ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ 100 ದಿನ ಪೂರೈಸಿದೆ. ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಿಎಂ ಬೊಮ್ಮಾಯಿ ನಡೆಗೆ ಆಪ್ತ ಬಳಗದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಯಿತು. ನಾನೇ ಬಸವರಾಜ ಬೊಮ್ಮಾಯಿಗೆ ನಾಯಕತ್ವವನ್ನು ಒಪ್ಪಿ ಮನಸಾರೆ ಕೊಟ್ಟಿದ್ದೇನೆ. ಈಗ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ 100 ದಿನವಾಗಿದೆ. ನಮ್ಮ ಸರ್ಕಾರ 100 ದಿನ ಪೂರೈಕೆ ಮಾಡಿದಾಗ ಎಂತಹ ಕಾರ್ಯಕ್ರಮ ಮಾಡಿದ್ದೇವು. ಈಗಲೂ ಅಂತಹ ಒಂದು ಕಾರ್ಯಕ್ರಮ ಮಾಡಬೇಕು ಅಲ್ಲವೇ? 100 ದಿನ ಪೂರೈಕೆ ಮಾಡಿದ ಸಂದರ್ಭದಲ್ಲಿ ಉಪ-ಚುನಾವಣೆಯ ಫಲಿತಾಂಶ ಬಂತು ಎಂದು ಕಾರ್ಯಕ್ರಮವನ್ನೇ ಮಾಡಲಿಲ್ಲ. ಹೀಗಾದ್ರೆ, ಜನರಿಗೆ ನಮ್ಮ ಸರ್ಕಾರದ ಸಾಧನೆ ಗೊತ್ತಾಗುವುದಾದ್ರೂ ಹೇಗೆ?
ಕಳೆದ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ ಕೋವಿಡ್-19 ನಂತಹ ಮಾರಕ ಕಾಯಿಲೆ ಎಂಟ್ರಿಯಾಗುತ್ತಿತ್ತು. ಅಂತಹ ಸಂದರ್ಭದಲ್ಲಿಯೂ ಸರ್ಕಾರದ 100 ದಿನದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದ್ದೇವೆ. ನವೆಂಬರ್ 4ಕ್ಕೆ ಸರ್ಕಾರಕ್ಕೆ 100 ದಿನ ಪೂರೈಕೆಯಾಗಿದೆ. ಈವರೆಗೂ ಅದರ ಬಗ್ಗೆ ಸರ್ಕಾರ ತುಟಿಬಿಚ್ಚುತ್ತಿಲ್ಲ. ಈಗಾಗಲೇ ಕಾಂಗ್ರೆಸ್‌ನ ನಾಯಕರು ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಲಾರಂಭಿಸಿದ್ದಾರೆ. ಅದ್ಯಾವುದೋ ಬಿಟ್ ಕಾಯಿನ್ ಅಂತಾರೆ, ಹಾನಗಲ್ ಚುನಾವಣೆ ಸೋಲು, ಇದೆಲ್ಲಾ ಏನೇ ಇರಲಿ. ಸರ್ಕಾರ 100 ದಿನ ಪೂರೈಕೆ ಮಾಡಿರುವುದು ಒಂದು ಸಾಧನೆ. ಇದನ್ನು ಮೊದಲು ಮಾಡಬೇಕಿತ್ತು ಎಂಬುವುದು ಬಿಎಸ್ವೈ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಸರ್ಕಾರದ ಸಾಧನೆ ಪ್ರಚಾರ ಸರಿಯಾಗಿ ಆಗದೇ ಹೋದರೆ, ಚುನಾವಣೆಗಳಲ್ಲಿ ಗೆಲ್ಲುವುದಾದ್ರೂ ಹೇಗೆ? ಮುಖ್ಯಮಂತ್ರಿಗಳು ದೆಹಲಿ ಪ್ರಯಾಣ ಮುಗಿಸಿ ಬಂದ ಕೂಡಲೇ ಮೊದಲು 100 ದಿನದ ಕಾರ್ಯಕ್ರಮ ಮಾಡಿಸಬೇಕು. ಇಲ್ಲವಾದ್ರೆ, ವಿಧಾನಪರಿಷತ್ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಎಂದು ಆಪ್ತ ಬಳಿ ತಿಳಿಸಿರುವ ಯಡಿಯೂರಪ್ಪ ತಿಳಿಸಿದ್ದಾರಂತೆ.