ಬೆಂಗಳೂರು: ಕನ್ನಡದ ಹಿರಿಯ ಬರಹಗಾರ, ಕವಿ, ಪ್ರೊ.ವಸಂತ ಕುಷ್ಟಗಿ ಅವರ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಪುಸ್ತಕಲೋಕಕ್ಕೆ ತಮ್ಮ ಅನನ್ಯ ಕಾವ್ಯ ಪ್ರತಿಭೆಯಿಂದ ಮಹತ್ವದ ಕೊಡುಗೆ ಕೊಟ್ಟ ಲೇಖಕರಲ್ಲಿ ಪ್ರೊಫೆಸರ್ ವಸಂತ ಕುಷ್ಟಗಿ ಅವರೂ ಒಬ್ಬರು. ಕಲಬುರಗಿ ಮೂಲದ ವಸಂತ ಕುಷ್ಟಗಿ, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿ ಪಡೆದ ನಂತರ ಬೀದರ್ ನ ಭೂಮಿ ರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ನಂತರ ವಿವಿಧ ಕಾಲೇಜುಗಳಲ್ಲಿ ಅನೇಕ ಹಂತದ ಹುದ್ದೆಗಳನ್ನು ನಿರ್ವಹಿಸಿ, ಪ್ರಾಂಶುಪಾಲರಾಗಿ ನಿವೃತ್ತರಾದರು. ರಮನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ನೆನೆದಿದ್ದಾರೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ ವಸಂತ ಕುಷ್ಟಗಿ ಇನ್ನಿಲ್ಲ

ಅವರ ಭಕ್ತಿ ಗೋಪುರ, ಹೊಸ ಹೆಜ್ಜೆ, ಗಾಂಧಾರಿಯ ಕರುಣೆ, ಬೆತ್ತಲೆಯ ಬಾನು, ಚಂದ್ರಲಾ, ಮಾನ್ಯಖೇಟ ಮತ್ತು ಇತ್ತೀಚೆಗಿನ ಅಪ್ ಆ್ಯಂಡ್ ಡೌನ್ ಋತುಚಕ್ರ ಮುಂತಾದ ಕೃತಿಗಳು ಬಹು ಜನಪ್ರಿಯವಾಗಿವೆ. ಪ್ರತಿಷ್ಠಿತ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಸರ್ ಎಂ.ವಿ. ಪ್ರಶಸ್ತಿ ಸೇರಿದಂತೆ ಅಸಂಖ್ಯಾತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ಸ್ಮರಿಸಿದ್ದಾರೆ.

ವಸಂತ ಕುಷ್ಟಗಿ ಅವರ ನಿಧನದಿಂದ ಕನ್ನಡ ಸಾಹಿತ್ಯಲೋಕ ಒಬ್ಬ ಅತ್ಯುತ್ತಮ ಲೇಖಕನನ್ನು ಕಳೆದುಕೊಂಡಿದೆ. ಭಗವಂತ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ನೀಡಲಿ ಎಂದು ಸಚಿವ ಅರವಿಂದ ಲಿಂಬಾವಳಿ ಶೋಕ ವ್ಯಕ್ತಪಡಿಸಿದ್ದಾರೆ.

The post ಸಾಹಿತಿ ಪ್ರೊ.ವಸಂತ ಕುಷ್ಟಗಿ ನಿಧನಕ್ಕೆ ಲಿಂಬಾವಳಿ ಸಂತಾಪ appeared first on Public TV.

Source: publictv.in

Source link