ಸಿಎಂ ಆಗ್ತಾರೆ ಎಂದ ಈಶ್ವರಪ್ಪ ಅಭಿಮಾನಕ್ಕೆ ಋಣಿ: ಸಚಿವ ಮುರುಗೇಶ್ ನಿರಾಣಿ | Murugesh Nirani responds to statement by KS eeshwarappa


ಸಿಎಂ ಆಗ್ತಾರೆ ಎಂದ ಈಶ್ವರಪ್ಪ ಅಭಿಮಾನಕ್ಕೆ ಋಣಿ: ಸಚಿವ ಮುರುಗೇಶ್ ನಿರಾಣಿ

ಮುರುಗೇಶ್ ನಿರಾಣಿ

ಬಾಗಲಕೋಟೆ: ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗುತ್ತಾರೆ ಎಂದ ಸಚಿವ ಕೆ.ಎಸ್.ಈಶ್ವರಪ್ಪ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ. ಅವರು ಅಭಿಮಾನದಿಂದ ಆ ಮಾತು ಹೇಳಿರಬೇಕು. ನಮ್ಮ ಹಿರಿಯ ಸೋದರರಂತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ಸಾಥ್ ಕೊಡುತ್ತೇವೆ. ಪಕ್ಷವು ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ನಿಭಾಯಿಸುತ್ತೇನೆ ಎಂದು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿಯು 150 ಸೀಟ್ ಗೆದ್ದು ಅಧಿಕಾರಕ್ಕೆ ಬರಬೇಕು ಎನ್ನುವುದು ನಮ್ಮ ಗುರಿ. 2024ರ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದ ಸ್ಥಾನಗಳನ್ನು ಗೆಲ್ಲಲು ನಾವೆಲ್ಲರೂ ಗಮನಹರಿಸಬೇಕಿದೆ. ಮುಖ್ಯಮಂತ್ರಿ ನಮಗೆ ಸಹಾಯ, ಸಹಕಾರ ಕೊಡುತ್ತಿದ್ದಾರೆ. ಯಾವುದೇ ರೀತಿಯ ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ. ನಾವು ಒಟ್ಟಾಗಿದ್ದೇ. ಬಿಜೆಪಿ ಒಟ್ಟಾಗಿದೆ ಎಂದು ತಿಳಿಸಿದರು.

2023ರಲ್ಲಿಯಾದರೂ ನಿರಾಣಿ ಮುಖ್ಯಮಂತ್ರಿಯಾಗಬಹುದಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ, ರಾಷ್ಟ್ರದ ನಮ್ಮ ಪಕ್ಷದ ಹಿರಿಯರು ಯಾವ ಜವಾಬ್ದಾರಿ ಕೊಡುತ್ತಾರೋ ಅದನ್ನು ನಿರ್ವಹಿಸಲು ನಾನು ತಯಾರಿದ್ದೇನೆ. ಹಿಂದೆ ನನಗೆ ಯಾವುದೇ ಮಂತ್ರಿಗಿರಿ ಸಿಕ್ಕಿರಲಿಲ್ಲ. ಆಗ ನಾನು ಅಸಮಾಧಾನ ವ್ಯಕ್ತಪಡಿಸದೆ ಕೆಲಸ ಮಾಡಿದೆ. ನಂತರ ಭೂ ವಿಜ್ಞಾನ ಇಲಾಖೆ ಕೊಟ್ಟರು, ಆಗಲು ಚೆನ್ನಾಗಿ ಕೆಲಸ ಮಾಡಿದೆ. ನನ್ನ ಕೆಲಸ ಗುರುತಿಸಿ ಮತ್ತೆ ಕೈಗಾರಿಕಾ ಇಲಾಖೆಯ ಸಚಿವನಾಗಿ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ, ಕೊಡದೆ ಇದ್ದರೂ ಪಕ್ಷದ ಪರವಾಗಿ ನಿಲ್ಲುತ್ತೇನೆ ಎಂದು ನುಡಿದರು.

