ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ; ಹೈಕಮಾಂಡ್​​ ದಿಢೀರ್​ ಭೇಟಿ ಯಾಕೆ..?


ಬೆಂಗಳೂರು: ರಾಜ್ಯದಲ್ಲಿ ಎಲೆಕ್ಷನ್​ ಕ್ಯಾಬಿನೆಟ್​ ರಚನೆ ಮಾಡ್ತಾರೆ ಎಂಬ ಚರ್ಚೆಯ ನಡುವೆ ಸಿಎಂ ಬೊಮ್ಮಾಯಿ ದೆಹಲಿ ಪ್ರಯಾಣ ನಿಗದಿ ಆಗಿದೆ. ಇಂದು ಬೆಳಗ್ಗೆ ಸಿಎಂ ಬೊಮ್ಮಾಯಿ ದೆಹಲಿಗೆ ಹಾರಲಿದ್ದು, 2 ದಿನದ ದೆಹಲಿ ಪ್ರವಾಸದಲ್ಲಿ ಮಹತ್ವದ ಚರ್ಚೆಗಳ ಜೊತೆ ಪ್ರಮುಖ ವ್ಯಕ್ತಿಗಳನ್ನ ಭೇಟಿ ಮಾಡಿ, ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ತುಂಬಿದ ದಿನದಿಂದ ಸಂಪುಟ ಸರ್ಜರಿ ಬಗ್ಗೆ ಭಾರೀ ಕುತೂಹಲ ಮೂಡಿದೆ. ಈಗಾಗಲೇ ಎಲೆಕ್ಷನ್​ ಕ್ಯಾಬಿನೆಟ್​ ರಚನೆ ಮಾಡಲು ಸರ್ಕಾರ ನಿರ್ಧರಿದ್ದು, ಸಚಿವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗ್ತಿದೆ. ಇದರ ನಡುವೆ ಸಿಎಂ ಬೊಮ್ಮಾಯಿ ದೆಹಲಿ ಪ್ರಯಾಣ ಬೆಳಸುತ್ತಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹೈಕಮಾಂಡ್​ ಜೊತೆ ಸಿಎಂ ‘ಹೈ’ ಲೆವೆಲ್​ ಮೀಟಿಂಗ್​
ಕಳೆದ ತಿಂಗಳಿನಿಂದ ಸಿಎಂ ದೆಹಲಿ ಪ್ರಯಾಣ ಒಂದಲ್ಲೊಂದು ಕಾರಣಕ್ಕೆ ಡಿಲೇ ಆಗ್ತಾನೆ ಇತ್ತು. ಈಗ ಅಧಿಕೃತವಾಗಿ ಹೈಕಮಾಂಡ್​ ಭೇಟಿ ಮಾಡಲು ಬೊಮ್ಮಾಯಿ ಡೇಟ್​ ಫಿಕ್ಸ್​ ಆಗಿದ್ದು, ಇಂದೇ ಸಿಎಂ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಬೊಮ್ಮಾಯಿ 2 ದಿನ ಇರಲಿದ್ದು, ಈಗಾಗಲೇ ಎರಡು ದಿನದಲ್ಲಿ ಹೈಕಮಾಂಡ್ ಭೇಟಿ, ಸಂಸದರು, ಸಚಿವರ ಭೇಟಿಗೂ ಸಮಯ ಕೂಡ ನಿಗದಿ ಆಗಿದ್ದು, ಸಿಎಂ ಬೊಮ್ಮಾಯಿ ದೆಹಲಿಯಿಂದ ನಮಗೂ ಸಿಹಿ ಸುದ್ದಿ ತರ್ತಾರೆ ಅಂತ ಸಚಿವ ಆಕಾಂಕ್ಷಿಗಳು ಬಕ ಪಕ್ಷಿಗಳಂತೆ ಕಾಯ್ತಿದ್ದಾರೆ.

