ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ‘ಅವರು ರಾಜೀನಾಮೆ ನೀಡುತ್ತಾರೆ’ ಅಥವಾ ‘ಸ್ಥಾನ ತ್ಯಜಿಸುತ್ತಾರೆ’ ಎಂದು ಅರ್ಥೈಸುವುದು ಬೇಡ. ನಮ್ಮದು ಶಿಸ್ತಿನ ಪಕ್ಷ ಎಂಬ ಸಂದೇಶವನ್ನಷ್ಟೇ ಅವರು ಪ್ರತಿಪಕ್ಷಗಳಿಗೆ ರವಾನಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

ಲಗ್ಗೆರೆಯಲ್ಲಿ ಭಾನುವಾರ ಶಾಸಕ ಮುನಿರತ್ನ ಅವರು ಆಯೋಜಿಸಿದ್ದ ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಒಂದು ಲಕ್ಷ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು.

ಸಿಎಂ ಯಾವ ದೃಷ್ಟಿಯಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರು ನಮ್ಮ ಅಗ್ರಮಾನ್ಯ ನಾಯಕರು. ನಾನು ಯಾವುದೇ ಕುರ್ಚಿಗೆ ಅಂಟಿಕೊಳ್ಳಲ್ಲ, ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ನಿರ್ಣಯಕ್ಕೆ ನಾನು ಬದ್ಧವಾಗಿರುತ್ತೇನೆ ಅಂತ ಅವರು ಹೇಳಿದ್ದಾರೆ. ಹೀಗೆ ಹೇಳಿದ ತಕ್ಷಣ ಅವರು ಮುಖ್ಯಮಂತ್ರಿ ಹುದ್ದೆ ತ್ಯಜಿಸುತ್ತಾರೆಂದು ಅರ್ಥವಲ್ಲ. ಪಕ್ಷಕ್ಕೆ ಬದ್ಧರಾಗಿರುವ ಸಂದೇಶವನ್ನಷ್ಟೇ ಅವರು ಪ್ರತಿಪಕ್ಷಕ್ಕೆ ನೀಡಿದ್ದಾರೆ ಎಂದರು.

ಅವರು ಈಗ ನಮ್ಮ ಮುಖ್ಯಮಂತ್ರಿಗಳಾಗಿದ್ದಾರೆ. ಮುಖ್ಯಮಂತ್ರಿಗಳಾಗಿಯೇ ಮುಂದುವರಿಯುತ್ತಾರೆ. ಈ ಬಗ್ಗೆ ಯಾವ ಗೊಂದಲ ಅಥವಾ ಅನುಮಾನ ಬೇಡ ಎಂದು ಡಾ.ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು. ಬಿಜೆಪಿ ಕೇಡರ್ ಆಧಾರಿತ ಪಕ್ಷ, ಹೀಗಾಗಿ ಇಂಥ ವಿಷಯಗಳಿಗೆ ಹೆಚ್ಚು ಮಹತ್ವ ಕೊಡುವ ಪದ್ಧತಿ ನಮ್ಮಲ್ಲಿಲ್ಲ ಎಂದರು.

The post ಸಿಎಂ ರಾಜೀನಾಮೆ ಇಲ್ಲ, ಅವರ ಹೇಳಿಕೆಯ ಅರ್ಥ ಸ್ಥಾನ ತ್ಯಜಿಸುತ್ತಾರೆಂದಲ್ಲ: ಅಶ್ವಥ್ ನಾರಾಯಣ್ appeared first on Public TV.

Source: publictv.in

Source link