರೋಗ್ಯ ಸಂಸ್ಥೆ ಒಂದು ಬೆಚ್ಚಿಬೀಳಿಸುವ ಅಭಿಪ್ರಾಯ ವ್ಯಕ್ತಪಡಿಸಿದೆ. ಈವರೆಗೆ ಅಂದುಕೊಂಡಿದ್ದೇ ಬೇರೆ ,ಆದ್ರೆ ನಡೆದಿರೋದೇ ಬೇರೆ ಅನ್ನೋ ರೀತಿಯ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಇದು ನಿಜಕ್ಕೂ ಮನುಕುಲಕ್ಕೆ ಆತಂಕ ತರುವಂತಹ ವಿಚಾರ.

ಅವತ್ತು ಚೀನಾದ ವುಹಾನ್ ನಿಂದ ವಿಶ್ವದೆಲ್ಲೆಡೆ ಹರಡಿದ ಕೊರೊನಾ ವೈರಸ್ ಜಗತ್ತಿನಲ್ಲಿ ಅದೆಷ್ಟು ಜನರನ್ನು ಬಲಿ ತೆಗೆದುಕೊಂಡಿದೆ ಎಂಬ ಸತ್ಯಾಂಶ ತಿಳಿದುಬಿಟ್ರೆ ನಿಜಕ್ಕೂ ಭಯವಾಗುತ್ತೆ. ಇಡೀ ಮನುಕುಲವನ್ನೇ ಚಿಂತೆಗೀಡು ಮಾಡುತ್ತೆ. ಇಷ್ಟೊಂದು ಸಾವು ಸಂಭವಿಸಿದ್ಯಾ ಅಂತ ಹೆದರುವಂತಾಗುತ್ತೆ. ಆದ್ರೆ ಪರಿಸ್ಥಿತಿ ಭಿನ್ನವಾಗಿಲ್ಲ. ಮೊದಲ ಅಲೆ ಬಂದಾಗಲೇ ಲಕ್ಷ ಲಕ್ಷ ಜನ ಕೊರೊನಾಗೆ ಬಲಿಯಾಗಿ ಹೋಗಿದ್ದಾರೆ. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಸಾವಿರಗಟ್ಟಲೇ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಅಭಿಪ್ರಾಯ ವ್ಯಕ್ತಪಡಿಸ್ತಾ ಇದೆ. ಈ ಅಭಿಪ್ರಾಯ, ಅನುಮಾನ ನಿಜವೇ ಆಗಿದ್ದರೆ ನಿಜಕ್ಕೂ ದುರಂತವೇ ಸರಿ.

ಹಿಂದೆಯೂ ಜಗತ್ತಿನಲ್ಲಿ ಹಲವು ಸಾಂಕ್ರಾಮಿಕಗಳು ಕಾಡಿದ ಉದಾಹರಣೆಗಳಿದ್ದಾವೆ. ಆದ್ರೆ ಈ ಪ್ರಮಾಣದಲ್ಲಿ ಹಾನಿ ಮಾಡಿರಲಿಲ್ಲವೇನೋ. ಕಾರಣ ಅವತ್ತು ಇಷ್ಟೊಂದು ಜನಸಂಖ್ಯೆಯೂ ಇರಲಿಲ್ಲ. ಜನ ಸಂಚಾರವೂ ಇರಲಿಲ್ಲ. ದೇಶ-ವಿದೇಶಗಳಿಗೆ ದಿನ ಬೆಳಗಾಗೋದ್ರೊಳಗೆ ಸೋಂಕು ಕೂಡ ಹರಡ್ತಾ ಇರಲಿಲ್ಲ. ಆದ್ರೆ ಈ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಎಷ್ಟು ಮುಂದುವರೆದಿದೆಯೋ ಅಷ್ಟೇ ವೇಗದಲ್ಲಿ ಕೊರೊನಾ ಸೋಂಕು ಕೂಡ ಹರಡಿಬಿಟ್ಟಿದೆ. ಸಾಂಕ್ರಾಮಿಕ ಶುರುವಾದ ಮೇಲೆ ದೇಶ-ದೇಶಗಳ ನಡುವಿನ ವಿಮಾನ ಸಂಚಾರ ಬಂದ್ ಮಾಡಲಾಗಿತ್ತು. ಹಡಗುಗಳು ಬಂದು ಹೋಗೋದನ್ನು ನಿರ್ಬಂಧಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಕೊರೊನಾ ಎಲ್ಲಿಲ್ಲಿಗೆ ತಲುಪಿಕೊಳ್ಳಬೇಕೋ ಅಲ್ಲಿಗೆ ತಲುಪಿಬಿಟ್ಟಿತ್ತು. ಹೀಗಾಗಿ ಜಗತ್ತಿನ 200ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ಹರಡಿತ್ತು.