ರಾಜ್ಯದಲ್ಲೂ ಕೊರೊನಾ ಒಮಿಕ್ರಾನ್​ ಸೋಂಕಿನ ಭೀತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಮೊದಲ ಹಾಗೂ ಎರಡನೇ ಅಲೆ ವೇಳೆ ನಮ್ಮಲ್ಲಿ ಸಂಪನ್ಮೂಲಗಳ ಕೊರತೆಯಿತ್ತು. ಕೊವಿಡ್​ 3ನೇ ಅಲೆಯಲ್ಲಿ 2ನೇ ಅಲೆಯಷ್ಟು ತೀವ್ರತೆ ಇರುವುದಿಲ್ಲ. ಕೊರೊನಾ ಪರಿಸ್ಥಿತಿ ನೋಡಿಕೊಂಡು ತಂಡ ರಚಿಸುತ್ತೇವೆ. ತಂಡದಲ್ಲಿ ಹಿರಿಯ ವೈದ್ಯರು, ವಿಜ್ಞಾನಿಗಳು ಇರಬಹುದು. ವಿದೇಶಗಳಲ್ಲಿ 3ನೇ ಅಲೆ ಬಂದಾಗ ಏನೆಲ್ಲ ಕ್ರಮಕೈಗೊಂಡಿದ್ದರು ಎಂಬುದನ್ನು ಪರಿಶೀಲಿಸಿದ್ದೇವೆ. ಅದೇ ಮಾದರಿಯಲ್ಲಿ ನಮ್ಮಲ್ಲಿಯೂ ಬೆಡ್, ಆಕ್ಸಿಜನ್, ಔಷಧೋಪಚಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯದಲ್ಲಿ 3ನೇ ಅಲೆ ಬಾರದಿರಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್​.ಆರ್​.ಪಾಟೀಲ್ ಬಿಜೆಪಿಗೆ ಸೇರುವ ಮಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಪಾಟೀಲರು ಹಿರಿಯರಿದ್ದಾರೆ. ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು. 24 ವರ್ಷ ರಾಜಕಾರಣ ಮಾಡಿದವರಿಗೆ ಟಿಕೆಟ್ ಸಿಗಬೇಕಿತ್ತು. ಎಸ್.ಆರ್.ಪಾಟೀಲ್ ಅವರಿ​ಗೆ ಎಂಎಲ್​ಸಿ ಟಿಕೆಟ್ ಆದರೂ ಸಿಗಬೇಕಾಗಿತ್ತು. ಅವರಿಗೆ ಟಿಕೆಟ್ ಸಿಗದಿರುವುದು ನಮ್ಮ ಜಿಲ್ಲೆಗೆ ಆ ಪಕ್ಷದಿಂದ ಅನ್ಯಾಯ. ಅವರು ಪ್ರತಿಪಕ್ಷದಲ್ಲಿದ್ದರೂ ನಮಗೆ ಒಳ್ಳೆಯ ಪ್ರಶ್ನೆ ಕೇಳುತ್ತಿದ್ದರು. ಈ ಭಾಗದ ಅಭಿವೃದ್ಧಿ ಆಗುವುದಕ್ಕೆ ಸಶಕ್ತ ನಾಯಕರಾಗಿದ್ದರು. ಕಾಂಗ್ರೆಸ್​ನವರು ಯಾವ ಕಾರಣಕ್ಕೆ ಟಿಕೆಟ್​ ಕೊಟ್ಟಿಲ್ಲವೋ ಗೊತ್ತಿಲ್ಲ. ಮುಂದೆ ಏನು ಮಾಡುತ್ತಾರೆ ಎನ್ನುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.ಇದನ್ನೂ ಓದಿ: ನಮ್ಮ ನಾಯಕ ಮುರುಗೇಶ್ ನಿರಾಣಿ ಆದಷ್ಟು ಬೇಗ ಸಿಎಂ ಆಗುತ್ತಾರೆ: ಕೆಎಸ್ ಈಶ್ವರಪ್ಪ ಹೇಳಿಕೆ
ಇದನ್ನೂ ಓದಿ: ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಸರ್ಕಾರ ಮರೆತಿದೆ ಎಂದ ಜಯಮೃತ್ಯುಂಜಯ ಸ್ವಾಮೀಜಿ, ನೆನಪಿದೆ ಎಂದ ಮುರುಗೇಶ್ ನಿರಾಣಿ

TV9 Kannada


Leave a Reply

Your email address will not be published. Required fields are marked *