ಶಿಕ್ಷಣ, ಬ್ಯಾಂಕಿಂಗ್ ಹಾಗೂ ಕೈಗಾರಿಕೆ, ಸೃಜನಶೀಲತೆ, ಉದ್ಯಮಶೀಲತೆ ತವರು ಕರಾವಳಿ ಈಗ ಕೊಲೆಗಳ ಆಡಂಬೋಲವಾಗಿದೆ. ಕರಾವಳಿಯಲ್ಲಿ ಕಳೆದ 10 ದಿನಗಳಲ್ಲಿ ಮೂರು ಕೊಲೆಯಾಗಿವೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ
ಬೆಂಗಳೂರು: ನಿನ್ನೆ (ಜುಲೈ 28) ಸುರತ್ಕಲ್ನಲ್ಲಿ ನಡೆದ ಫಾಜಿಲ್ ಕೊಲೆ ಖಂಡಿಸಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಟ್ವೀಟ್ ಮಾಡಿದ್ದಾರೆ. ಸಿಎಂ ಬೊಮ್ಮಾಯಿಯವರು (CM Bommai) ಮಂಗಳೂರಿನಲ್ಲಿ ಇದ್ದಾಗಲೇ ಮೂರನೇ ಕೊಲೆಯಾಗಿದೆ. ಅಷ್ಟರಲ್ಲಿ ಸಿಎಂ ಸಾಹೇಬರು ಜಿಲ್ಲೆಯಿಂದ ಕಾಲ್ಕಿತ್ತಿದ್ದಾರೆ. ಅಲ್ಲೇ ಉಳಿದು ಪರಿಸ್ಥಿತಿ ಅವಲೋಕಿಸಿ, ಹಂತಕರನ್ನ ಬಂಧಿಸುವಂತೆ ಕಟ್ಟಾಜ್ಞೆ ಮಾಡುವ ಧೈರ್ಯ ತೋರಲಿಲ್ಲ. ಅವರ ಅಧೈರ್ಯಕ್ಕೆ ಕಾರಣವೇನು?, ಕಾಣದ ಕೈಗಳ ಒತ್ತಡವೇನಾದರೂ ಉಂಟಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕರಾವಳಿಯಲ್ಲಿ ಸರಣಿ ಹತ್ಯೆಗಳನ್ನ ಖಂಡಿಸಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕರಾವಳಿ ಶಿಕ್ಷಣದ ಕಾಶಿ, ಪ್ರಾಕೃತಿಕ ಸೌಂದರ್ಯದ ಬೀಡು. ದೇಗುಲಗಳ ಪುಣ್ಯನೆಲ, ಪ್ರವಾಸೋದ್ಯಮದಲ್ಲಿ ರಾಜ್ಯದ ಕೀರ್ತಿಕಳಸ. ಇಂಥ ನೆಲದಲ್ಲಿ ದಿನಕ್ಕೊಂದು ಹತ್ಯೆ, ಕೊಲೆಗಳನ್ನ ಹತ್ತಿಕ್ಕುವ ಬದಲು ಸಿಎಂ ಬೊಮ್ಮಾಯಿಯವರು ಬುಲ್ಡೋಜರ್ ಬಗ್ಗೆ ಮಾತಾಡ್ತಿದ್ದಾರೆ. ಕರಾವಳಿ ಮತ್ತು ಕರ್ನಾಟಕ ಜಂಗಲ್ ರಾಜ್ ಮಾಡುವ ಹುನ್ನಾರವಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.