ವಿಶ್ವದಲ್ಲಿ ಈವರೆಗೆ 16 ಕೋಟಿ ಜನರಿಗೆ ಕೊರೊನಾ ಸೋಂಕು
ಹಲವು ದೇಶಗಳು ಲೆಕ್ಕವನ್ನೇ ಕೊಡುತ್ತಿಲ್ಲ, ಸತ್ಯವೂ ಗೊತ್ತಿಲ್ಲ

ಈವರೆಗೆ 16 ಕೋಟಿಯ 70 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದು ಅಧಿಕೃತವಾದ ಲೆಕ್ಕ. ಆದ್ರೆ ಈ ಲೆಕ್ಕದಲ್ಲಿ ಹಲವು ದೇಶಗಳ ಅಂಕಿ ಅಂಶ ಸೇರಿಲ್ಲ. ಕಾರಣ ಕೆಲವು ದೇಶಗಳು ಅಂಕಿ-ಅಂಶಗಳನ್ನು ಬಹಿರಂಗಪಡಿಸುತ್ತಲೇ ಇಲ್ಲ. ಕೊಟ್ಟರು ಅನುಮಾನ ಬರುವ ರೀತಿಯಲ್ಲಿ ಲೆಕ್ಕ ಕೊಡ್ತಾ ಇವೆ. ಮೊದಲು ಅಂಕಿ-ಅಂಶ ಬಹಿರಂಗಪಡಿಸ್ತಾ ಇದ್ದ ಚೀನಾ, ಈಗ ಯಾವ ಅಂಕಿ ಅಂಶವೂ ಹೊರ ಜಗತ್ತಿಗೆ ಗೊತ್ತಾಗದಂತೆ ನೋಡಿಕೊಂಡಿದೆ. ಚೀನಾದಲ್ಲಿ ಅಧ್ಯಕ್ಷ ಶೀ ಜಿನ್​​ಪಿಂಗ್ ಅದೇನು ಆಜ್ಞೆ ಮಾಡಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಹೊರ ಜಗತ್ತಿಗೆ ಚೀನಾ ಪರಿಸ್ಥಿತಿಯ ಸ್ಪಷ್ಟ ಚಿತ್ರಣವೇ ಸಿಗುತ್ತಿಲ್ಲ. ಇನ್ನು ಉತ್ತರ ಕೊರಿಯಾದ ಕಿಮ್ ಉನ್ ಜಾಂಗ್ ಕೂಡ ತಮ್ಮ ದೇಶದಲ್ಲಿ ಕೊರೊನಾನೇ ಇಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಕಳುಹಿಸಿಕೊಟ್ಟು ಬಿಟ್ಟಿದ್ದಾರೆ. ಹೀಗಿರುವಾಗ ಅದೆಷ್ಟು ದೇಶಗಳು ಹೀಗೆಯೇ ಅಂಕಿ -ಅಂಶ ಮುಚ್ಚಿಟ್ಟಿವೆಯೋ ಗೊತ್ತಾಗುತ್ತಿಲ್ಲ. ಹೀಗಾಗಿ ಅಧಿಕೃತವಾಗಿ ಸಿಕ್ಕಿರುವ ಲೆಕ್ಕದ ಪ್ರಕಾರ ಈವರೆಗೆ ವಿಶ್ವದಲ್ಲಿ 16 ಕೋಟಿ ಜನರಿಗೆ ಮಾತ್ರ ಕೊರೊನಾ ಸೋಂಕು ತಗಲಿದೆ. ಆದ್ರೆ ಪಕ್ಕಾ ಲೆಕ್ಕ ಇದಲ್ಲ.

