ಬೆಂಗಳೂರು: 2012ರಲ್ಲಿ ಡಿ.ವಿ ಸದಾನಂದ ಗೌಡ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಜುಲೈ 7 ರಂದು ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದರು. ಅದಾದ 9 ವರ್ಷಗಳ ಬಳಿಕ ಕಾಕತಾಳೀಯವೆಂಬಂತೆ ಇದೇ ದಿನ ಕೇಂದ್ರ ಸಚಿವ ಸಂಪುಟಕ್ಕೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿಎಸ್ ರಾಜೀನಾಮೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಾಗಿದೆ. ಕರ್ನಾಟಕದ ನಾಲ್ವರು ಮೋದಿ ಸಂಪುಟಕ್ಕೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಡಿವಿಎಸ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದೆ ಇದೇ ದಿನ ಮುಖ್ಯಮಂತ್ರಿಯಾಗಿದ್ದ ವೇಳೆ ಕಟೀಲಿಗೆ ಬಂದು ದೇವಿ ದರ್ಶನ ಪಡೆದಿದ್ದರು. ಇದೇ ದಿನ ಇಂದು ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಮೋದಿ ಸಂಪುಟದಲ್ಲಿ ಸದಾನಂದ ಗೌಡರು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ

ಮೋದಿ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿದ್ದ ಡಿವಿಎಸ್, ಇಂದು ಕೇಂದ್ರ ಸಂಪುಟದಲ್ಲಿರುವ ವರಿಷ್ಠರ ಸೂಚನೆಯಂತೆ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡ ಅವರು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರ್ಪಡೆಯಾಗಿದ್ದಾರೆ.

ಕಳೆದ ವಾರವೇ ಡಿವಿಎಸ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಡಿವಿಎಸ್ ಬದಲಿಗೆ ಒಕ್ಕಲಿಗರಾಗಿರುವ ಶೋಭಾ ಕರಂದ್ಲಾಜೆ ಅಥವಾ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದವು.

The post ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ appeared first on Public TV.

Source: publictv.in

Source link