– ಜೂನ್ 14ರ ನಂತ್ರ ಹಂತ ಹಂತವಾಗಿ ಅನ್ ಲಾಕ್

ಹುಬ್ಬಳ್ಳಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಚರ್ಚೆಯಿಂದ ಸಿಎಂ ಬಿಎಸ್ ಯಡಿಯೂರಪ್ಪ ಮನಸ್ಸಿಗೆ ಬೇಸರವಾಗಿದೆ. ಅಲ್ಲದೇ ಪದೇ ಪದೇ ನಾಯಕತ್ವ ಬದಲಾವಣೆ ಚರ್ಚೆ ನಡೆಯುವುದರಿಂದ ಸರ್ಕಾರದ ಇಮೇಜಿಗೆ ಧಕ್ಕೆ ಬರಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪರಿಗೆ ವಯಸ್ಸಾದ್ರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ವಯಸ್ಸು ಅಡ್ಡಿ ಬಂದಿಲ್ಲ. ಹೈಕಮಾಂಡ್ ಮಟ್ಟದಲ್ಲೂ ನಾಯಕತ್ವ ಬದಲಾವಣೆ ವಿಚಾರ ಚರ್ಚೆಗೆ ಬಂದಿಲ್ಲ. ಹೀಗಾಗಿ ಪದೇ ಪದೇ ನಾಯಕತ್ವ ಬದಲಾವಣೆ ಪ್ರಶ್ನೆ ಕೇಳಿ ಬರುತ್ತಾ ಇರುವುದರಿಂದ ಬಿಎಸ್‍ವೈ ನಿನ್ನೆ ಆ ರೀತಿ ಹೇಳಿಕೆ ನೀಡಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ರೀತಿಯ ಬದಲಾವಣೆ ಇಲ್ಲವೆಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಎಲ್ಲಿಂದ ಶುರುವಾಗಿದೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಶಾಸಕರ ಸಹಿ ಸಂಗ್ರಹ ವಿಚಾರ ಸಹ ಕೇವಲ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಆದರೆ ಆ ರೀತಿಯ ಯಾವುದೇ ಬದಲಾವಣೆಗಳು ನಡೆದಿಲ್ಲವೆಂದು ಶೆಟ್ಟರ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜೀನಾಮೆಗೆ ಸಿದ್ಧ, ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ

ಹಂತಹಂತವಾಗಿ ಅನ್ ಲಾಕ್..!:
ಜೂನ್ 14 ರಂದು ರಾಜ್ಯದಲ್ಲಿ ಲಾಕಡೌನ್ ಮುಕ್ತಾಯವಾಗಲಿದೆ. ಆದರೆ ಶೇ.5ಕ್ಕಿಂತ ಕಡಿಮೆ ಪಾಸಿಟಿವ್ ರೇಟ್ ಬರೋ ಮುನ್ನ ಅನ್ ಲಾಕ್ ಮಾಡೋದು ಅಸಾಧ್ಯವಾಗುತ್ತೆ. ಹೀಗಾಗಿ ಹಂತಹಂತವಾಗಿ ಅನಲಾಕ್ ಮಾಡಲಾಗುವುದೆಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ತಜ್ಞರು ಮೂರನೇ ಅಲೆ ಬರೋ ಎಚ್ಚರಿಕೆ ನೀಡಿದ್ದಾರೆ. ಆದರೆ ಮೂರನೇ ಅಲೆ ಬರುತ್ತೋ ಇಲ್ವೋ ಗೊತ್ತಿಲ್ಲ. ಏಕಾಏಕಿ ಅನ್‍ಲಾಕ್ ಮಾಡಿದ್ರೆ ಮತ್ತೆ ಕೊರೊನಾ ಹರಡುವ ಸಾಧ್ಯತೆಗಳು ಹೆಚ್ಚಿದೆ. ಹೀಗಾಗಿ ಹಂತಹಂತವಾಗಿ ಅನ್‍ಲಾಕ್ ಮಾಡುವ ಯೋಜನೆ ಇದೆ ಎಂದರು. ಇದನ್ನೂ ಓದಿ: ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ಬಿಎಸ್‍ವೈ ಸಿಎಂ ಆಗಿರೋದು ಅಷ್ಟೇ ಸತ್ಯ: ರೇಣುಕಾಚಾರ್ಯ

The post ಸಿಎಂ ಬದಲಾವಣೆ ಚರ್ಚೆಯಿಂದ ಸರ್ಕಾರದ ಇಮೇಜಿಗೆ ಧಕ್ಕೆ ಬರಲಿದೆ: ಶೆಟ್ಟರ್ appeared first on Public TV.

Source: publictv.in

Source link