ಕೊರೊನಾದಿಂದ ಈವರೆಗೆ ಸಾವನ್ನಪಿದವರ ಸಂಖ್ಯೆ 34 ಲಕ್ಷ
16 ಕೋಟಿ ಸೋಂಕಿತರಲ್ಲಿ 14 ಕೋಟಿಗೂ ಹೆಚ್ಚು ಜನ ಗುಣಮುಖ

ಈವರೆಗೆ ವಿಶ್ವದಲ್ಲಿ ಬರೋಬ್ಬರಿ 16 ಕೋಟಿ ಜನ ಕೊರೊನಾ ಸೋಂಕಿತರಾಗಿದ್ದಾರೆ. ಇವರಲ್ಲಿ ಗುಣಮುಖರಾದವರು 14 ಕೋಟಿ 79 ಲಕ್ಷ ಜನ. ಇನ್ನು ಮೃತಪಟ್ಟವರ ಸಂಖ್ಯೆ 34 ಲಕ್ಷ 46 ಸಾವಿರದ 818. ಉಳಿದವರು ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದು ಅಧಿಕೃತವಾಗಿ ಬಹಿರಂಗವಾಗಿರುವ ಅಂಕಿ ಅಂಶ. ಆದ್ರೆ ವಾಸ್ತವ ಪರಿಸ್ಥಿತಿ ಹೀಗಿದ್ಯಾ ಅಂತ ಕೇಳಿದ್ರೆ ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಾರೆಯೇ ವಿನಃ ಪೂರ್ಣವಾಗಿ ನಂಬೋದಿಲ್ಲ. ಕಾರಣ ಈ ಕೊರೊನಾ 200ಕ್ಕೂ ಹೆಚ್ಚು ದೇಶಗಲ್ಲಿ ಅದೆಷ್ಟರ ಮಟ್ಟಿಗೆ ಅಬ್ಬರಿಸಿತ್ತು ಅಂದ್ರೆ ಮುಂದುವರೆದ ದೇಶಗಳೇ ತತ್ತರಿಸಿ ಹೋಗಿದ್ದವು.

ಅಮೆರಿಕಾ, ಯುರೋಪಿನ ರಾಷ್ಟ್ರಗಳೆಲ್ಲವೂ ಕೊರೊನಾದಿಂದ ಸಿಕ್ಕಾಪಟ್ಟೆ ಹಾನಿ ಅನುಭವಿಸಿದ್ದವು. ಅಷ್ಟೇ ಅಲ್ಲ ಭಾರತವೂ ಸೇರಿದಂತೆ ಪೂರ್ವ-ಪಶ್ಚಿಮ ರಾಷ್ಟ್ರಗಳೆಲ್ಲವೂ ಇದರಿಂದ ಹೊರತಾಗಿರಲಿಲ್ಲ. ಆದರೆ ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 34 ಲಕ್ಷ ಅಂತ ಅಂಕಿ ಅಂಶ ಕೊಡಲಾಗಿದೆ. ಆದ್ರೆ ಇದು ಸತ್ಯಾನಾ ಅಂತ ಕೇಳಿದ್ರೆ ಹೌದು ಅಂತ ಖಚಿತವಾಗಿ ಹೇಳಲಾಗುವುದಿಲ್ಲ. ಕಾರಣ ಅನೇಕ ದೇಶಗಳು ಸಾವನ್ನಪ್ಪಿದವರ ಲೆಕ್ಕ ಮುಚ್ಚಿಟ್ಟಿವೆ ಅಂತಾ ಹೇಳಲಾಗ್ತಿದೆ. ಕೊರೊನಾ ಸೋಂಕೇ ಇಲ್ಲ ಅಂತ ಹೇಳುವ ದೇಶಗಳು ಇನ್ನು ಜನರ ಸಾವನ್ನು ಒಪ್ಪಲು ಸಾಧ್ಯವೇ. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯೇ ಇನ್ನೊಂದು ಅನುಮಾನ ವ್ಯಕ್ತಪಡಿಸಿದೆ.

