ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನ ಬಳಿಕ ಸಿಎಂ ಬಿ.ಎಸ್​​. ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಿಂದಲೂ ಕೂಡ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆ ನಡೆಯುತ್ತಿದೆ. ಆದರೆ ಪ್ರತಿ ಬಾರಿ ನಾಯಕತ್ವದ ಬದಲಾವಣೆ ವಿಚಾರ ಮುನ್ನೆಲೆಗೆ ಬಂದರೂ ಮೌನವಾಗಿಯೇ ತಮ್ಮ ಕಾರ್ಯವನ್ನು ಮುಂದುವರಿಸುತ್ತಿದ್ದ ಸಿಎಂ, ಇದೇ ಮೊದಲ ಬಾರಿಗೆ ಹೈಕಮಾಂಡ್​ ನಿರ್ದೇಶನ ನೀಡಿದ್ರೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.

ಇತ್ತ ಸಿಎಂ ಹೇಳಿಕೆ ಬೆನ್ನಲ್ಲೇ ರಾಜ್ಯ ಸಚಿವರು ಸೇರಿದಂತೆ ಹಲವು ಬಿಜೆಪಿ ನಾಯಕರು ಬಿಎಸ್​​ವೈ ಪರ ಬ್ಯಾಟಿಂಗ್​ ಮಾಡಿದ್ದಾರೆ. ಯಾರು? ಏನು ಹೇಳಿದ್ರು..? ಎಂದು ನೋಡುವುದಾದರೆ…

ಸಿಎಂ ಯಡಿಯೂರಪ್ಪ ಅವರಿಗೆ ನೋವಾಗಿದ್ದಂತಿದೆ..


ರಾಜ್ಯದಲ್ಲಿ ಕೆಲವು ದಿನಗಳಿಂದ ಹಲವು ವಿದ್ಯಮಾನಗಳು ನಡೆಯುತ್ತಿವೆ. ನಾಯಕತ್ವ ಬದಲಾವಣೆ, ದೆಹಲಿ ಪಯಣದ ಸುದ್ದಿ ಪದೇ ಪದೇ ನಡೆಯುತ್ತಿದೆ. ನಾವೇ ನಾಯಕರು ಎಂದು ಬಿಂಬಿತವಾಗುತ್ತಿದೆ. ಇದರಿಂದ ಸಹಜವಾಗಿಯೇ ಸಿಎಂ ಯಡಿಯೂರಪ್ಪ ಅವರಿಗೆ ನೋವಾಗಿದಂತಿದೆ. ಹಾಗಾಗಿಯೇ ಇಂದು ಈ ಮಾತು ಹೇಳಿರಬಹುದು. ಕೊರೊನಾ ಸಂದರ್ಭದಲ್ಲಿ ನಿರಂತರವಾಗಿ ಸಿಎಂ ರಾತ್ರಿ, ಹಗಲು ಎನ್ನದೇ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ನಾಯಕರು ನಾಯಕತ್ವ ಬದಲಾವಣೆ ಇಲ್ಲಾ ಅಂತಾ ಹೇಳಿದ್ದಾರೆ. ನಾವೆಲ್ಲಾ ಸಿಎಂ ಜೊತೆ ಇದ್ದೇವೆ ಎಂದು ಕಂದಾಯ ಸಚಿವ ಆರ್​.ಅಶೋಕ್ ಹೇಳಿದರು.

ಅಪಸ್ವರ ಎತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು


ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ಸಿಕ್ಕಿದೆ. ಆದರೆ ಅಪಸ್ವರ ಎತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೊರೊನಾ ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡ್ತಿದ್ದಾರೆ. ಜನರ ಸಂಕಷ್ಟಕ್ಕೆ ಸಿಎಂ ಸ್ಪಂದಿಸ್ತಿದ್ದಾರೆ. ಆದರೆ ನಾಯಕತ್ವ ಬದಲಾವಣೆಯ ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ. ನಾವು ಅವರ ಜೊತೆ ಮಾತನಾಡುವಾಗ ನೋವು ಗೊತ್ತಾಯ್ತು. ಆದರೆ ಯಾವುದೇ ಗೊಂದಲ ಹೈಕಮಾಂಡ್ ನಲ್ಲಿ‌ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಕಾಂಗ್ರೆಸ್​ ಬಿಟ್ಟು ಬಂದವರು


ಯಡಿಯೂರಪ್ಪ ಬಿಜೆಪಿಯ ಅಗ್ರಗಣ್ಯ ನಾಯಕ. ರಾಜ್ಯದಲ್ಲಿ ದಿ. ಅನಂತ್ ಕುಮಾರ್, ಯಡಿಯೂರಪ್ಪರು ಪಕ್ಷ ಕಟ್ಟಿ ಹೋರಾಟ ಮಾಡಿದವರು. ನಾವು ಕಾಂಗ್ರೆಸ್ ನಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಬಂದವರು. ನಮ್ಮ ನಿಷ್ಠೆ ನಮ್ಮ ನಾಯಕರಿಗೆ, ಮುಖ್ಯಮಂತ್ರಿಗಳಿಗೆ, ಬಿಜೆಪಿಗೆ. ಪಕ್ಷ ಏನು ಹೇಳಿದ್ರೂ ಮಾಡ್ತೇವೆ ಎನ್ನುವ ಸಂದೇಶ ನೀಡಿದ್ದಾರೆ. ಇದಕ್ಕೆ ವಿಶೇಷ ಅರ್ಥ ಬೇಡ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ
ಇತ್ತೀಚೆಗೆ ನಾಯಕತ್ವ ಬದಲಾವಣೆ ವಿಚಾರ ಮಾಧ್ಯಮಗಳಲ್ಲಿ ಪದೇ ಪದೇ ಚರ್ಚೆಗೆ ಬಂದ ಹಿನ್ನೆಲೆ ಈ ರೀತಿ‌ ಹೇಳಿರಬಹುದು. ಸಿಎಂ ಕೋವಿಡ್ ಸಮಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಮರ್ಥರಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಆದರ್ಶ


ನಾವು ಪಕ್ಷದ ಸೂಚನೆ ಮೇರೆಗೆ ಅಧಿಕಾರ ಹಿಡಿದವರು. ನಮಗೆಲ್ಲರಿಗೂ ಹಿರಿಯರು ಯಡಿಯೂರಪ್ಪ, ಅವರೇ ನಮಗೆಲ್ಲರಿಗೂ ಆದರ್ಶ. ಅವರು ಹೇಳಿರುವುದು ಪಾರ್ಟಿ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ಆದರೆ ಪಕ್ಷದಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಷಯ ಅಪ್ರಸ್ತುತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದ್ದಾರೆ.

The post ಸಿಎಂ ರಾಜೀನಾಮೆ ಹೇಳಿಕೆ: ಬಿಎಸ್​ವೈ ಪರ ಪಕ್ಷದ ಸಚಿವರ ಬ್ಯಾಟಿಂಗ್.. ಯಾರು ಏನು ಹೇಳಿದ್ರು..? appeared first on News First Kannada.

Source: newsfirstlive.com

Source link