ಚಿತ್ರದುರ್ಗ: ಬ್ರೇಕ್ ಫೇಲ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು, ಲಾರಿಯಡಿ ಸಿಲುಕಿದ್ದ ಇಬ್ಬರು ಅಮಾಯಕರ ಜೀವವನ್ನು ಉಳಿಸುವ ಮೂಲಕ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಹಿರಿಯೂರು ತಾಲೂಕಿನ ಉಡುವಳ್ಳಿ ರಾಜ್ಯ ಹೆದ್ದಾರಿಯಲ್ಲಿ ಸರಕು ತುಂಬಿಕೊಂಡು ಹೋಗುತ್ತಿದ್ದ 10 ಚಕ್ರದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಲಾರಿ ಕ್ಲೀನರ್ ಹಾಗೂ ಅವರ ಸಂಬಂಧಿಯೊಬ್ಬರು ಲಾರಿಯಡಿ ಸಿಲುಕಿ ನರಳಾಡುತ್ತಿದ್ದರು. ಅದೇ ಮಾರ್ಗವಾಗಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕೊರೊನಾ ಜಾಗೃತಿ ಮೂಡಿಸಿ ವಾಪಸಾಗುತ್ತಿದ್ದ ಜಿಲ್ಲಾಧಿಕಾರಿ ಕವಿತಾ ಮನ್ನಿಕೆರಿ, ಅಪಘಾತವಾಗಿರುವುದು ಕಂಡ ತಕ್ಷಣ ಕಾರು ನಿಲ್ಲಿಸಿ ಅಪಘಾತದಲ್ಲಿ ಸಿಲುಕಿಕೊಂಡಿದ್ದವರ ನೆರವಿಗೆ ಧಾವಿಸಿದ್ದಾರೆ. ಅಲ್ಲದೆ ತಮ್ಮ ಜೊತೆಯಲ್ಲಿದ್ದ ಇನ್ನಿತರ ಅಧಿಕಾರಿಗಳು ಕೂಡಲೇ ಅಂಬುಲೆನ್ಸ್ ಗೆ ಕರೆ ಮಾಡಿ, ಲಾರಿ ಅಡಿ ಸಿಲುಕಿದ್ದ ಇಬ್ಬರನ್ನೂ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಕೇವಲ 5 ನಿಮಿಷದಲ್ಲಿ ಹೊರಗೆ ಕರೆತಂದು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ವಿಶೇಷ ಚೇತನ ಮಕ್ಕಳ ಶಾಲೆಯ ನೆರವಿಗೆ ನಿಂತ ನಟ ಸುದೀಪ್

ಹಿರಿಯೂರಿನಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ತೆರಳುತ್ತಿದ್ದ ಲಾರಿ, ಬ್ರೇಕ್ ಫೇಲ್ ಆಗಿ ಚಾಲಕನಿಂದ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಕ್ಲೀನರ್ ಹಾಗೂ ಆತನ ಸಂಬಂಧಿ ಇಬ್ಬರು ಲಾರಿಯಡಿ ಸಿಲುಕಿದ್ದನ್ನು ಕಂಡ ಚಾಲಕ ಅಲ್ಲಿಂದ ಎಸ್ಕೇಪ್ ಆಗಿದ್ದ. ಆದರೆ ಇದೇ ವೇಳೆ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿಯವರ ಸಮಯಪ್ರಜ್ಞೆಯಿಂದ. ಅಮಾಯಕರ ಜೀವ ಉಳಿದಿದೆ. ಇದನ್ನೂ ಓದಿ: ಒಂದೇ ದಿನ 210 ಮಂದಿಗೆ ಕೊರೊನಾ- ಬೆಳ್ತಂಗಡಿಯ ಕ್ರೈಸ್ತ ಆಶ್ರಮಕ್ಕೆ ವಿಎಚ್‍ಪಿ ನೆರವು

ಅಧಿಕಾರಿಗಳು ಕರೆ ಮಾಡಿದ ಐದೇ ನಿಮಿಷಕ್ಕೆ ಅಂಬುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕ್ಲೀನರ್ ಹಾಗೂ ಮತ್ತೋರ್ವನನ್ನು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಈ ಮೂಲಕ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ಕಾರ್ಯಾಚರಣೆ ಯಶಸ್ವಿಯಾಯಿತು. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಸಹಾಯ ಮಾಡಿದ್ದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ಸಾವು, ಬದುಕಿನ ಮಧ್ಯೆ ಹೋರಾಡುತ್ತಿದ್ದವರ ಜೀವ ಉಳಿಸಿ ಮಾನವೀಯತೆ ಮೆರೆದ ಚಿತ್ರದುರ್ಗದ ಡಿಸಿ appeared first on Public TV.

Source: publictv.in

Source link