ನೈಜ ಸಾವಿನ ಸಂಖ್ಯೆ ಈಗಿರುವದಕ್ಕಿಂತ ಮೂರು ಪಟ್ಟು ಹೆಚ್ಚು?
ಅನೇಕ ದೇಶಗಳಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಿರುವ ಸಾಧ್ಯತೆ

ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗ ಕೊಟ್ಟಿರುವ ಅಂಕಿ ಅಂಶಕ್ಕಿಂತ ಮಿಗಿಲಾದುದು ಅಂತ ಬೇರಾರೂ ಅಲ್ಲ, ವಿಶ್ವ ಆರೋಗ್ಯ ಸಂಸ್ಥೆಯೇ ಸಂದೇಹ ವ್ಯಕ್ತಪಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಎಲ್ಲಾ ದೇಶಗಳ ಮಾಹಿತಿ ಸಹಜವಾಗಿ ಇದ್ದೇ ಇರುತ್ತೆ. ಹೀಗಾಗಿ ಅಧಿಕೃತ ಮಾಹಿತಿ ಮಾತ್ರವಲ್ಲದೇ ಬೇರೆ ಬೇರೆ ಮೂಲಗಳಿಂದಲೂ ಇಲ್ಲಿಗೆ ವರದಿಗಳು ಬರ್ತಾನೇ ಇರ್ತವೆ. ಈ ವರದಿಗಳನ್ನೆಲ್ಲ ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆ ಈ ಸಂದೇಹ ಹೊರಹಾಕಿದೆ. ಬಹುಶಃ ವಿಶ್ವ ಆರೋಗ್ಯ ಸಂಸ್ಥೆ ಸಂದೇಹ ನಿಜ ಅಂತ ಮುಂದಿನ ದಿನಗಳಲ್ಲೂ ಅಧಿಕೃತವಾಗಿಯೇ ಪ್ರಕಟವಾಗಬಹುದು. ಇನ್ನು ಅನೇಕ ದೇಶಗಳಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಿರುವ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ. ವರದಿಯಾಗುವ ಪ್ರಕರಣಗಳೇ 16 ಕೋಟಿ ದಾಟಿದ್ದರೇ ಇನ್ನೂ ವರದಿಯಾಗದ ಪ್ರಕರಣಗಳು ಅದೆಷ್ಟು ಕೋಟಿ ಇದ್ದಾವೋ ಗೊತ್ತಾಗುತ್ತಿಲ್ಲ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಈ ಸಾಂಕ್ರಾಮಿಕ ಹೇಗೆ ಕಂಟ್ರೋಲ್ ಆಗುತ್ತೆ ಅಂತಾನೂ ಕಳವಳ ವ್ಯಕ್ತಪಡಿಸ್ತಾ ಇದೆ.

ಸಾಂದರ್ಭಿಕ ಚಿತ್ರ

ಅಧಿಕೃತ ಅಂಕಿ ಅಂಶಗಳ ಪ್ರಕಾರವೇ 34 ಲಕ್ಷ ಜನರ ಸಾವು
ಮೂರು ಪಟ್ಟು ಹೆಚ್ಚಿರಬಹುದು ಅಂದ್ರೆ 1 ಕೋಟಿ ಮೀರಿದ್ಯಾ?
ಕೊರೊನಾ ಸೋಂಕಿನಿಂದ ಕೋಟಿಗೂ ಹೆಚ್ಚು ಜನ ಮೃತರಾದ್ರಾ?