2 ದಿನದ ‘ಸಿಎಂ’ ಕಾರ್ಯಕ್ರಮಗಳೇನು?
ದೆಹಲಿಯಲ್ಲಿರುವ ರಾಜ್ಯದ ಸಂಸದರು ಹಾಗೂ ರಾಜ್ಯಸಭಾ ಸದಸ್ಯರನ್ನ ಭೇಟಿ ಮಾಡಲಿದ್ದು, ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ರಾಜ್ಯಕ್ಕೆ ಸಿಕ್ಕಿರುವ ಅನುದಾನಗಳ ಹಂಚಿಕೆ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್​ಟಿ ಪರಿಹಾರದ ಬಗ್ಗೆ ಮಾತುಕತೆ ನಡೆಸಲಿದ್ದು, ಜಿಎಸ್​ಟಿ ಪರಿಹಾರ ಹಣ ಬಿಡುಗಡೆ ಬಗ್ಗೆ ಕೇಂದ್ರ ಹಣಕಾಸು ಇಲಾಖೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಇನ್ನೂ ಹೈಕಮಾಂಡ್ ನಾಯಕರ ಭೇಟಿಗೂ ಸಿಎಂ ಸಿದ್ಧತೆ ಮಾಡಿಕೊಂಡಿದ್ದು, ನಿಗಮ ಮಂಡಳಿ ನೇಮಕಾತಿ ಬಗ್ಗೆ ಈಗಾಗಲೇ ಕಟೀಲ್ ಜೊತೆ ಚರ್ಚೆ ನಡೆಸಿದ್ದು, ಸದ್ಯ ಅಂತಿಮಗೊಂಡಿರುವ ಆ ಪಟ್ಟಿಗೆ ಹೈಕಮಾಂಡ್​ನಿಂದ ಅನುಮೋದನೆ ಪಡೆಯುವುದು. ಹಾಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ನಡ್ಡಾ ಭೇಟಿ ಮಾಡಿ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅವಕಾಶವನ್ನ ಬೊಮ್ಮಾಯಿ ಕೇಳಲಿದ್ದಾರೆ.

ಸಿಎಂ ದೆಹಲಿ ಪ್ರವಾಸದ ವೇಳೆ ಅಂತರ್​ರಾಜ್ಯ ಜಲವಿವಾದದ ಬಗ್ಗೆ ವಕೀಲರ ತಂಡದ ಜೊತೆ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಜಲವಿವಾದದ ಯೋಜನೆಗಳ ಬಗ್ಗೆ ಮುಂದೆ ಸರ್ಕಾರ ತೆಗೆದುಕೊಳ್ಳುವ ನಿರ್ಣಯಗಳ ಬಗ್ಗೆ ಮಹತ್ವದ ಚರ್ಚೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ. ಬೊಮ್ಮಾಯಿಗೆ ದೆಹಲಿಯ ಪ್ರಯಾಣ ನಿಗದಿ ಆಗ್ತಿದ್ದಂತೆಯೇ, ಬೊಮ್ಮಾಯಿ ಮಾಜಿ ಸಿಎಂ ಬಿಎಸ್​ವೈರನ್ನ ಭೇಟಿ ಮಾಡಿ ಒಂದು ಗಂಟೆಗಳ ಕಾಲ ಮಹತ್ವದ ಚರ್ಚೆ ನಡೆಸಿದ್ದಾರೆ. ಇಷ್ಟು ದಿನ ದೆಹಲಿಗೆ ಹೋಗಲು ತುದಿಗಾಲಿನಲ್ಲಿ ಕಾಯ್ತಿದ್ದ ಸಿಎಂಗೆ ಕೊನೆಗೂ ಅವಕಾಶ ಸಿಕ್ಕಿದೆ. ಈ 2 ದಿನದ ಪ್ರವಾಸದಲ್ಲಿ ಚರ್ಚೆ ನಡೆಸಿ, ಹೈಕಮಾಂಡ್​ನಿಂದ ರಾಜ್ಯಕ್ಕೆ ಹಾಗೂ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ಕೊಡ್ತಾರ ಅನ್ನೋದೇ ಸದ್ಯದ ಕುತೂಹಲ.

News First Live Kannada


Leave a Reply

Your email address will not be published.