ತುಮಕೂರು: ತಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಇಂಗಿತವನ್ನು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಛಲವಾದಿ ಸಾಂಸ್ಕೃತಿಕ ವೇದಿಕೆಯಿಂದ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ” ಮುಂದಿನ ದಿನದಲ್ಲಿ ದಲಿತರು ಸಿಎಂ ಆಗಬೇಕು ಎಂಬ ಬೇಡಿಕೆ ಬಂದರೂ ಬರಬಹುದು” ಎಂದು ಜಿ.ಪರಮೇಶ್ವರ ಹೇಳಿಕೆ ನೀಡಿದ್ರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಆಧರಿಸಿ ಸ್ವತಃ ರಾಹುಲ್ ಗಾಂಧಿ ತಮ್ಮ ಬಳಿ ಸ್ಪಷ್ಟನೆ ಕೇಳಿದ್ರು.
ಅದಕ್ಕೆ ನಾನು ತಡಮಾಡದೇ ಹೌದು ನಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಬೇಕು ಸರ್ ಎಂದು ಉತ್ತರ ಕೊಟ್ಟಿದ್ದೇನೆ. ಕೇವಲ ಮಂತ್ರಿಯಾಗಲು ನನಗೆ ಇಷ್ಟ ಇಲ್ಲ, ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇದೆ ಎಂದು ಹೇಳಿದ್ದೇನೆ ಎಂದು ವೇದಿಕೆಯಲ್ಲಿ ಮಾತನಾಡಿದ್ದಾರೆ. ನಾನು ಮುಖ್ಯಮಂತ್ರಿ ಆಗ್ತಿನೋ ಇಲ್ವೋ ಗೊತ್ತಿಲ್ಲ. ಆದರೆ ಹೇಳಿಕೆ ನಂತರ ದಲಿತ ಸಿಎಂ ಚರ್ಚೆ ತೀವ್ರವಾಗಿ ನಡೀತಿದೆ ಎಂದರು. ಆದರೂ ಅದೃಷ್ಟದ ತಾಯಿ ಯಾರಿಗೆ ಒಲಿಯುತ್ತಾಳೆ ಕಾದು ನೋಡೋಣ ಎಂದು ಮನದ ಇಂಗಿತವನ್ನು ಸಾರ್ವಜನಿಕವಾಗಿ ಡಾ.ಜಿ.ಪರಮೇಶ್ವರ್ ಹೊರಹಾಕಿದ್ದಾರೆ.