ಕೊರೊನಾ ವೈರಸ್ ಸೋಂಕಿನಿಂದಾಗಿ ಈವರೆಗೆ 34 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಅಂತ ಅಧಿಕೃತ ಅಂಕಿ ಅಂಶಗಳಿಂದ ಗೊತ್ತಾಗುತ್ತೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಹೇಳ್ತಾ ಇರೋದು ಇದಕ್ಕಿಂತ ಮೂರು ಪಟ್ಟು ಹೆಚ್ಚು ಸಾವಾಗಿರಬಹುದು ಅಂತಾ. ಹಾಗಿದ್ದರೆ 34 ಲಕ್ಷದ ಮೂರು ಪಟ್ಟು ಅಂದ್ರೆ 1 ಕೋಟಿ ಮೀರುತ್ತದೆ. ಹಾಗಿದ್ದರೆ, ಕೊರೊನಾ ಸೋಂಕಿನಿಂದಾಗಿ ಈವರೆಗೆ ವಿಶ್ವದಲ್ಲಿ 1 ಕೋಟಿ ಜನರಿಗೂ ಹೆಚ್ಚು ಸಾವು ಆಗಿ ಹೋಗಿದ್ಯಾ ಅಂತ ಆತಂಕಪಡುವಂತಾಗಿದೆ. ಕೊರೊನಾ ಬಂದ ಮೊದಲ ವರ್ಷವೇ ಅಂದ್ರೆ 2020ರಲ್ಲೇ 18 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಅಂತ ಅಧಿಕೃತ ವರದಿಗಳು ಹೇಳ್ತಾ ಇವೆ. ಆದ್ರೆ ಇದು 30 ಲಕ್ಷಕ್ಕಿಂತ ಹೆಚ್ಚಿರಬಹುದು ಅಂತ ಅಂದಾಜು ಮಾಡಲಾಗ್ತಿದೆ. ಆದರೆ 2021ರ ಇಲ್ಲಿಯವರೆಗೆ 34 ಲಕ್ಷ ಜನ ಸಾವನ್ನಪ್ಪಿದ್ದಾರೆ ಅಂತ ಅಧಿಕೃತ ಅಂಕಿ ಅಂಶಗಳೇ ಹೇಳ್ತಿದೆ. ಆದ್ರೆ ಇದಕ್ಕಿಂತ ಮೂರು ಪಟ್ಟು ಅಂದ್ರೆ ಅದು ಸಹಜವಾಗಿ ಕೋಟಿ ಮೀರಿರುತ್ತದೆ.

1 ಕೋಟಿ ಮೀರಿರಬಹುದು

2021ರ ಮೇ ವರೆಗೆ ವಿಶ್ವದಾದ್ಯಂತ 34 ಲಕ್ಷ ಜನ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಆದರೆ, ನೈಜ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೊರೊನಾಗೆ ಬಲಿಯಾದವರ ಲೆಕ್ಕ ಸಿಗುತ್ತಿಲ್ಲ. ನೈಜ ಸಾವಿನ ಸಂಖ್ಯೆ ಈಗ ಗೊತ್ತಾಗಿರುವುದಕ್ಕಿಂತ 2ರಿಂದ 3 ಪಟ್ಟು ಹೆಚ್ಚಿರುತ್ತದೆ.
– ಸಮೀರಾ ಆಸ್ಮಾ, ಸಹಾಯ ಮಹಾನಿರ್ದೇಶಕರು, ವಿಶ್ವ ಆರೋಗ್ಯ ಸಂಸ್ಥೆ

