ಐಪಿಎಲ್-15ರ ಸಿದ್ಧತೆಗಳು ಶುರುವಾಗಿವೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಗೆ ರಿಟೈನ್ ಪ್ರಕ್ರಿಯೆಯ ರೂಪುರೇಷೆಗಳ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಯಾವ ತಂಡ ಯಾರನ್ನು ಉಳಿಸಿಕೊಳ್ಳಲಿದೆ, ಯಾರನ್ನು ಬಿಡುಗಡೆ ಮಾಡಲಿದೆ ಎಂಬ ಚರ್ಚೆಗಳು ಕೂಡ ಶುರುವಾಗಿವೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಹೇಂದ್ರ ಸಿಂಗ್ ಧೋನಿ ರಿಲೀಸ್ ಆಗಲಿದ್ದಾರೆ ಎಂಬ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಧೋನಿ ಮುಂದಿನ ಹರಾಜಿಗಾಗಿ ಹೆಸರು ನೊಂದಾಯಿಸಿಕೊಳ್ಳಲು ಬಯಸಿದ್ದಾರೆ ಎಂದು ಸಿಎಸ್‌ಕೆ ತಂಡದ ಮಾಲೀಕರಾದ ಎನ್. ಶ್ರೀನಿವಾಸನ್ ತಿಳಿಸಿದ್ದಾರೆ.
ಧೋನಿ ಸಿಎಸ್‌ಕೆ ತಂಡದಲ್ಲಿ ರಿಟೈನ್ ಆಗಲು ಇಚ್ಛಿಸುತ್ತಿಲ್ಲ. ಅವರ ಬದಲಿಗೆ ಇತರೆ ಆಟಗಾರರನ್ನು ಉಳಿಸಿಕೊಳ್ಳಲು ಅವರು ತಿಳಿಸಿದ್ದಾರೆ ಎಂದು ಸಿಎಸ್‌ಕೆ ಮಾಲೀಕರು ಹೇಳಿದ್ದಾರೆ. ಎಂಎಸ್ ಧೋನಿ ತುಂಬಾ ನ್ಯಾಯಯುತ ವ್ಯಕ್ತಿ. ಅವರು ಈ ಬಾರಿ ಸಿಎಸ್‌ಕೆ ತಂಡದಿಂದ ಹೊರಬರಲು ಬಯಸಿದ್ದಾರೆ. ಏಕೆಂದರೆ ಅವರನ್ನು ಉಳಿಸಿಕೊಂಡರೆ ಸಿಎಸ್‌ಕೆ ತಂಡ ಹೆಚ್ಚಿನ ಮೊತ್ತ ಕಳೆದುಕೊಳ್ಳಲಿದೆ. ಹೀಗಾಗಿ ಅವರ ಮೇಲೆ ಹೆಚ್ಚಿನ ಮೊತ್ತ ವ್ಯಯಿಸಲು ಧೋನಿ ಬಯಸುತ್ತಿಲ್ಲ ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.