ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ ಪ್ರಕರಣ; ತನಿಖೆಗೆ ಹಾಜರಾಗಲು ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್ ಜಾರಿ | BJP MP Tejasvi Surya asked to join probe into attack on Delhi CM Arvind Kejriwal house after Kashmir Files remark


ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ ಪ್ರಕರಣ; ತನಿಖೆಗೆ ಹಾಜರಾಗಲು ಸಂಸದ ತೇಜಸ್ವಿ ಸೂರ್ಯಗೆ ನೋಟಿಸ್ ಜಾರಿ

ತೇಜಸ್ವಿ ಸೂರ್ಯ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಿವಾಸದ ಮೇಲಿನ ದಾಳಿ ಪ್ರಕರಣದ ತನಿಖೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಬಿಜೆಪಿ ಸಂಸದರ ನೇತೃತ್ವದಲ್ಲಿ ಪ್ರತಿಭಟನೆ ಸ್ಥಳಕ್ಕೆ ತಲುಪಿದ ನಂತರ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮುಂಭಾಗದ ಗೇಟ್ ಅನ್ನು ಧ್ವಂಸಗೊಳಿಸಲಾಗಿತ್ತು. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಸುಳ್ಳು ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆದಿತ್ತು. ದೆಹಲಿ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಅರವಿಂದ್ ಕೇಜ್ರಿವಾಲ್ ಕಾಶ್ಮೀರ್ ಫೈಲ್ಸ್ (Kashmir Files) ಸಿನಿಮಾದ ಪ್ರಚಾರ ಮಾಡುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇದುವರೆಗೆ ಎಂಟು ಜನರನ್ನು ಬಂಧಿಸಿದ್ದಾರೆ. ಮಾರ್ಚ್ 30 ರಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಕೇಜ್ರಿವಾಲ್ ಅವರ ನಿವಾಸದ ಮೇಲೆ ಮುತ್ತಿಗೆ ಹಾಕಿ, ಗೇಟ್ ಅನ್ನು ಧ್ವಂಸಗೊಳಿಸಿದ್ದರು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕಾರ್ಯಕರ್ತರು ಕೇಜ್ರಿವಾಲ್ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದರು.

ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ ಕುರಿತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಪಹಾಸ್ಯದ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿತ್ತು. ಅರವಿಂದ್ ಕೇಜ್ರಿವಾಲ್‌ ಬೇಷರತ್ ಕ್ಷಮೆ ಯಾಚಿಸಬೇಕೆಂದು ಯುವ ಮೋರ್ಚಾ ಒತ್ತಾಯಿಸಿತ್ತು. ಅವರು ಕ್ಷಮೆ ಕೇಳುವವರೆಗೂ ಯುವಮೋರ್ಚಾದ ಪ್ರತಿಭಟನೆ ಮುಂದುವರಿಯಲಿದೆ. ರಾಮಮಂದಿರವನ್ನು ಗೇಲಿ ಮಾಡುವುದು, ಹಿಂದೂ ದೇವತೆಗಳ ಬಗ್ಗೆ ತಮಾಷೆ ಮಾಡುವುದು, ಬಟ್ಲಾ ಹೌಸ್ ಅನ್ನು ಪ್ರಶ್ನಿಸುವುದು, ಸರ್ಜಿಕಲ್ ಸ್ಟ್ರೈಕ್‌ಗಳನ್ನು ಪ್ರಶ್ನಿಸುವುದು ಆಮ್ ಆದ್ಮಿ ಪಕ್ಷದ ನೀತಿಯಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದರು.

ಕಾಶ್ಮೀರದಲ್ಲಿ ಹಿಂದು ಹತ್ಯೆ ಕುರಿತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅಪಹಾಸ್ಯ ಮಾಡಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಮಾಡಿದೆ. ಈ ಕೂಡಲೇ ಕೇಜ್ರಿವಾಲ್ ಕ್ಷಮೆ ಯಾಚಿಸಬೇಕು. ಎಲ್ಲಿಯವರೆಗೂ ಕ್ಷಮೆ ಕೇಳುವುದಿಲ್ಲವೋ ಅಲ್ಲಿಯ ತನಕ ಯುವ ಮೋರ್ಚಾ ಪ್ರತಿಭಟಿಸಲಿದೆ. ಅರವಿಂದ್ ಕೇಜ್ರಿವಾಲ್ ಒಬ್ಬ ಮಹಾ ಸುಳ್ಳುಗಾರ. ಆತ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ. ಆಮ್ ಆದ್ಮಿ ಪಕ್ಷ ಯಾವಾಗಲು ಭಯೋತ್ಪಾದಕರ ಕಡೆ ಇರುತ್ತದೆ. ಭಯೋತ್ಪಾದಕರಿಂದ ಹತ್ಯೆಯಾದವರ ಬಗ್ಗೆ ಒಂದು ಮಾತೂ ಆಡುವುದಿಲ್ಲ. ಇದು ನಗರ ನಕ್ಸಲರ ತಂತ್ರಗಾರಿಕೆ. ಕೇಜ್ರಿವಾಲ್ ಅವರೇ ನಗರ ನಕ್ಸಲರು ಎಂದು ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದರು.

ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, ಕಾಶ್ಮೀರ್ ಫೈಲ್ಸ್​ ಸಿನಿಮಾದ ಪ್ರಚಾರ ನಡೆಸುತ್ತಿರುವ ಬಿಜೆಪಿ ಅನೇಕ ರಾಜ್ಯಗಳಲ್ಲಿ ಈ ಚಲನಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಿದೆ. ವಿವೇಕ್ ಅಗ್ನಿಹೋತ್ರಿಯವರಿಗೆ ಈ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ. ಆಗ ಎಲ್ಲರೂ ಉಚಿತವಾಗಿ ನೋಡಬಹುದು, ಸಿನಿಮಾವನ್ನು ತೆರಿಗೆ ಮುಕ್ತಗೊಳಿಸುವ ಅವಶ್ಯಕತೆ ಏನಿದೆ? ಎಂದು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದರು.

TV9 Kannada


Leave a Reply

Your email address will not be published.