ಇವರ ಹೇಳಿಕೆಯನ್ನೇ ತೆಗೆದುಕೊಂಡರೆ ವಿಶ್ವ ಆರೋಗ್ಯ ಸಂಸ್ಥೆಯೇ ಸಂದೇಹ ವ್ಯಕ್ತಪಡಿಸ್ತಾ ಇರೋದು ದೃಢಪಟ್ಟಿದೆ. ಬಹುಶಃ ಪಕ್ಕಾ ಲೆಕ್ಕ ಸಿಗುವುದು ಇನ್ನಷ್ಟು ದಿನಗಳು ವಿಳಂಬ ಆಗಬಹುದು. ಆದ್ರೆ ಅಂತಿಮವಾಗಿ ಇದನ್ನು ಮುಚ್ಚಿಡಲಂತೂ ಸಾಧ್ಯವೇ ಇಲ್ಲ. ಯಾವತ್ತಿದ್ದರೂ ಇದು ಹೊರಬರಲೇಬೇಕು. ಆದ್ರೆ ಅನೇಕ ದೇಶಗಳು ಸೋಂಕಿತರು ಮತ್ತು ಕೊರೊನಾದಿಂದ ಸಾವನ್ನಪ್ಪುತ್ತಿರುವವ ಅಂಕಿ-ಅಂಶಗಳನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಡ್ತಾ ಇವೆ. ಅವರವರ ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಕೆಲಸ ಮಾಡ್ತಾ ಇವೆ ಅಂತ ಹೇಳಲಾಗ್ತಾ ಇದೆ. ಕೊರೊನಾದಿಂದ ಹೆಚ್ಚು ಜನ ಮೃತರಾಗ್ತಾ ಇದಾರೆ ಅಂತ ಹೇಳಿಬಿಟ್ರೆ ಆ ದೇಶದ ವ್ಯವಸ್ಥೆಯ ಮೇಲೆ ವಿಶ್ವದಲ್ಲಿ ಬೇರೆಯದೇ ಆದ ಭಾವನೆ ಮೂಡಿ ಬಿಡುತ್ತದೆ. ಹೀಗಾಗಿ ಆ ಸಮಸ್ಯೆಯೇ ಬೇಡ ಅಂತ ಅನೇಕ ರಾಷ್ಟ್ರಗಳು ಕೊರೊನಾ ಬಗ್ಗೆ ಬಾಯಿಯನ್ನೇ ಬಿಡ್ತಾ ಇಲ್ಲ.

ಉದಾಹರಣೆಗೆ ಚೀನಾದಲ್ಲಿ ಎಲ್ಲೆಲ್ಲಿ ಏನಾಗ್ತಿದೆ ಅನ್ನೋದೇ ಗೊತ್ತಾಗ್ತಾ ಇಲ್ಲ. ಮೊದಲು ಅಂಕಿ ಅಂಶ ಬಿಡುಗಡೆ ಮಾಡ್ತಾ ಇದ್ದ ಚೀನಾ, ಈಗ ಅದನ್ನು ಸಂಪೂರ್ಣವಾಗಿ ನಿಲ್ಲಿಸಿಯೇ ಬಿಟ್ಟಿದೆ. ಇದು ಯಾರಿಗೂ ಸಿಗದಂತೆ ಕೂಡ ಚೀನಾ ನೋಡಿಕೊಂಡಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದ ಚಿತ್ರಣ ಸಿಕ್ಕಿದರೆ ಬಹುಶಃ ಒಂದಿಷ್ಟು ನೈಜ ಸಂಗತಿ ಹೊರಬೀಳಬಹುದು. ಆದ್ರೆ ಇದು ಸಾಧ್ಯವಾಗಿಬಿಡುತ್ತೆ ಅಂತ ಹೇಳೋಕೇ ಸಾಧ್ಯವಿಲ್ಲ.

ಈಗಾಗಲೇ 1 ಕೋಟಿ ಜನ ಸಾವನ್ನಪ್ಪಿಬಿಟ್ಟಿದ್ರೆ ಮುಂದೇನು ಗತಿ?
ಸೋಂಕು ಹರಡುತ್ತಲೇ ಇರುವಾಗ ಇನ್ನೂ ಹೆಚ್ಚಾಗಿಯೇ ಬಿಡುತ್ತಾ?
ಇದು ಇನ್ನೆಷ್ಟು ವರ್ಷ ಕಂಟಿನ್ಯೂ ಆಗುತ್ತೆ, ಇನ್ನೆಷ್ಟು ಜನರಿಗೆ ಕಂಟಕ?

ವಿಶ್ವದಲ್ಲಿ ಈವರೆಗೆ 16 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ ಅನ್ನೋದು ಅಧಿಕೃತ ಅಂಕಿ ಅಂಶ. ಆದ್ರೆ ಇನ್ನೂ ಸೋಂಕು ಹರಡ್ತಾನೇ ಇರೋದ್ರಿಂದ ಹಲವು ದೇಶಗಳಲ್ಲಿ ನಿತ್ಯ ಸಾವಿರಗಟ್ಟಲೇ, ಲಕ್ಷಗಟ್ಟಲೇ ಹೊಸ ಕೇಸ್ ಗಳು ದಾಖಲಾಗ್ತಾ ಇವೆ. ಹೀಗಾಗಿ ಸೋಂಕಿತರ ಸಂಖ್ಯೆ ಈ ವರ್ಷ ಅಂತ್ಯದೊಳಗಾಗಿ ಇನ್ನಷ್ಟು ಕೋಟಿ ಹೆಚ್ಚಾಗಬಹುದು. ಆಗ ಸಾವಿನ ಸಂಖ್ಯೆಯೂ ಏರಿಕೆಯಾಗಬಹುದು. ಈಗಾಗಲೇ 1 ಕೋಟಿ ಮೀರಿರಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆಯೇ ಅನುಮಾನ ವ್ಯಕ್ತಪಡಿಸಿರುವಾಗ ಇದು ಮುಂದಿನ ದಿನಗಳಲ್ಲಿ ಇನ್ನೆಷ್ಟು ಹೆಚ್ಚಬಹುದು ಅನ್ನೋ ಭೀತಿ ಕಾಡ್ತಾ ಇದೆ. ಈ ಕೊರೊನಾ ಸೋಂಕು ಮನುಕುಲಕ್ಕೆ ನಿಜಕ್ಕೂ ದೊಡ್ಡ ಹೊಡೆತವನ್ನೇ ಕೊಡ್ತಾ ಇದೆ. ಒಂದು ಕಡೆ ಸೋಂಕು, ಸಾವು. ಇನ್ನೊಂದು ಕಡೆ ಲಾಕ್ ಡೌನ್ ನಿಂದ ಜನ ಸಾಮಾನ್ಯಾರಿಗೆ ಆರ್ಥಿಕ ಸಂಕಷ್ಟ. ಬಡವರ ಬದುಕಂತೂ ದುಸ್ತರ. ಇದು ಹೀಗೇ ಒಂದೆರಡು ವರ್ಷ ಕಂಟಿನ್ಯೂ ಆಗಿಬಿಟ್ಟರೆ ಕೊರೊನಾದಿಂದ ಮಾತ್ರವಲ್ಲ, ಕೊರೊನಾ ಪರಿಣಾಮದಿಂದ ಆಗುವ ಆಗುವ ಅನಾಹುತಗಳು ಅದೆಷ್ಟೋ. ಒಂದು ಕಡೆ ಜೀವ ಉಳಿಸಿಕೊಳ್ಳಬೇಕು. ಮತ್ತೊಂದು ಕಡೆ ಜೀವನ ಸಾಗಿಸಬೇಕು. ಜೀವ-ಜೀವನ ಎರಡನ್ನು ಕಾಪಾಡಿಕೊಳ್ಳುವುದೇ ಮನುಕುಲದ ಮುಂದಿರುವ ದೊಡ್ಡ ಸವಾಲು.

ಕೊರೊನಾ ಎಷ್ಟು ಭಯಾನಕವಾಗಿ ಮನುಕುಲವನ್ನು ಕಾಡ್ತಾ ಇದೆ ಅಂದ್ರೆ ಅದನ್ನು ವಿವರಿಸೋಕೇ ಆಗ್ತಾ ಇಲ್ಲ. ಮನುಕುಲಕ್ಕೆ ಆಪತ್ತು ತಂದಿರುವ ಈ ಕೊರೊನಾದಿಂದ ಯಾವಾಗ ಮುಕ್ತಿ ಸಿಗುತ್ತೇ ಅನ್ನೋ ಪ್ರಶ್ನೆಗೂ ಇನ್ನೂ ನಿಖರ ಉತ್ತರ ಸಿಗ್ತಾ ಇಲ್ಲ.

 

The post ಸಾವಿನ ಸಂಖ್ಯೆ ಲೆಕ್ಕಕ್ಕೇ ಸಿಕ್ತಿಲ್ವಾ? WHO ಬಿಚ್ಚಿಟ್ಟ ಈ ಆಘಾತಕಾರಿ ಸುದ್ದಿಗೆ ಜಗತ್ತೇ ಶಾಕ್​ appeared first on News First Kannada.

Source: newsfirstlive.com

Source link